
ಬೆಂಗಳೂರು: ಶಿಕ್ಷಣ ತಜ್ಞ, ವಿಚಾರವಾದಿ ಎಚ್.ನರಸಿಂಹಯ್ಯ (ಎಚ್‌ಎನ್) ಅವರ ವಿಚಾರವಂತಿಕೆಯನ್ನು ನ್ಯಾಷನಲ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಯುವಜನರು ಅಳವಡಿಸಿಕೊಳ್ಳಬೇಕು ಎಂದು ಡಾ.ಎಚ್.ಎನ್.ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಹೇಳಿದರು.
ಎಚ್‌ಎನ್ ಅವರ ನೆನಪಿನಲ್ಲಿ ಆರಂಭವಾಗಿರುವ ‘ಡಾ.ಎಚ್.ಎನ್.ಗ್ಲೋಬಲ್ ಫೋರಂ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಎಚ್ಎನ್ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಗೌರಿಬಿದನೂರಿನ ಎಇಎಸ್ ನ್ಯಾಷನಲ್ ಕಾಲೇಜು, ಬಾಗೇಪಲ್ಲಿ ನ್ಯಾಷನಲ್ ಕಾಲೇಜು, ಬೆಂಗಳೂರಿನ ಜಯನಗರ, ಬಸವನಗುಡಿ ನ್ಯಾಷನಲ್ ಕಾಲೇಜುಗಳ ಹಳೆಯ ವಿದ್ಯಾರ್ಥಿಗಳು, ನಿವೃತ್ತ ಪ್ರಾಧ್ಯಾಪಕರು ಭಾಗವಹಿಸಿದ್ದರು.
ಗ್ರಾಮೀಣ ಪ್ರದೇಶದಲ್ಲಿ ಪ್ರೌಢಶಾಲೆ, ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಎಚ್.ನರಸಿಂಹಯ್ಯ ಅವರು ಲಕ್ಷಾಂತರ ಮಂದಿ ವಿದ್ಯಾವಂತರಾಗಲು ಕಾರಣಕರ್ತರಾದರು ಎಂದು ಸ್ಮರಿಸಿದ ನಿವೃತ್ತ ಪ್ರಾಧ್ಯಾಪಕ ಕೆ.ಎನ್.ವೆಂಕಟಕೃಷ್ಣರಾವ್ ಅವರು ಎಚ್‌ಎನ್, ವಿಶ್ವೇಶ್ವರಯ್ಯ ಅವರಂಥ ಮಹನೀಯರ ವಿಚಾರಗಳನ್ನು ಪಠ್ಯಗಳನ್ನಾಗಿ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಎಚ್‌ಎನ್ ಅವರು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ವಿಚಾರವಾದ, ವೈಜ್ಞಾನಿಕ ಮನೋಭಾವಕ್ಕೆ ಉತ್ತೇಜನ ನೀಡಿದರು. ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ, ಸಾಮಾಜಿಕ ಜವಾಬ್ದಾರಿ ಬೆಳೆಸುವುದು ಅತಿ ಮುಖ್ಯವಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ನಗರಗೆರೆ ರಮೇಶ್ ಹೇಳಿದರು.
ಎಚ್‌ಎನ್ ಗ್ಲೋಬಲ್ ಫೋರಂ ಮೂಲಕ ಹಿಂದುಳಿದ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಕೌಶಲ, ಸ್ಪರ್ಧಾತ್ಮಕತೆ ಬೆಳೆಸುವುದು ಸೇರಿದಂತೆ ವಿವಿಧ ರೀತಿಯ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ತಿಳಿಸಿದ ಫೋರಂ ಸಂಚಾಲಕರಾದ ಆರ್.ಕೆ.ಮಂಜುನಾಥ್, ತಮ್ಮ ಕಾರ್ಯಚಟುವಟಿಕೆಗಳ ನೀಲನಕ್ಷೆಯನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಸಿ.ನಾಗರಾಜ್, ಪ್ರಾಧ್ಯಾಪಕ ಎಸ್.ಕೆ.ನಾರಾಯಣ್ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು, ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.