ADVERTISEMENT

ಹಗರಣ ಮುಚ್ಚಿಕೊಳ್ಳಲು ಕಿಮ್ಮನೆ ವಿರುದ್ಧ ಷಡ್ಯಂತ್ರ: ರಮೇಶ್‌ ಬಾಬು ಆರೋಪ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 15:59 IST
Last Updated 13 ಜನವರಿ 2023, 15:59 IST

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣ, ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಅಕ್ರಮ, ಸ್ಯಾಂಟ್ರೊ ರವಿ ಜತೆಗಿನ ನಂಟಿನ ಆರೋಪಗಳಿಂದ ತಪ್ಪಿಸಿಕೊಳ್ಳಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್‌ ಮುಖಂಡ ಕಿಮ್ಮನೆ ರತ್ನಾಕರ್‌ ವಿರುದ್ಧ ಸುಳ್ಳು ಆರೋಪ ಹೊರಿಸಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರಣಿಯೋಪಾದಿಯಲ್ಲಿ ಹಗರಣಗಳು ಹೊರ ಬರುತ್ತಿರುವುದರಿಂದ ಗೃಹ ಸಚಿವರು ಕಂಗೆಟ್ಟಿದ್ದಾರೆ. ಅವುಗಳಿಂದ ಪಾರಾಗಲು ಕ್ಷೇತ್ರದಲ್ಲಿನ ಎದುರಾಳಿ ರತ್ನಾಕರ್‌ ವಿರುದ್ಧ ಸುಳ್ಳು ಆರೋಪಗಳ ಕಟ್ಟುಕತೆ ಸೃಷ್ಟಿಸಲು ಹೊರಟಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಈ ಪ್ರಯತ್ನ ಮಾಡುತ್ತಿದ್ದಾರೆ’ ಎಂದರು.

2018ರಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಘಟಕಕ್ಕೆ ಕಚೇರಿಗಾಗಿ ಕಟ್ಟಡವೊಂದನ್ನು ಭೋಗ್ಯಕ್ಕೆ ಪಡೆಯಲಾಗಿತ್ತು. ಅದು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಶಾರೀಕ್‌ ಸಂಬಂಧಿಗಳದ್ದು ಎಂಬ ಕಾರಣವನ್ನು ಮುಂದಿಟ್ಟುಕೊಂಡು ಪ್ರಕರಣದ ಜತೆ ಕಿಮ್ಮನೆ ರತ್ನಾಕರ್‌ ಹೆಸರಲು ತಳುಕು ಹಾಕಲು ಪ್ರಯತ್ನಿಸುತ್ತಿದ್ದಾರೆ. ಇದು ಕೀಳುಮಟ್ಟದ ರಾಜಕೀಯ ಎಂದು ದೂರಿದರು.

ADVERTISEMENT

‘ಜ್ಞಾನೇಂದ್ರ ಅವರು ಗೃಹ ಸಚಿವರಾಗಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅವರನ್ನು ತಕ್ಷಣವೇ ಸಂಪುಟದಿಂದ ಕೈಬಿಡಬೇಕು. ಇಲ್ಲವಾದರೆ ಕಾಂಗ್ರೆಸ್‌ ಪಕ್ಷದ ವತಿಯಿಂದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲೇ ಪ್ರತಿಭಟನೆ ಆರಂಭಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.