ಬೆಂಗಳೂರು: ಹೊಸೂರು-ಮೈಸೂರು ಮತ್ತು ತುಮಕೂರು ರಸ್ತೆ ನಡುವೆ ಸಂಪರ್ಕ ಕಲ್ಪಿಸುವ ಪೆರಿಫೆರಲ್ ರಿಂಗ್ ರಸ್ತೆ-2ರ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೊಂಡಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಈ ಸಂಬಂಧ ಕೆಂಗೇರಿ ಹೋಬಳಿಯ ಎಂ.ವನಿತಾ ಮತ್ತಿತರರು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಬಿಡಿಎ, 2011ರಲ್ಲಿ ಹೊರಡಿಸಿದ್ದ ಪ್ರಾಥಮಿಕ ಹಾಗೂ 2013ರಲ್ಲಿ ಪ್ರಕಟಿಸಿದ್ದ ಅಂತಿಮ ಅಧಿಸೂಚನೆ
ಗಳನ್ನು ಊರ್ಜಿತಗೊಳಿಸಿದೆ.
‘ಒಂದು ವೇಳೆ ಜಮೀನನ್ನು ಇನ್ನೂ ಸ್ವಾಧೀನಪಡಿಸಿಕೊಂಡಿಲ್ಲ ಎಂದಾದರೆ ಕೂಡಲೇ ಸ್ವಾಧೀನಕ್ಕೆ ಪಡೆದು
ಕೊಳ್ಳಬೇಕು ಮತ್ತು ಆರು ತಿಂಗಳಲ್ಲಿ ಪರಿಹಾರ ಘೋಷಿಸಬೇಕು’ ಎಂದು ಬಿಡಿಎಗೆ ನಿರ್ದೇಶಿಸಿರುವ ನ್ಯಾಯಪೀಠ, ‘ಸಾರ್ವಜನಿಕರು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಬಾಕಿ ಇರುವ ಟ್ರಕ್ ಟರ್ಮಿನಲ್, ಸ್ಕೈ ವಾಕ್, ಬಸ್ ಡಿಪೊ ಮತ್ತಿತರ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು’ ಎಂದು ಹೇಳಿದೆ.
‘ಬಿಡಿಎ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ಮಾರ್ಗ ಬದಲಾವಣೆ ಮಾಡಿದೆ’ ಎಂಬ ಅರ್ಜಿದಾರರ ವಾದವನ್ನು ತಳ್ಳಿಹಾಕಿರುವ ನ್ಯಾಯಪೀಠ, ‘ಈಗಾಗಲೇ ಪೆರಿಫೆರಲ್ ರಿಂಗ್ ರಸ್ತೆ ಭಾಗ-2ರಲ್ಲಿ ಬಿಡಿಎ ಶೇ 80ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಸಾರ್ವಜನಿಕರು ಹಾಗೂ ವಾಹನಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲ
ವಾಗುವಂತೆ ಮೆಟ್ರೊ ನಿಲ್ದಾಣ, ಸರ್ವೀಸ್ ರಸ್ತೆ ನಿರ್ಮಾಣ ಮತ್ತಿತರ ಕಾಮಗಾರಿ ಗಳನ್ನು ಕೈಗೊಳ್ಳಬೇಕಿದೆ. ಹಾಗಾಗಿ, ಈ ಹಂತದಲ್ಲಿ ಭೂ ಸ್ವಾಧೀನ
ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡ
ಲಾಗದು’ ಎಂದು ವಿವರಿಸಿದೆ.
ಅರ್ಜಿದಾರರ ಕೋರಿಕೆ ಏನಿತ್ತು?:
‘ಅಧಿಸೂಚನೆ ಬಿಡಿಎ ಕಾಯ್ದೆ-1976ರ ಕಲಂ 36 (3)ಕ್ಕೆ ವಿರುದ್ಧವಾಗಿದೆ. ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆಯ ಮಧ್ಯೆ ಸಾಕಷ್ಟು ಅಂತರವಿದೆ. ಅಂತೆಯೇ, ಭೂ ಮಾಲೀಕರಿಗೆ ಈತನಕ ಪರಿಹಾರ ಪ್ರಕಟಿಸಿಲ್ಲ. ಹಾಗಾಗಿ, ಅಧಿಸೂಚನೆಗಳನ್ನು ರದ್ದು ಗೊಳಿಸಬೇಕು’ ಎಂದು ಕೋರಿದ್ದರು.
ಬಿಡಿಎ ಪ್ರತಿವಾದ ಏನಿತ್ತು?:
‘ಪರಿಹಾರದ ನೋಟಿಸ್‌ಗಳನ್ನು ಈಗಾಗಲೇ ಭೂ ಮಾಲೀಕರಿಗೆ ನೀಡಲಾಗಿದೆ. ಕೆಲವು ಭೂ ಮಾಲೀಕರ ಜಮೀನಿನ ಮಹಜರು ನಡೆಸಿ ಎಂಜಿನಿಯರಿಂಗ್ ವಿಭಾಗಕ್ಕೆ ಜಮೀನು ಹಸ್ತಾಂತರ ಮಾಡಲಾಗಿದೆ.
ಕರ್ನಾಟಕ ನಗರ ಮತ್ತು ಪಟ್ಟಣ ಯೋಜನಾ ಕಾಯ್ದೆ–1961ರ ಪ್ರಕಾರ ರಸ್ತೆ ನಿರ್ಮಾಣ ಯೋಜನೆ ರದ್ದಾಗಿಲ್ಲ. ಒಟ್ಟು 10.35 ಕಿ.ಮೀ. ಪ್ರಮುಖ ರಸ್ತೆ ನಿರ್ಮಿಸಬೇಕಿತ್ತು. ಅದರಲ್ಲಿ 8.53 ಕಿ.ಮೀ. ರಸ್ತೆ ನಿರ್ಮಿಸಲಾಗಿದೆ.
ಉಳಿದ 1.8 ಕಿ.ಮೀ. ರಸ್ತೆ ಕಾಮಗಾರಿ ಮಾತ್ರ ಬಾಕಿ ಇದೆ. ಹಾಗಾಗಿ, ಅರ್ಜಿಗಳನ್ನು ವಜಾಗೊಳಿಸಬೇಕು’ ಎಂದು ಬಿಡಿಎ ನ್ಯಾಯಪೀಠಕ್ಕೆ ಮನವಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.