ADVERTISEMENT

ಹಾಸ್ಟೆಲ್‌ಗೆ ಪರಿಶಿಷ್ಟ ವಿದ್ಯಾರ್ಥಿಗಳ ಪರದಾಟ!

ಎಲ್ಲರಿಗೂ ಪ್ರವೇಶ ನೀಡುವ 2013ರ ಸುತ್ತೋಲೆ ರದ್ದುಪಡಿಸಿದ ಸಮ್ಮಿಶ್ರ ಸರ್ಕಾರ

ಚಂದ್ರಹಾಸ ಹಿರೇಮಳಲಿ
Published 13 ಜುಲೈ 2019, 18:20 IST
Last Updated 13 ಜುಲೈ 2019, 18:20 IST
   

ಶಿವಮೊಗ್ಗ:ಅರ್ಜಿ ಸಲ್ಲಿಸಿದ ಪರಿಶಿಷ್ಟ ಜಾತಿ, ಪಂಗಡದ ಎಲ್ಲರಿಗೂ ಹಾಸ್ಟೆಲ್‌ ಸೌಲಭ್ಯ ಕಲ್ಪಿಸಬೇಕು ಎಂದು 2013–14ನೇ ಸಾಲಿನಲ್ಲಿ ಹೊರಡಿಸಿದ್ದ ಆದೇಶವನ್ನು ರಾಜ್ಯದ ಸಮ್ಮಿಶ್ರ ಸರ್ಕಾರ ಹಿಂಪಡೆದ ಪರಿಣಾಮ ಸಾವಿರಾರು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಕಾಂಗ್ರೆಸ್‌ 2013ರಲ್ಲಿ ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಿತ್ತು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳಲ್ಲಿ ಸೀಟು ನೀಡಿ, ಉಳಿದ ವಿದ್ಯಾರ್ಥಿಗಳಿಗೆ ಬಾಡಿಗೆ ಕಟ್ಟಡ ಪಡೆದು ವಸತಿ, ಊಟ ಕಲ್ಪಿಸುವಂತೆ ಆದೇಶಿಸಿತ್ತು. ಇದರಿಂದ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಾಸ್ಟೆಲ್‌ ಸೌಲಭ್ಯ ದೊರಕಿತ್ತು. ಈ ಸುತ್ತೋಲೆಯನ್ನು ರದ್ದುಪಡಿಸಿರುವ ಸಮ್ಮಿಶ್ರ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹಾಸ್ಟೆಲ್‌ಗಳಲ್ಲಿನ ಮಂಜೂರಾತಿ ಸಂಖ್ಯೆಗೆ ಅನುಗುಣವಾಗಿ ಸೀಟು ಭರ್ತಿ ಮಾಡುವಂತೆ ಸೂಚಿಸಿದೆ.

ಹೊಸಬರಿಗೆ ಅವಕಾಶವೇ ಇಲ್ಲ: ಸರ್ಕಾರದ ಆದೇಶದ ಪರಿಣಾಮ ಆಯಾ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಹಾಸ್ಟೆಲ್‌ಗಳಲ್ಲಿನ ಮಂಜೂರಾತಿ ಸಂಖ್ಯೆಗೆ ಅನುಗುಣವಾಗಿ ಸೀಟು ಭರ್ತಿ ಮಾಡಬೇಕು. ಒಂದು ಹಾಸ್ಟೆಲ್‌ನಲ್ಲಿ 100 ಮಂಜೂರಾದ ಸೀಟುಗಳಿದ್ದರೆ ಅಲ್ಲಿ ಹಿಂದೆ 200 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.

ADVERTISEMENT

ಹಿಂದಿನ ವರ್ಷ ದ್ವಿತೀಯ ಪಿಯು, ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿ ಹೊರಗೆ ಹೋದವರ ಸಂಖ್ಯೆ 50ರಷ್ಟಿದೆ. ಅಲ್ಲಿ ಉಳಿದವರು 150 ವಿದ್ಯಾರ್ಥಿಗಳು. ಅಂದರೆ ಹೊಸ ಆದೇಶದ ಪ್ರಕಾರ ಈ ಶೈಕ್ಷಣಿಕ ಸಾಲಿನಲ್ಲಿ ಇಂತಹ ಹಾಸ್ಟೆಲ್‌ಗಳಲ್ಲಿ ಒಬ್ಬ ವಿದ್ಯಾರ್ಥಿಗೂ ಪ್ರವೇಶ ನೀಡಲು ಸಾಧ್ಯವಿಲ್ಲ. ಅಲ್ಲದೇ ಇಂತಹ ಹಾಸ್ಟೆಲ್‌ಗಳಲ್ಲಿ ಹೆಚ್ಚುವರಿಯಾಗಿರುವ ವಿದ್ಯಾರ್ಥಿಗಳನ್ನು ಕಡಿಮೆ ಇರುವ ಕಡೆಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಇದರಿಂದ ಪ್ರಸಕ್ತ ವರ್ಷ ಪ್ರಥಮ ಪಿಯು, ಪದವಿ ಅಥವಾ ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ಪ್ರವೇಶ ಪಡೆದ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಬಾಗಿಲು ಬಂದ್‌.

ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಮೆಟ್ರಿಕ್‌ ನಂತರದ 634 ಹಾಸ್ಟೆಲ್‌ಗಳಿವೆ. ಅವುಗಳಲ್ಲಿ 604 ಕಾರ್ಯನಿರ್ವಹಿಸುತ್ತಿವೆ. 67,991 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅವಕಾಶವಿದೆ. ಪ್ರಸ್ತುತ 69,622 ವಿದ್ಯಾರ್ಥಿಗಳು ಇದ್ದಾರೆ. ಅಂದರೆ ಈಗಾಗಲೇ 1,631 ಹೆಚ್ಚುವರಿ ಇರುವ ಕಾರಣ ಹೊಸಬರಿಗೆ ಪ್ರವೇಶ ದೊರೆಯುತ್ತಿಲ್ಲ. ಹಾಸ್ಟೆಲ್‌ ಸಿಗುವ ಭರವಸೆ ಇಟ್ಟುಕೊಂಡು ದೂರದ ಊರುಗಳಿಂದನಗರ, ಪಟ್ಟಣಗಳಿಗೆ ಬಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ದುಬಾರಿ ಶುಲ್ಕ ತೆತ್ತು ಖಾಸಗಿ ಪಿ.ಜಿ.ಗಳ ಮೊರೆಹೋಗುತ್ತಿದ್ದಾರೆ. ಹೊರಗುತ್ತಿಗೆ ಮೇಲೆ ತೆಗೆದುಕೊಂಡಿದ್ದ ಹೆಚ್ಚುವರಿ ಅಡುಗೆ ಸಿಬ್ಬಂದಿಯನ್ನೂ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.

‘ವಿದ್ಯಾಸಿರಿ’ಯೂ ಇಲ್ಲ
ಹಾಸ್ಟೆಲ್‌ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದ ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ದೊರೆಯದಿದ್ದರೆ, ವಿದ್ಯಾಸಿರಿ ಯೋಜನೆ ಅಡಿ ಪ್ರತಿ ತಿಂಗಳು ₹ 1,500 ನೀಡಲಾಗುತ್ತದೆ. ಇಂತಹ ಸೌಲಭ್ಯವೂ ಪರಿಶಿಷ್ಟರಿಗೆ ಇಲ್ಲ. ಹಾಸ್ಟೆಲ್‌ ದೊರೆಯದ ಸ್ನಾತಕೋತ್ತರರಿಗೆ ₹ 550, ಪದವಿ ವಿದ್ಯಾರ್ಥಿಗಳಿಗೆ ₹ 300 ಹಾಗೂ ಪಿಯು ಓದುವವರಿಗೆ ₹ 230 ವಿದ್ಯಾರ್ಥಿವೇತನವಷ್ಟೇ ಸಿಗುತ್ತದೆ.

‘ರಾಯಚೂರು ಜಿಲ್ಲೆ, ಮಸ್ಕಿ ತಾಲ್ಲೂಕಿನ ಕುಗ್ರಾಮ ನಮ್ಮೂರು. ಪದವಿ ಮಾಡುವ ಆಸೆಯಿಂದ ಶಿವಮೊಗ್ಗಕ್ಕೆ ಬಂದಿದ್ದೇವೆ. ಇಲ್ಲಿ ಹಾಸ್ಟೆಲ್‌ ಸಿಕ್ಕಿಲ್ಲ. ಮನೆಯಲ್ಲಿ ಬಡತನ. ಹಣ ಕೊಟ್ಟು ಪಿ.ಜಿಗೆ ಸೇರಲು ಆಗುತ್ತಿಲ್ಲ. ಹಾಗಾಗಿ, ಪದವಿ ಕನಸು ಕೈಬಿಡುವ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಭಾವುಕರಾದರು ವಿದ್ಯಾರ್ಥಿನಿಯರಾದ ಶರಣಮ್ಮ, ಅನ್ನಪೂರ್ಣ.

**

ಹೆಚ್ಚುವರಿ ಪ್ರವೇಶ ನೀಡಿರುವ ಕಾರಣ ಸ್ಥಳ, ಅಭಾವ, ಸೌಕರ್ಯದ ಕೊರತೆ ಇತ್ತು. ಹೀಗಾಗಿ ಇಂತಹ ನಿರ್ಧಾರ ತೆಗೆದುಕೊಂಡು, ಲಭ್ಯವಿರುವ ಸೀಟು ಭರ್ತಿ ಮಾಡಿದ್ದೇವೆ.
-ಎಚ್‌.ವಿ.ಮಂಜುನಾಥ್, ಉಪ ನಿರ್ದೇಶಕ, ಸಮಾಜಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.