ADVERTISEMENT

ರಿಮೋಟ್‌ ನಿಯಂತ್ರಿತ ಅತ್ಯಾಧುನಿಕ ಐಸಿಯು ಉದ್ಘಾಟನೆ

ಹೊಂಬಾಳೆ ಸಂಸ್ಥೆಯ ಕೊಡುಗೆ; ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 16:47 IST
Last Updated 17 ಜೂನ್ 2021, 16:47 IST
ಹೊಂಬಾಳೆ ಸಂಸ್ಥೆ ಧನಸಹಾಯದಲ್ಲಿ ಮಿಮ್ಸ್‌ ಆಸ್ಪತ್ರೆಯಲ್ಲಿ ರೂಪಿಸಲಾಗಿರುವ ಹೈಟೆಕ್‌ ಐಸಿಯುವನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಉದ್ಘಾಟಿಸಿದರು
ಹೊಂಬಾಳೆ ಸಂಸ್ಥೆ ಧನಸಹಾಯದಲ್ಲಿ ಮಿಮ್ಸ್‌ ಆಸ್ಪತ್ರೆಯಲ್ಲಿ ರೂಪಿಸಲಾಗಿರುವ ಹೈಟೆಕ್‌ ಐಸಿಯುವನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಉದ್ಘಾಟಿಸಿದರು   

ಮಂಡ್ಯ: ಹೊಂಬಾಳೆ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ಇಲ್ಲಿಯ ಮಿಮ್ಸ್‌ ಆಸ್ಪತ್ರೆಯಲ್ಲಿ ನಿರ್ಮಾಣ ಮಾಡಲಾಗಿರುವ ರಿಮೋಟ್‌ ಕಂಟ್ರೋಲ್‌ ನಿಯಂತ್ರಿತ ಅತ್ಯಾಧುನಿಕ ತೀವ್ರ ನಿಗಾ ಘಟಕಕ್ಕೆ( ಐಸಿಯು) ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಗುರುವಾರ ಚಾಲನೆ ನೀಡಿದರು.

ಚತುಷ್ಮಿಖಿ ಸಂಪರ್ಕ ಜಾಲ (ಫೋರ್‌ ವೇ ಕಮ್ಯುನಿಕೇಷನ್‌) ವ್ಯವಸ್ಥೆ ಹೊಂದಿರುವ ಐಸಿಯು ಬಹಳ ವಿಶೇಷವಾಗಿದ್ದು ಅಂತರರಾಷ್ಟ್ರೀಯ ಗುಣಮಟ್ಟದ ವೆಂಟಿಲೇಟರ್‌, ಮಾನಿಟರ್‌ಗಳನ್ನು ಹೊಂದಿದೆ. ರೋಗಿಯ ರಕ್ತದೊತ್ತಡ, ಮಧುಮೇಹ, ಆಮ್ಲಜನಕ ಸೇರಿ ಸಕಲ ಮಾಹಿತಿಯನ್ನು ಒಂದೇ ಮಾನಿಟರ್‌ನಲ್ಲಿ ತಿಳಿಯಬಹುದಾಗಿದೆ. ವೈದ್ಯರು ರಿಮೋಟ್‌ ಕಂಟ್ರೋಲ್‌ ಮೂಲಕ ರೋಗಿಗಳ ಆರೋಗ್ಯ ಸ್ಥಿತಿ ಅರಿಯಬಹದು.

ಹೊಂಬಾಳೆ ಸಂಸ್ಥೆಯ ಮುಖ್ಯಸ್ಥ, ಚಲನಚಿತ್ರ ನಿರ್ಮಾಪಕ ವಿಜಯ್‌ ಕಿರಗಂದೂರು ತಮ್ಮ ತವರು ಜಿಲ್ಲೆಗೆ ಒಟ್ಟು ₹ 2.35 ಕೋಟಿ ನೆರವು ನೀಡಿದ್ದಾರೆ. ₹ 55 ಲಕ್ಷ ವೆಚ್ಚದಲ್ಲಿ ಐಟೆಕ್‌ ಐಸಿಯು ರೂಪಿಸಲಾಗಿದೆ. ₹ ತಲಾ 90 ಲಕ್ಷ ವೆಚ್ಚದಲ್ಲಿ ಕೆ.ಆರ್‌.ಪೇಟೆ ಹಾಗೂ ಪಾಂಡವಪುರ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣ ಮಾಡಲಾಗುತ್ತಿದೆ.

