
ಬೆಂಗಳೂರು: ‘ಹೊನ್ನಾವರ ಬಂದರು ಯೋಜನೆಯನ್ನು ಕರ್ನಾಟಕ ಸರ್ಕಾರ ಸಂಪೂರ್ಣ ಕೈಬಿಟ್ಟು, ಅಲ್ಲಿನ ಜನರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು’ ಎಂದು ನರ್ಮದಾ ಬಚಾವೋ ಆಂದೋಲನದ ಸಂಸ್ಥಾಪಕ ಸದಸ್ಯೆ ಮೇಧಾ ಪಾಟ್ಕರ್ ಒತ್ತಾಯಿಸಿದರು.
ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು), ಫ್ರೈಡೇಸ್ ಫಾರ್ ಫ್ಯೂಚರ್ ಕರ್ನಾಟಕ (ಎಫ್‌ಎಫ್‌ಎಫ್–ಕೆ) ಮತ್ತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್– ಕರ್ನಾಟಕ (ಪಿಯುಸಿಎಲ್–ಕೆ) ಜಂಟಿಯಾಗಿ ಸಿದ್ಧಪಡಿಸಿರುವ ‘ಹೊನ್ನಾವರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಸತ್ಯಶೋಧನಾ ವರದಿ’ಯನ್ನು ಮಂಗಳವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ನೂರಾರು ವರ್ಷಗಳಿಂದ ಮೀನುಗಾರಿಕೆಯಲ್ಲಿರುವ ಮಹಿಳೆಯರು, ವೃದ್ಧರನ್ನೂ ಲೆಕ್ಕಿಸದೆ ಅವರನ್ನು ಅವರ ಜಾಗದಿಂದಲೇ ತೆರವು ಮಾಡಿಸಲಾಗುತ್ತಿದೆ. ಪೊಲೀಸರ ಮೂಲಕ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ದೌರ್ಜನ್ಯ ಎಸಗಲಾಗುತ್ತಿದೆ. ಮಾನವ ಹಕ್ಕುಗಳನ್ನು ಇಲ್ಲಿ ಸಂಪೂರ್ಣವಾಗಿ ಉಲ್ಲಂಘಿಸಲಾಗುತ್ತಿದೆ’ ಎಂದು ದೂರಿದರು.
‘ಹೊನ್ನಾವರದ ಸಮುದ್ರ ತೀರದಲ್ಲಿ ಪುರುಷರು ತಡರಾತ್ರಿ ತರುವ ಮೀನುಗಳನ್ನು, ಒಣಗಿಸುವ ಮೀನುಗಾರ ಮಹಿಳೆಯರು ಅವುಗಳನ್ನು ಮಾರಾಟ ಮಾಡುತ್ತಾರೆ. ಮಾಲಿನ್ಯ ರಹಿತವಾದ ಶರಾವತಿಯ ನೀರಿನಲ್ಲಿ ದಡದಲ್ಲಿ ಈ ಪ್ರಕ್ರಿಯೆ ನಡೆಯುವುದರಿಂದ ಇಲ್ಲಿನ ಒಣ ಮೀನುಗಳಿಗೆ ಭಾರಿ ಬೇಡಿಕೆ ಇದೆ. ಇಂತಹ ಪ್ರದೇಶದಲ್ಲಿನ ಜನರ ಮನೆ ಹಾಗೂ ಮೀನು ಒಣಗಿಸುವ ಜಾಗದಲ್ಲೂ ದಬ್ಬಾಳಿಕೆಯಿಂದ ರಸ್ತೆ ಮಾಡಲಾಗುತ್ತಿದೆ’ ಎಂದು ಹೇಳಿದರು.
‘ಶರಾವತಿ ನದಿ ಸಮುದ್ರಕ್ಕೆ ಸೇರುವ ಮಧ್ಯಭಾಗದಲ್ಲಿ ಬಂದರು ನಿರ್ಮಿಸಲಾಗುತ್ತಿದೆ. ಇದರಿಂದ ಜೀವವೈವಿಧ್ಯಗಳಿಗೆ ಧಕ್ಕೆಯಾಗುತ್ತದೆ. ಪರಿಸರದ ಮೇಲಿನ ದುಷ್ಪರಿಣಾಮದ (ಇಐಎ) ವರದಿಯನ್ನೇ ತಪ್ಪಾಗಿ ನೀಡಲಾಗುತ್ತಿದೆ. ಹೊನ್ನಾವರ ಕಡಲ ತೀರದಲ್ಲಿ ವಿಷ್ಣುವಿನ ಅವತಾರವೆಂದೇ ಭಾವಿಸುವ ಆಮೆಗಳು ಮೊಟ್ಟೆ ಇಡುತ್ತವೆ. ಅವು ಜೆಲ್ಲಿ ಮೀನುಗಳನ್ನು ತಿಂದು ಇತರೆ ಮೀನುಗಳನ್ನು ಕಾಪಾಡುತ್ತವೆ. ಇಐಎ ವರದಿಯಲ್ಲಿ ಈ ಪ್ರದೇಶದಲ್ಲಿ ಆಮೆಗಳು ಇಲ್ಲ ಎಂದು ಹೇಳಲಾಗಿದೆ. ಆಮೆಗಳು ವರ್ಷದ ಎಲ್ಲ ಕಾಲದಲ್ಲೂ ಇರುವುದಿಲ್ಲ. ಅವುಗಳು ಇಲ್ಲದ ಸಮಯದಲ್ಲಿ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಹೀಗೆ, ಹೊನ್ನಾವರ ಬಂದರಿಗೆ ಎಲ್ಲ ರೀತಿಯ ಅನುಮತಿಗಳನ್ನು ನೀಡುವಾಗಿ ‘ಫೇಕ್’ ಅಂಶಗಳನ್ನು ದಾಖಲಿಸಲಾಗಿದೆ’ ಎಂದು ದೂರಿದರು.
