ADVERTISEMENT

ಇಂತಹ ಸ್ವಾರ್ಥ, ಸಿದ್ಧಾಂತ ರಹಿತ ಸರ್ಕಾರವನ್ನು ನಾನು ನೋಡಿಲ್ಲ: ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 17:14 IST
Last Updated 25 ಡಿಸೆಂಬರ್ 2018, 17:14 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ    

ಮುಧೋಳ (ಬಾಗಲಕೋಟೆ ಜಿಲ್ಲೆ): ‘ನಾನು 38 ವರ್ಷದಿಂದ ಸದನದಲ್ಲಿದ್ದೇನೆ. 16 ಜನ ಮುಖ್ಯಮಂತ್ರಿಗಳನ್ನು, 12 ಜನ ಸಭಾಧ್ಯಕ್ಷರನ್ನು ಕಂಡಿದ್ದೇನೆ. ಆದರೆ, ಇಂತಹ ಸ್ವಾರ್ಥ ಹಾಗೂ ಸಿದ್ಧಾಂತ ರಹಿತ ಸರ್ಕಾರವನ್ನು ನಾನು ನೋಡಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೆ ಯಾಕೆ ಮಂತ್ರಿ ಸ್ಥಾನ ನೀಡಿಲ್ಲ ಹಾಗೂ ಸಭಾಪತಿ ಸ್ಥಾನ ನೀಡಲಿಲ್ಲ ಎಂಬುದು ನನಗೂ ಗೊತ್ತಾಗುತ್ತಿಲ್ಲ. ನಾನು ಅದಕ್ಕಾಗಿ ಲಾಬಿ ಮಾಡಿಲ್ಲ. ಸಚಿವ ಸ್ಥಾನ ನೀಡಿದ್ದರೆ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಮಾಡುವ ಹಂಬಲವಿತ್ತು. ಈಗ ಪ್ರತಿಭೆ, ಅನುಭವ, ಪ್ರಾಮಾಣಿಕತೆಗೆ ಬೆಲೆ ಸಿಗುತ್ತಿಲ್ಲ’ ಎಂದು ನೋವು ಹೊರಹಾಕಿದರು.

‘ನಾನು, ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇರದ ವ್ಯಕ್ತಿ. ನನಗೆ ಮಂತ್ರಿ ಸ್ಥಾನ ನೀಡಿದಾಗ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗ ದಂತೆ ನೋಡಿಕೊಂಡಿದ್ದೇನೆ. ಅಡೆತಡೆಗಳ ನಡುವೆಯೂ ಕಾನೂನು ವಿಶ್ವವಿದ್ಯಾಲಯವನ್ನು ಹುಬ್ಬಳ್ಳಿಗೆ ತಂದ ತೃಪ್ತಿ ಇದೆ’ ಎಂದರು.

ADVERTISEMENT

‘ಬೆಳಗಾವಿ ಅಧಿವೇಶನದಲ್ಲಿ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ, ಎಲ್ಲರಿಗೂ ಬೆಳಗಾವಿಯಲ್ಲೆ ವ್ಯವಸ್ಥಿತ ವಾಸ್ತವ್ಯ ಊಟೋಪಚಾರದ ವ್ಯವಸ್ಥೆ ಮಾಡಿ ತೋರಿಸಿದ್ದೇನೆ’ ಎಂದರು.

ಅರಿವೆ ಹಾವು ತೋರಿಸುವವರೇ!

ಸರ್ಕಾರ ಸುಭದ್ರವಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಯಾರೂ ರಾಜೀನಾಮೆ ನೀಡುವುದಿಲ್ಲ. ಅವರೆಲ್ಲ ಅರಿವೆ ಹಾವು ತೋರಿಸಿ ಬೆದರಿಸುತ್ತಿದ್ದಾರೆ. ಯಾರಿಗೂ ಚುನಾವಣೆಗೆ ಹೋಗುವ ಧೈರ್ಯವಿಲ್ಲ. ಇನ್ನು, ಬಿಜೆಪಿಯವರು ಎಂಎಲ್ಎಗಳ ಮನೆಗಳಿಗೆ ಹೋಗಿ ಪಕ್ಷಕ್ಕೆ ಸೇರುವಂತೆ ದುಂಬಾಲು ಬೀಳುತ್ತಿರುವುದನ್ನು ನೋಡಿದರೆ ಆ ಪಕ್ಷ ತನಗಿದ್ದ ಮರ್ಯಾದೆಯನ್ನೂ ಕಳೆದುಕೊಳ್ಳುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.