ADVERTISEMENT

ತಾಳಿಕಟ್ಟೆ ಸಂದೀಪನಿ ಶಾಲೆಯ ಶುಲ್ಕ ವಿವಾದ: ಮಕ್ಕಳಿಗೆ ಬಿಸಿಲಿನ ಬರೆ!

ಹೊಳಲ್ಕೆರೆ: ತಾಳಿಕಟ್ಟೆ ಸಂದೀಪನಿ ಶಾಲೆಯ ಆಡಳಿತ ಮಂಡಳಿ ಮೇಲೆ ಪೋಷಕರ ಆರೋಪ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 19:18 IST
Last Updated 21 ಫೆಬ್ರುವರಿ 2019, 19:18 IST
ಎಂ.ಜೆ.ನಾಗರಾಜ್
ಎಂ.ಜೆ.ನಾಗರಾಜ್   

ಹೊಳಲ್ಕೆರೆ: ಹಣ ಕಟ್ಟಿದ್ದರೂ ಶುಲ್ಕ ಪಾವತಿಸಿಲ್ಲ ಎಂದು 40 ಮಕ್ಕಳನ್ನು ಬಿಸಿಲಿನಲ್ಲಿ ಏಳು ತಾಸು ಹೊರಗೆ ನಿಲ್ಲಿಸಿದ್ದಾರೆ ಎಂದು ತಾಳಿಕಟ್ಟೆಯ ಸಂದೀಪನಿ ಶಾಲೆಯ ವಿರುದ್ಧ ಪೋಷಕರು ಆರೋಪಿಸಿದರು.

ಪೋಷಕರ ದೂರಿನನ್ವಯ ಬಿಇಒ ಜಗದೀಶ್ವರ ಗುರುವಾರ ಶಾಲೆಗೆ ಭೇಟಿ ನೀಡಿದ ನಂತರ ವಿದ್ಯಾರ್ಥಿಗಳನ್ನು ಶಾಲೆಯೊಳಗೆ ಪ್ರವೇಶ ನೀಡಲಾಯಿತು ಎಂದು ತಿಳಿದುಬಂದಿದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಶಿವಪುರ ಗ್ರಾಮದ ಪೋಷಕ ಎಂ.ಜೆ.ನಾಗರಾಜ್, ‘ತಾಳಿಕಟ್ಟೆಯ ಸಂದೀಪನಿ ಶಾಲೆಯಲ್ಲಿ ನನ್ನ ಮಗ 6ನೇ ತರಗತಿ ಹಾಗೂ ಮಗಳು 2ನೇ ತರಗತಿಯಲ್ಲಿ ಓದುತ್ತಿದ್ದಾರೆ. ಶಾಲೆಯವರು ಒಬ್ಬರಿಗೆ ₹ 27,000 ಶುಲ್ಕ ನಿಗದಿಪಡಿಸಿದ್ದು, ಇಬ್ಬರು ಮಕ್ಕಳ ₹ 54,000 ಶುಲ್ಕವನ್ನು ಆರಂಭದಲ್ಲೇ ಪಾವತಿ ಮಾಡಿದ್ದೇನೆ. ಶುಲ್ಕ ಕಟ್ಟಿಸಿಕೊಂಡ ದೀಪಾ ಎಂಬುವರನ್ನು ರಸೀದಿ ಕೇಳಿದಾಗ ‘ಕಂಪ್ಯೂಟರ್ ಸರಿ ಇಲ್ಲ, ಮಕ್ಕಳ ಕೈಲಿ ಕೊಟ್ಟು ಕಳಿಸುತ್ತೇವೆ’ ಎಂದು ಹೇಳಿದ್ದರು. ನಂತರ ಕೈಯಿಂದ ಬರೆದ ರಸೀದಿ ಕಳಿಸಿದ್ದು, ಅದನ್ನು ತೋರಿಸಿದರೆ ಆಡಳಿತ ಮಂಡಳಿಯವರು ‘ದೀಪಾ ನಕಲಿ ಬಿಲ್ ಬುಕ್ ಮಾಡಿಸಿ ರಸೀದಿ ನೀಡಿದ್ದಾರೆ’ ಎನ್ನುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ನಮ್ಮಿಂದ ಶುಲ್ಕ ಪಡೆದಿದ್ದ ದೀಪಾ ಎಂಬುವರು ಕೆಲಸ ಬಿಟ್ಟು ಹೋಗಿದ್ದಾರೆ. ಶಾಲೆಯ ಆಡಳಿತ ಮಂಡಳಿಯನ್ನು ಕೇಳಿದರೆ, ‘ದೀಪಾ ಈಗ ನಮ್ಮಲ್ಲಿ ಕೆಲಸ ಮಾಡುತ್ತಿಲ್ಲ. ನಮಗೆ ಯಾವುದೇ ಲೆಕ್ಕ ನೀಡಿಲ್ಲ. ಹಾಗಾಗಿ ಹೊಸದಾಗಿ ಶುಲ್ಕ ಕಟ್ಟಬೇಕು’ ಎಂದು ಹೇಳುತ್ತಾರೆ. ಶಾಲೆಯ ಸಿಬ್ಬಂದಿ ಮಾಡಿರುವ ತಪ್ಪಿಗೆ ನಾವು ಎರಡು ಬಾರಿ ಶುಲ್ಕ ಕಟ್ಟಬೇಕಾ. ಇದನ್ನೇ ನೆಪವಾಗಿಟ್ಟುಕೊಂಡು ಚಿಕ್ಕ ಮಕ್ಕಳನ್ನು ಬಿಸಿಲಿನಲ್ಲಿ ನಿಲ್ಲಿಸಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಸಂಸ್ಥೆಯ ಸಂಸ್ಥಾಪಕ ಲೋಕೇಶ್ ಅವರ ದೂರವಾಣಿಗೆ ಕರೆ ಮಾಡಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.

ಮಕ್ಕಳಿಗೆ ಹಿಂಸೆ ನೀಡಿದರೆ ಕಠಿಣ ಕ್ರಮ !

ಬಿಇಒ ಜಗದೀಶ್ವರ ಗುರುವಾರ ತಾಳಿಕಟ್ಟೆಯ ಸಂದೀಪನಿ ಇಂಟರ್‌ನ್ಯಾಷನಲ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

‘ಸೆ.2018ರಿಂದ ಶಾಲೆಗೆ ಗೈರಾಗಿರುವ ದೀಪಾ ಅವರನ್ನು ಕರೆಸಿ ವಿಚಾರಣೆ ನಡೆಸಬೇಕು. ಅವರು ಬರದಿದ್ದರೆ ಪೊಲೀಸರಿಗೆ ದೂರು ನೀಡಿ ಕರೆಸಬೇಕು. ಶುಲ್ಕ ಪಾವತಿಸಿಲ್ಲ ಎಂದು ವಿದ್ಯಾರ್ಥಿಗಳಿಗೆ ದೈಹಿಕ, ಮಾನಸಿಕ ಹಿಂಸೆ ನೀಡುವುದು, ಹೊರಗೆ ನಿಲ್ಲಿಸುವುದು ಮಾಡಿದರೆ ಮಕ್ಕಳ ಹಕ್ಕು ಕಾಯ್ದೆಯ ನಿಯಮದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.