ADVERTISEMENT

ಹನಿಟ್ರ್ಯಾಪ್‌ಗೆ ಸಹಕರಿಸಿದ ವಿಧವೆ ಸೇರಿದಂತೆ ಏಳು ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 9:40 IST
Last Updated 3 ನವೆಂಬರ್ 2019, 9:40 IST
   

ಗೋಕಾಕ: ಹನಿ ಟ್ರ್ಯಾಪ್‌ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವಿಧವೆಯೊಬ್ಬರನ್ನು ಬಳಸಿ ಯುವಕನೊಬ್ಬನಿಂದ ಹಣ ವಸೂಲಿ ಮಾಡಲು ಪ್ರಯತ್ನಿಸಿದ ಏಳು ಜನ ಆರೋಪಿಗಳನ್ನು ಶಹರ ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ.

ಶಿಂಗಳಾಪೂರ ಗ್ರಾಮದ ವಿಧವೆ ಲಕ್ಷ್ಮಿ ಅಲಿಯಾಸ ಸರಸ್ವತಿ ವಿಜಯ ಚಿಗಡೊಳ್ಳಿ, ಗಂಗಪ್ಪ ಉರ್ಫ ಗಂಗಾಧರ ಮಾರುತಿ ಹರಿಜನ, ಗೋಕಾಕದ ಸಂಗಮನಗರ ಬಡಾವಣೆಯ ನಿವಾಸಿ ರಮೇಶ ಅಣ್ಣಪ್ಪ ಮಾವರಕರ, ಬೆಣಚಿನಮರಡಿ ಗ್ರಾಮದ ಶ್ರೀಕಾಂತ ಯಲ್ಲಪ್ಪ ಗಡಾದ ಮತ್ತು ಬಸವರಾಜ ಕೆಂಚಪ್ಪ ಗುಂಡಿ, ಮಹೇಶಕುಮಾರ ಶಂಕರ ಬೆಳಗಾಂವಕರ ಹಾಗೂ ಲಕ್ಷ್ಮಣ ಮಲ್ಲಿಕಾರ್ಜುನ ಕಬ್ಬೂರ ಬಂಧಿತರು.

ಅಶ್ಲೀಲ ಚಿತ್ರೀಕರಣ:

ADVERTISEMENT

ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಯುವಕನೊಬ್ಬನನ್ನು ಪರಿಚಯ ಮಾಡಿಕೊಂಡ ಲಕ್ಷ್ಮಿ ಪ್ರತಿದಿನ ಮೊಬೈಲ್‌ನಲ್ಲಿ ಚಾಟ್‌ ಮಾಡುತ್ತಿದ್ದರು. ಕಳೆದ ತಿಂಗಳು 29ರಂದು ಗೋಕಾಕದ ಜ್ಞಾನಮಂದಿರ ಬಳಿ ಬರಲು ಯುವಕನಿಗೆ ಹೇಳಿದ್ದರು.

ನಂತರ ಸಂಗಮ ನಗರದಲ್ಲಿರುವ ತನ್ನ ತಗಡಿನ ಶೆಡ್ ಮನೆಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡಿದ್ದರು. ಆಗ ದಿಢೀರನೆ ಆಗಮಿಸಿದ ಇತರ ಆರು ಜನ ಆರೋಪಿಗಳು, ಯುವಕನನ್ನು ಬೆತ್ತಲೆಗೊಳಿಸಿ ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡಿದ್ದರು. ಅವನ ಬಳಿ ಇದ್ದ ₹ 1,000 ನಗದು ಮತ್ತು ಕೊರಳಲ್ಲಿಯ ಬಂಗಾರದ ಚೈನ್‌ ಕಸಿದುಕೊಂಡರು. ಇನ್ನೂ ₹ 3 ಲಕ್ಷ ನೀಡುವಂತೆ ಒತ್ತಾಯಿಸಿದ್ದರು.

ಹಣ ನೀಡದಿದ್ದರೆ ಬೆತ್ತಲೆ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆಯೊಡ್ಡಿದ್ದರು. 3 ದಿನ ಕಾಲಾವಕಾಶ ಕೇಳಿದ ಯುವಕ ಅಲ್ಲಿಂದ ಓಡಿ ಬಂದು, ಪೊಲೀಸರಿಗೆ ದೂರು ನೀಡಿದ್ದರು.

ಹಣ ನೀಡುವಂತೆ ಒತ್ತಾಯಿಸಿ ಮಾಡುತ್ತಿದ್ದ ಮೊಬೈಲ್ ಕರೆಗಳ ಸುಳುವಿನ ಮೇರೆಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಚಿನ್ನದ ಚೈನ್, ನಗದ ₹ 1,000, ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ, 6 ಮೊಬೈಲ್‌ ಹ್ಯಾಂಡ್‌ ಸೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಗೋಕಾಕ ಸಿಪಿಐ ಶ್ರೀಧರ ಸಾತಾರೆ ಅವರ ಮಾರ್ಗದರ್ಶನದಲ್ಲಿ ಶಹರ ಠಾಣೆ ಎಸ್‌ಐ ಗುರುನಾಥ ಚವ್ಹಾಣ ಅವರು ಸಿಬ್ಬಂದಿಗಳಾದ ಎ.ಎ.ಶ್ಯಾಂಡಗೆ, ಎಸ್.ಆರ್.ದೇಸಾಯಿ, ಎಂ.ಎಸ್.ದೇಶನೂರ, ಎಂ.ಎಫ್.ಸುಬ್ಬಾಪೂರಮಠ, ಎಂ.ಆರ್.ಅಂಬಿ, ಎಂ.ಬಿ.ತಳವಾರ, ಓರ್ವ ಮಹಿಳಾ ಪೇದೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.