ADVERTISEMENT

ತೊಗರ್ಸಿ: ಕದಂಬರ ಕಾಲದ ದೇವಾಲಯದ ತಳಪಾಯ ಪತ್ತೆ

ಸಂಶೋಧಕ ರಮೇಶ್‌ ಬಿ. ಹಿರೇಜಂಬೂರು ಕ್ಷೇತ್ರ ಕಾರ್ಯದ ವೇಳೆ ಪತ್ತೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 0:14 IST
Last Updated 3 ಆಗಸ್ಟ್ 2020, 0:14 IST
ತೊಗರ್ಸಿ ಗ್ರಾಮದಲ್ಲಿ ಪತ್ತೆಯಾದ ಕದಂಬರ ಕಾಲದ ದೇವಾಲಯದ ಕುರುಹು
ತೊಗರ್ಸಿ ಗ್ರಾಮದಲ್ಲಿ ಪತ್ತೆಯಾದ ಕದಂಬರ ಕಾಲದ ದೇವಾಲಯದ ಕುರುಹು   

ಶಿರಾಳಕೊಪ್ಪ: ಇಲ್ಲಿಗೆ ಸಮೀಪದ ತೊಗರ್ಸಿ ಗ್ರಾಮದ ಹಳೆ ತೊಗರ್ಸಿ ಪ್ರದೇಶದಲ್ಲಿ 3-4ನೇ ಶತಮಾನದ ದೇವಾಲಯದ ತಳಪಾಯ ಮತ್ತು ರಾಷ್ಟ್ರಕೂಟರ ಅವಧಿಯ ನಾಲ್ಕು ಗೋಸಾಸ ಕಲ್ಲುಗಳನ್ನು ಇತಿಹಾಸ ಸಂಶೋಧಕ ರಮೇಶ್‌ ಬಿ. ಹಿರೇಜಂಬೂರು ಅವರು ಕ್ಷೇತ್ರ ಕಾರ್ಯ ಕೈಗೊಂಡ ವೇಳೆ ಪತ್ತೆ ಮಾಡಿದ್ದಾರೆ.

ಹಳೆ ತೊಗರ್ಸಿ ಪ್ರದೇಶದ ಕೆರೆಯದಂಡೆಯಲ್ಲಿ ಒಂದು ಪ್ರಾಚೀನ ಶಿವಲಿಂಗವಿದ್ದು, ಅದರ ಕೆಳಭಾಗದಲ್ಲಿ 3-4ನೇ ಶತಮಾನದ ಸುಟ್ಟ ಇಟ್ಟಿಗೆಗಳಿಂದ ರಚಿಸಿರುವ ಬೃಹತ್ ದೇವಾಲಯದ ತಳಪಾಯ ಗೋಚರಿಸಿದೆ. ದೇವಾಲಯದ ಉತ್ತರ ದಿಕ್ಕಿನಲ್ಲಿ ಕೆರೆ
ಇದ್ದು ಇತ್ತೀಚಿಗೆ ಈ ದಂಡೆಯ ಮಣ್ಣನ್ನು ಸ್ಥಳೀಯರು ಗೃಹ ಕಾರ್ಯಗಳಿಗೆ ಜೆಸಿಬಿ ಯಂತ್ರಗಳಿಂದ ಅಗೆದಿದ್ದರು.

ಈ ರಚನೆಯು ಸುಮಾರು ಅರವತ್ತು ಅಡಿ ಉದ್ದವಿದ್ದು, ಅಂದಿನ ದೇವಾಲಯದ ವಿಶಾಲ ವಿಸ್ತೀರ್ಣವನ್ನುಕಾಣಬಹುದಾಗಿದೆ. ಸುಮಾರು ನಾಲ್ಕು ಅಡಿಗಳ ಕೆಳಗೆ ಈ ಇಟ್ಟಿಗೆಗಳ ತಳಪಾಯವಿದೆ.

ADVERTISEMENT

‘ಈ ಸ್ಥಳದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಮತ್ತು ಅಧ್ಯಯನಗಳು ನಡೆದಲ್ಲಿ ಇತಿಹಾಸದ ಹೊಸ ಸಂಗತಿಗಳು ಹೊರಬರುವ ಸಾಧ್ಯತೆಗಳಿವೆ’ ಎಂದು ರಮೇಶ್‌ ಹಿರೇಜಂಬೂರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.