ADVERTISEMENT

ಐಸಿಯು ಉದ್ಘಾಟಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ‘ಕೋವಿಡ್‌ ಪರಿಸ್ಥಿತಿ ನಿರ್ವಹಣೆಗೆ ಐಸಿಯು ಹಾಸಿಗೆಗಳ ಅವಶ್ಯಕತೆ ಬಹಳಷ್ಟಿತ್ತು. ಇದನ್ನು ಮನಗಂಡು ಹೊಂಬಾಳೆ ಸಂಸ್ಥೆ ಸುಸಜ್ಜಿತವಾದ ಐಸಿಯು ನೀಡಿರುವುದು ಸಂತೋಷದ ವಿಷಯ. ಎಲ್ಲರೂ ಈ ರೀತಿಯ ಸಹಾಯ ಮಾಡಬೇಕು ಎಂಬುದಕ್ಕೆ ವಿಜಯ್‌ ಕಿರಗಂದೂರು ಅವರು ಸ್ಫೂರ್ತಿಯಾಗಿದ್ದಾರೆ’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರ ನೇತೃತ್ವದಲ್ಲಿ ಕೋವಿಡ್‌ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಲಾಗುತ್ತಿದೆ. ಜಿಲ್ಲಾಡಳಿತ ಸೇರಿ ಎಲ್ಲರ ಸಹಕಾರದಿಂದ ಮಾದರಿಯಾಗಿ ಕೋವಿಡ್‌ ನಿರ್ವಹಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಗುಣಮಟ್ಟದ ಆರೋಗ್ಯ ವ್ಯವಸ್ಥೆ ಒದಗಿಸಲು ಎಲ್ಲಾ ರೀತಿಯ ನೆರವು ನೀಡಲಾಗುವುದು. ಆರೋಗ್ಯ ಉಪ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಕಲ ಸೌಲಭ್ಯ ಒದಗಿಸಲಾಗುವುದು’ ಎಂದರು.

‘ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಿಗೆ ಹೆಚ್ಚಿನ ತಂತ್ರಜ್ಞಾನ ಒದಗಿಸುವುದು. ಟೆಲಿ ವೈದ್ಯಕೀಯ ನೆರವು, ವರ್ಚ್ಯುವಲ್‌ ತಪಾಸಣೆ ಸೌಲಭ್ಯ ಒದಗಿಸಲಾಗುವುದು. ಜೊತೆಗೆ ಸಿಬ್ಬಂದಿ, ವೈದ್ಯರ ಸಂಖ್ಯೆ ಹೆಚ್ಚಳ ಮಾಡಲು ಕ್ರಮ ವಹಿಸಲಾಗುವುದು’ ಎಂದರು.

‘ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಣೆಗೂ ವಿಶೇಷ ಕ್ರಮ ವಹಿಸಲಾಗುವುದು. 3ನೇ ಅಲೆ ಕೋವಿಡ್‌ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಎಲ್ಲಾ ರೀತಿಯಿಂದಲೂ ಸಜ್ಜಾಗಿದೆ. ಜಿಲ್ಲಾಸ್ಪತ್ರೆ ಸೇರಿ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ ಬೇಕಾಗಿರುವ ಎಲ್ಲಾ ಬೇಡಿಕೆಗಳನ್ನು ಪಡೆಯಲಾಗುವುದು. ಅವುಗಳನ್ನು ಆದ್ಯತೆಯ ಮೇರೆ ಬಗೆಹರಿಸಲಾಗುವುದು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಹೊಂಬಾಳೆ ಸಂಸ್ಥೆಯ ಚಲುವೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ. ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ಇದ್ದರು.

ನಾಯಕತ್ವ ಬದಲಾವಣೆಯ ಮಾತಿಲ್ಲ

‘ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಈಗಾಗಲೇ ನಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಸ್ಪಷ್ಟಪಡಿಸಿದ್ದಾರೆ. ಮತ್ತೆ ಮತ್ತೆ ಅದೇ ವಿಚಾರ ಪ್ರಸ್ತಾಪ ಮಾಡುವುದು ಬೇಡ’ ಎಂದು ಅಶ್ವತ್ಥ ನಾರಾಯಣ ಹೇಳಿದರು.

‘ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಪಕ್ಷ ಸಂಘಟನೆಗಾಗಿ ರಾಜ್ಯಕ್ಕೆ ಬಂದಿದ್ದಾರೆ. ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಂತೆ ಸೂಚನೆ ಕೊಟ್ಟಿದ್ದಾರೆ. ಕೋವಿಡ್‌ ಹೆಚ್ಚಾಗಿದ್ದ ಕಾರಣ ಮೊದಲು ಬರಲು ಸಾಧ್ಯವಾಗಿರಲಿಲ್ಲ. ಈಗ ಕೋವಿಡ್‌ ನಿಯಂತ್ರಣಕ್ಕೆ ಬಂದಿರುವ ಕಾರಣ ಅವರು ರಾಜ್ಯಕ್ಕೆ ಭೇಟಿ ಕೊಟ್ಟಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.