ಹೊನ್ನಾವರ ಮೀನುಗಾರರ ಸಂಘದ ಅಧ್ಯಕ್ಷ ರಾಜೇಶ್, ಮೀನುಗಾರರಾದ ನಿಹಾನ, ಮೊಹಮದ್ ಕೊಯಾ ಅವರು ಅಲ್ಲಿನ ನಡೆಯುತ್ತಿರುವ ದೌರ್ಜನ್ಯಗಳನ್ನು ವಿವರಿಸಿದರು.
‘ಸಿದ್ದರಾಮಯ್ಯ ಭರವಸೆ’
‘ಹೊನ್ನಾವರದಲ್ಲಿ ಬಂದರು ನಿರ್ಮಿಸಲು ಪರಿಸರಕ್ಕೆ ಸಂಬಂಧಿಸಿದ ಯಾವುದೇ ಅನುಮತಿಗಳನ್ನು ಪಡೆದಿಲ್ಲ. ಆದ್ದರಿಂದ ಯೋಜನೆಯನ್ನು ಸಂಪೂರ್ಣವಾಗಿ ರದ್ದುಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೇವೆ. ವರದಿಯನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು’ ಎಂದು ಮೇಧಾ ಪಾಟ್ಕರ್ ಹೇಳಿದರು. ‘ದೇವನಹಳ್ಳಿಯಲ್ಲಿ 700 ಎಕರೆ ಭೂಮಿಯನ್ನು ಸ್ವಾಧೀನದಿಂದ ಕೈಬಿಟ್ಟಿರುವುದಕ್ಕೆ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದೆ. ಅವರಿಗೆ ರೈತರ ಸಂಕಷ್ಟದ ಅರಿವಿದೆ. ಮೀನುಗಾರರೂ ರೈತರೇ ಆಗಿದ್ದಾರೆ. ಹೀಗಾಗಿ ಅವರ ಸಂಕಷ್ಟವನ್ನೂ ಪರಿಹರಿಸುವ ಆಶಯ ನನಗಿದೆ’ ಎಂದರು.
‘ಡಿಕೆಶಿ ಮಂಕಾಳ ವೈದ್ಯ ವಾಗ್ದಾನ ಏನಾಯಿತು?’
‘ವಿಧಾನಸಭೆ ಚುನಾವಣೆಗೆ ಮುನ್ನ ಹೊನ್ನಾವರ ಬಂದರು ಯೋಜನೆ ಪ್ರದೇಶಕ್ಕೆ ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್ ಹಾಗೂ ಮಂಕಾಳ ವೈದ್ಯ ಅವರು ಮೀನುಗಾರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಲು ಬಿಡುವುದಿಲ್ಲ ಎಂದು ಭರವಸೆ ಕೊಟ್ಟಿದ್ದರು. ಉಪ ಮುಖ್ಯಮಂತ್ರಿ ಮತ್ತು ಮೀನುಗಾರಿಕೆ ಸಚಿವರಾದ ಮೇಲೆ ಅವರಿಬ್ಬರೂ ಸಂಕಷ್ಟದಲ್ಲಿರುವ ಮೀನುಗಾರರನ್ನು ಮರೆತುಹೋಗಿದ್ದಾರೆ’ ಎಂದು ಮೇಧಾ ಪಾಟ್ಕರ್ ಟೀಕಿಸಿದರು. ‘ಮೀನುಗಾರರಿಗೆ ಉಂಟಾಗುತ್ತಿರುವ ಸಂಕಷ್ಟದ ಬಗ್ಗೆ ಚುನಾವಣೆ ಸಂದರ್ಭದಲ್ಲಿ ಶಿವಕುಮಾರ್ ಹಾಗೂ ಮಂಕಾಳ ವೈದ್ಯ ಅವರು ಬಂದರು ಯೋಜನೆ ಇಲ್ಲಿ ಅಗತ್ಯವಿಲ್ಲ. ನಿಮ್ಮ ಮನೆಗಳನ್ನು ನಿಮ್ಮನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ ಎಂದಿದ್ದರು. ಈಗ ಅದನ್ನೆಲ್ಲ ಮರೆತಿದ್ದಾರೆ’ ಎಂದರು. ‘ಮೀನುಗಾರಿಕೆ ಸಚಿವರಾಗಿರುವ ಮಂಕಾಳ ವೈದ್ಯ ಅವರನ್ನು ನಾನು ಭೇಟಿ ಮಾಡಿದ್ದೆ. ಆ ಬಂದರು ಯೋಜನೆ 2010– 2012ರಲ್ಲಿ ಆಗಿದ್ದು ಈಗೇನು ಮಾಡಲು ಸಾಧ್ಯವಿಲ್ಲ ಎಂದರು. ಪರಿಹಾರ ಕೊಡಲು ಸಾಧ್ಯವಿಲ್ಲ ಎಂದ ಮೇಲೆ ಮೀನುಗಾರರ ಮತ ಪಡೆಯುವಾಗ ಏಕೆ ಭರವಸೆ ನೀಡಿದ್ದೀರಿ ಎಂದು ಪ್ರಶ್ನಿಸಿದೆ. ಅದಕ್ಕೆ ಅವರಿಂದ ಉತ್ತರ ಬರಲಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.