ADVERTISEMENT

ಹನಿಟ್ರ್ಯಾಪ್‌ ಪ್ರಕರಣವನ್ನು ಬಯಲಿಗೆ ತಂದ ಸೂತ್ರಧಾರಿ ಸಿದ್ದರಾಮಯ್ಯ: ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 11:02 IST
Last Updated 24 ಮಾರ್ಚ್ 2025, 11:02 IST
<div class="paragraphs"><p>ಆರ್. ಅಶೋಕ್,,&nbsp;ಸಿದ್ದರಾಮಯ್ಯ</p></div>

ಆರ್. ಅಶೋಕ್,, ಸಿದ್ದರಾಮಯ್ಯ

   

ಬೆಂಗಳೂರು: ಮಧುಬಲೆ (ಹನಿಟ್ರ್ಯಾಪ್‌) ಪ್ರಕರಣವನ್ನು ಬಯಲಿಗೆ ತಂದ ಪ್ರಮುಖ ಸೂತ್ರಧಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸಭೆಯ ಕಲಾಪದ ವೇಳೆ ಸಚಿವ ಕೆ.ಎನ್‌.ರಾಜಣ್ಣ ಅವರು ಈ ಪ್ರಕರಣ ಕುರಿತು ಗೋಗರೆದ ಕಾರಣ, ‘ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ಈ ಪ್ರಕರಣವನ್ನು ಪ್ರಸ್ತಾಪಿಸಿದೆವು’ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಕಲಾಪಕ್ಕೂ ಮುನ್ನ ಸಚಿವರಾದ ಕೆ.ಎನ್‌.ರಾಜಣ್ಣ ಮತ್ತು ಗೃಹ ಸಚಿವ ಜಿ.ಪರಮೇಶ್ವರ ಅವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಚರ್ಚಿಸಿಯೇ ಸದನಕ್ಕೆ ಬಂದಿದ್ದರು. ಈ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನೀಡಬೇಕು ಎಂಬ ಸಂದೇಶವನ್ನು ಸಚಿವರೇ ಸಭಾಧ್ಯಕ್ಷರಿಗೂ ರವಾನಿಸಿದ್ದರು. ಇದು ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಸಮರದ ಒಂದು ಭಾಗ. ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಹನಿಟ್ರ್ಯಾಪ್‌ ವಿಚಾರವನ್ನು ಬಯಲಿಗೆ ತಂದಿದ್ದಾರೆ ಎಂದು ಅವರು ವಿಶ್ಲೇಷಿಸಿದರು.

‘ಈ ಪ್ರಕರಣ ಬಯಲಾದ ಬೆನ್ನಲ್ಲೇ ರಾಜ್ಯ ಸರ್ಕಾರ ನನ್ನದೂ, ಎಚ್‌.ಡಿ.ಕುಮಾರಸ್ವಾಮಿ ಅವರದೂ ಸೇರಿ ವಿರೋಧ ಪಕ್ಷಗಳ ನಾಯಕರು ದೂರವಾಣಿಗಳನ್ನು ಕದ್ದಾಲಿಕೆ ಮಾಡುತ್ತಿದೆ. ಕಾಂಗ್ರೆಸ್‌ನ  ಆಯ್ದ ಶಾಸಕರ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ಶಾಸಕರೂ ಆರೋಪಿಸಿದ್ದಾರೆ. ವಿರೋಧ ಪಕ್ಷಗಳನ್ನು ಬಗ್ಗು ಬಡಿಯಲು ಕದ್ದಾಲಿಕೆ ಮಾಡಿಸಲಾಗುತ್ತಿದೆ’ ಎಂದು ಅವರು ದೂರಿದರು.

ಹನಿಟ್ರ್ಯಾಪ್‌ನಿಂದ ಕಾಂಗ್ರೆಸ್‌ ಸರ್ಕಾರದ ಮಾರ್ಯದೆ ಮೂರಾಬಟ್ಟೆ ಆಗುತ್ತಿದೆ ಎಂದು ಗಾಬರಿ ಬಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೌಡಾಯಿಸಿ ಬಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದಾರೆ. ಕೆ.ಎನ್‌.ರಾಜಣ್ಣ ಅವರು ಈಗಾಗಲೇ ಸದನದಲ್ಲಿ ಹೇಳಿಕೆ ನೀಡಿದಂತೆ ಪೊಲೀಸರಿಗೆ ದೂರು ನೀಡಬೇಕಿತ್ತು. ಇನ್ನೂ ದೂರು ನೀಡಿಲ್ಲ. ಅವರ ಪುತ್ರ ದೂರು ನೀಡುವುದಾಗಿ ಹೇಳಿದ್ದಾರೆ. ಕಾದು ನೋಡೋಣ. ಕಾಂಗ್ರೆಸ್ ಪಕ್ಷದಲ್ಲಿ ಗ್ರಹಗತಿ ಬದಲಾಗುವ ಸೂಚನೆ ಎಂದು ಅಶೋಕ ಹೇಳಿದರು.

ಕಾಂಗ್ರೆಸ್‌ನ ಮಹಾನ್ ನಾಯಕ ಮತ್ತು ಮುಖ್ಯಮಂತ್ರಿ ನಡುವಿನ ಕುರ್ಚಿ ಕಿತ್ತಾಟದಲ್ಲಿ ಸರ್ಕಾರ ಸತ್ತು ಹೋಗಿದೆ ಎಂದು ಅವರು ಕಿಡಿಕಾರಿದರು.

‘ಹನಿಟ್ರ್ಯಾಪ್‌ ವಿಚಾರದಲ್ಲಿ ಸದನದಲ್ಲಿ ನಮ್ಮ ಶಾಸಕರು ಧರಣಿ ನಡೆಸುವಾಗ ಡಯಾಸ್‌ ಮೇಲೆ ಬರುವಂತೆ ಪ್ರೋತ್ಸಾಹ ನೀಡಿದವರೇ ಸಭಾಧ್ಯಕ್ಷ ಯು.ಟಿ.ಖಾದರ್ ಅವರು. ನಮ್ಮ ಶಾಸಕರನ್ನು ಮಾರ್ಷಲ್ಗಳು ತಡೆದರೂ ‘ಮೇಲೆ ಬಿಡಿ’ ಎಂದು ಕರೆದವರೇ ಖಾದರ್‌.  ಆ ಬಳಿಕ ಅವರ ವರಸೆಯೇ ಬದಲಾಯಿತು. 18 ಶಾಸಕರನ್ನು 6 ತಿಂಗಳಿಗೆ ಅಮಾನತುಗೊಳಿಸಿದರು. ಸಭಾಧ್ಯಕ್ಷರು ಕಾಂಗ್ರೆಸ್ ಅಣತಿಯಂತೆ ನಡೆದುಕೊಂಡಿದ್ದಾರೆ. ಅವರಾಗಿಯೇ ತೀರ್ಮಾನ ವಾಪಸ್‌ ತೆಗೆದುಕೊಳ್ಳಬೇಕು ಎಂದು ಅಶೋಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.