ADVERTISEMENT

ಹನಿಟ್ರ್ಯಾಪ್: ಆರೋಪಿಗಳು ಚಿತ್ರೀಕರಿಸಿದ್ದರು ಎನ್ನಲಾದ ಮೂಲ ವಿಡಿಯೊಗಾಗಿ ಶೋಧ

ಸಿ.ಡಿ. ಪ್ರಕರಣ; ಆರೋಪಿಗಳ ಪಟ್ಟಿಯೂ ಸಿದ್ಧ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 2:08 IST
Last Updated 18 ಮಾರ್ಚ್ 2021, 2:08 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

‌ಬೆಂಗಳೂರು: ಸಿ.ಡಿ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು, ಹನಿಟ್ರ್ಯಾಪ್‌ ಪ್ರಕರಣದಲ್ಲಿ ಆರೋಪಿಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ಆರೋಪಿಗಳು ಚಿತ್ರೀಕರಿಸಿದ್ದರು ಎನ್ನಲಾದ ಮೂಲ ವಿಡಿಯೊಗಾಗಿ ಶೋಧ ಆರಂಭಿಸಿದ್ದಾರೆ.

ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಪಟ್ಟಿದ್ದು ಎನ್ನಲಾದ ಸಿ.ಡಿ ಪ್ರಕರಣದಲ್ಲಿ ಕನ್ನಡ ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ್ದ ವರದಿಗಾರರು ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗಿಯಾಗಿರುವ ಪುರಾವೆಗಳು ಎಸ್‌ಐಟಿಗೆ ಸಿಕ್ಕಿವೆ.

ಸುದ್ದಿವಾಹಿನಿಯೊಂದರ ರಹಸ್ಯ ಕ್ಯಾಮೆರಾ ಕಾರ್ಯಾಚರಣೆಯಲ್ಲಿ ಗುರುತಿಸಿಕೊಂಡಿದ್ದ ವರದಿಗಾರ, ಆ ಸುದ್ದಿವಾಹಿನಿ ಕೆಲಸ ಬಿಟ್ಟು ರಾಜಕೀಯ ಮುಖಂಡರ ಜೊತೆ ಸೇರಿಕೊಂಡಿದ್ದ. ಆತನೇ ಇತರೆ ಆರೋಪಿಗಳ ಜೊತೆ ಸೇರಿಕೊಂಡು ಸಿ.ಡಿ ಸೃಷ್ಟಿಸಿದ್ದ ಎಂಬ ಮಾಹಿತಿಯೂ ಎಸ್‌ಐಟಿಗೆ ಲಭ್ಯವಾಗಿದೆ.

ADVERTISEMENT

‘ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಿದ್ದ ಆರೋಪಿಗಳು, ವ್ಯವಸ್ಥಿತವಾಗಿ ಹಲವು ವರ್ಷದಿಂದ ಕೃತ್ಯ ಎಸಗುತ್ತಿರುವ ಮಾಹಿತಿ ಇದೆ. ಅದಕ್ಕೆ ಸಂಬಂಧಪಟ್ಟ ಸಾಕ್ಷ್ಯಗಳನ್ನು ಸಂಗ್ರಹಿಸಿ, ಆರೋಪಿಗಳ ಪಟ್ಟಿ ಸಿದ್ದಪಡಿಸಲಾಗಿದೆ. ರಮೇಶ ಜಾರಕಿಹೊಳಿ ಅವರ ಹೇಳಿಕೆಯನ್ನು ಈಗಾಗಲೇ ಪಡೆದುಕೊಂಡಿದ್ದು, ಅದರನ್ವಯವೇ ಹನಿಟ್ರ್ಯಾಪ್‌ ಪ್ರಕರಣದಲ್ಲಿ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು’ ಎಂದೂ ಎಸ್‌ಐಟಿ ಮೂಲಗಳು ಹೇಳಿವೆ.

