ADVERTISEMENT

ಗೂಳಿ ಪಳಗಿಸುವ ಹೋರಿ ಹಬ್ಬ ಆಚರಣೆಗೆ ಹೈಕೋರ್ಟ್ ಅಸ್ತು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 15:59 IST
Last Updated 9 ಡಿಸೆಂಬರ್ 2025, 15:59 IST
<div class="paragraphs"><p>ಹೋರಿ ಹಬ್ಬ (ಸಂಗ್ರಹ ಚಿತ್ರ)</p></div>

ಹೋರಿ ಹಬ್ಬ (ಸಂಗ್ರಹ ಚಿತ್ರ)

   

ಬೆಂಗಳೂರು: ಗೂಳಿ ಪಳಗಿಸುವ ‘ಹೋರಿ ಹಬ್ಬ’ ಆಚರಣೆಗೆ ಅನುಮತಿ ನೀಡಿರುವ ಹೈಕೋರ್ಟ್‌, ‘ಜಲ್ಲಿಕಟ್ಟು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಧಿಸಿರುವ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು’ ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

ಈ ಸಂಬಂಧ ಹಾವೇರಿ ಜಿಲ್ಲೆಯ ಇಜಾರಿ ಲಕ್ಮಾಪುರದ, ಅಖಿಲ ಕರ್ನಾಟಕ ರೈತರ ಜಾನಪದ ಕ್ರೀಡೆಯ, ‘ಹೋರಿ ಹಬ್ಬ ಹೋರಾಟ ಸಮಿತಿ’ ಅಧ್ಯಕ್ಷ ಬಸವರಾಜ ದ್ಯಾಮಣ್ಣ ಬಂಡಿವಡ್ಡರ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ವಿಲೇವಾರಿ ಮಾಡಿದೆ.

ADVERTISEMENT

ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಸಂದೀಪ್‌ ಎಸ್‌.ಪಾಟೀಲ್ ಅವರ ವಾದ ಮಾನ್ಯ ಮಾಡಿರುವ ನ್ಯಾಯಪೀಠ, ‘ಉತ್ಸವದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಬೇಕು’ ಎಂದು ಪೊಲೀಸರು ಮತ್ತು ಹಾವೇರಿ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದೆ.

‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ–1960ರ ನಿಬಂಧನೆಗಳ ಅನುಸಾರ ಪ್ರಾಣಿಗಳ ಭಾಗವಹಿಸುವಿಕೆ ಅಥವಾ ಬಳಕೆಯ ವೇಳೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಷರತ್ತುಗಳಿಗೆ ಒಳಪಟ್ಟಿರುತ್ತವೆ. ಈ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು’ ಎಂದು ಅರ್ಜಿದಾರರಿಗೆ ಸ್ಪಷ್ಟಪಡಿಸಿದೆ.

ಹೋರಿ ಹಬ್ಬ: ಹೋರಿ ಹಬ್ಬ ಅಥವಾ ಹಟ್ಟಿ ಹಬ್ಬವು ಕರ್ನಾಟಕದ ಮುಖ್ಯವಾಗಿ ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ದೀಪಾವಳಿ ಸಮಯದಲ್ಲಿ ನಡೆಯುವ ಸಾಂಪ್ರದಾಯಿಕ ಸಾಹಸಮಯ ಗ್ರಾಮೀಣ ಕ್ರೀಡೆ ಎನಿಸಿದೆ.  ಜಲ್ಲಿಕಟ್ಟು ಕ್ರೀಡೆಗೆ ಹೋಲುವ ಈ ಹಬ್ಬದಲ್ಲಿ ಅಲಂಕರಿಸಿದ ಗೂಳಿಗಳನ್ನು ಜನಸಂದಣಿಯ ಮಧ್ಯೆ ಓಡಿಸಲಾಗುತ್ತದೆ. ಗೂಳಿಗಳ ಬೆನ್ನಿಗೆ ಕಟ್ಟಿದ ಬಹುಮಾನಗಳನ್ನು (ಕೊಪ್ಪೆ) ಕಿತ್ತುಕೊಳ್ಳಲು ಯುವಕರು ಪ್ರಯತ್ನಿಸುತ್ತಾರೆ.