ಜಾಹೀರಾತು ಕಂಪನಿ, ಮನೆಯಲ್ಲಿ ಶೋಧ: ಪ್ರಕರಣದಲ್ಲಿ ಮೂಲ ವಿಡಿಯೊ ಮಹತ್ವದ ಪಡೆದುಕೊಂಡಿದೆ. ಅದಕ್ಕಾಗಿ ಎಸ್‌ಐಟಿ, ಶೇಷಾದ್ರಿಪುರದಲ್ಲಿರುವ ಜಾಹೀರಾತು ಕಂಪನಿ ಹಾಗೂ ಪ್ರಮುಖ ಆರೋಪಿಯ ಬಸವೇಶ್ವರನಗರದಲ್ಲಿರುವ ಮನೆಯಲ್ಲಿ ಬುಧವಾರ ಶೋಧ ನಡೆಸಿತು.

‘ಶೋಧದ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ದಾಖಲೆಗಳು ಪತ್ತೆಯಾಗಿವೆ. ಆದರೆ, ಮೂಲ ವಿಡಿಯೊ ಸಿಕ್ಕಿಲ್ಲ. ಅದೇ ವಿಡಿಯೊ ಬಳಸಿಕೊಂಡೇ ಆರೋಪಿಗಳು ಸಂಕಲನ ಮಾಡಿ ಹೊಸ ವಿಡಿಯೊ ಸಿದ್ಧಪಡಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ಬ್ಯಾಂಕ್ ಖಾತೆಗಳ ಪರಿಶೀಲನೆ: ‘ವರದಿಗಾರರಾಗಿದ್ದ ಸಂದರ್ಭದಲ್ಲಿ ತಮ್ಮದೇ ತಂಡಕಟ್ಟಿಕೊಂಡಿದ್ದ ಆರೋಪಿಗಳು, ಗಣ್ಯ ವ್ಯಕ್ತಿಗಳು, ದೊಡ್ಡ ಉದ್ಯಮಿಗಳು ಹಾಗೂ ರಾಜಕಾರಣಿಗಳನ್ನು ಹನಿಟ್ರ್ಯಾಪ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಮಾಹಿತಿಯೂ ಇದೆ. ಈ ಬಗ್ಗೆ ವಿಸ್ತ್ರತ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಆರೋಪ ಖಚಿತವಾದರೆ ದೊಡ್ಡ ಜಾಲವೇ ಹೊರಬೀಳಲಿದೆ’ ಎಂದೂ ಮೂಲಗಳು ಹೇಳಿವೆ.

ವಿಶೇಷ ತನಿಖಾ ತಂಡ ರಚನೆ

ಬೆಳಗಾವಿ: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ ಯಲ್ಲಿರುವ ಯುವತಿ ಅಪಹರಣವಾಗಿದ್ದು, ಹುಡುಕಿಕೊಡುವಂತೆ ಅವರ ತಂದೆ ಇಲ್ಲಿನ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ತನಿಖೆಗಾಗಿ ಬುಧವಾರ ವಿಶೇಷ ತಂಡ ರಚಿಸಲಾಗಿದೆ.

‘ಯುವತಿಯ ತಂದೆ ನೀಡಿರುವ ದೂರು ಆಧರಿಸಿ ಎಫ್‌ಐಆರ್‌ ದಾಖಲಾಗಿದೆ. ಮಾರ್ಕೆಟ್ ಎಸಿಪಿ ಹಾಗೂ ಎಪಿಎಂಸಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ಆ ಕುಟುಂಬದವರು ಭದ್ರತೆ ನೀಡುವಂತೆ ಕೋರಿದ್ದರೆ, ವ್ಯಾಪ್ತಿಯ ಪೊಲೀಸ್ ಠಾಣೆ ಪೊಲೀಸರು ನಿರ್ಧರಿಸುತ್ತಾರೆ’ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದರು.

ತಂಡವು ಯುವತಿಯ ಪತ್ತೆಗಾಗಿ ಬೆಂಗಳೂರಿಗೆ ತೆರಳುವ ಸಾಧ್ಯತೆ ಇದೆ. ಮಗಳ ಅಪಹರಣವಾಗಿದೆ ಎಂದು ತಂದೆ ಮಂಗಳವಾರವಷ್ಟೇ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ತನಿಖೆ ಆರಂಭಿಸಲಾಗಿದೆ.

ಯುವತಿಯ ಕುಟುಂಬದವರು ಅಜ್ಞಾತ ಸ್ಥಳದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.