ಬೆಂಗಳೂರು: ‘ಮಾರ್ಚ್ 22ರಂದು ಹೋಟೆಲ್ ಬಂದ್ ಇರುವುದಿಲ್ಲ. ಅಂದು ಹೋಟೆಲ್‌ಗಳಿಗೆ ಪೊಲೀಸ್ ರಕ್ಷಣೆ ನೀಡಬೇಕು’ ಎಂದು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘವು ಒತ್ತಾಯಿಸಿದೆ.
ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನಿಗೆ ಇತ್ತೀಚೆಗೆ ಮಸಿ ಬಳಿದು, ಹಲ್ಲೆ ಮಾಡಿರುವುದನ್ನು ಖಂಡಿಸಿ ‘ಕರ್ನಾಟಕ ಬಂದ್’ಗೆ ವಾಟಾಳ್ ನಾಗರಾಜ್ ನೀಡಿದ್ದ ಕರೆಗೆ ನೈತಿಕ ಬೆಂಬಲವಷ್ಟೇ ವ್ಯಕ್ತವಾಗಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಹೋಟೆಲುಗಳ ಸಂಘ ಅಧ್ಯಕ್ಷ ಜಿ.ಕೆ. ಶೆಟ್ಟಿ, ಸಂಘವು ಕನ್ನಡ ಪರವಾದ ಚಟುವಟಿಕೆಗಳನ್ನು ಬೆಂಬಲಿಸಿಕೊಂಡು ಬಂದಿದೆ. ಕೂಲಿಕಾರ್ಮಿಕರು, ಕಾರ್ಪೋರೇಟ್ ಮತ್ತು ಉದ್ಯಮದವರು, ಪ್ರವಾಸಿಗರು ಹೋಟೆಲ್‌ಗಳನ್ನೇ ನಂಬಿದ್ದಾರೆ. ರಾಜ್ಯ ಸಂಘವು ಎಲ್ಲ ಜಿಲ್ಲಾ ಸಂಘಗಳೊಂದಿಗೆ ಎರಡು–ಮೂರು ಸುತ್ತಿನ ಚರ್ಚೆ ನಡೆಸಿದೆ. ಹೋಟೆಲ್ ಬಂದ್ ಮಾಡದೇ, ನೈತಿಕ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ವಿವಿಧ ಶಾಲಾ ಮತ್ತು ಬೋರ್ಡ್ ಪರೀಕ್ಷೆಗಳನ್ನು ಪರಿಗಣಿಸಿ ಬಂದ್ ಕರೆ ಹಿಂತೆಗೆದುಕೊಳ್ಳುವಂತೆ ಖಾಸಗಿ ಶಾಲೆಗಳ ಸಂಘವು ಒತ್ತಾಯಿಸಿದೆ.
‘ನಾವು ಬಂದ್‌ಗೆ ಬೆಂಬಲ ನೀಡುವುದಿಲ್ಲ’ ಎಂದು ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ತಿಳಿಸಿದ್ದಾರೆ.
ಸಿನಿಮಾ ಮೊದಲ ಪ್ರದರ್ಶನವಿಲ್ಲ: ‘ಚಿತ್ರಮಂದಿರಗಳಲ್ಲಿ ಮೊದಲ ಪ್ರದರ್ಶನವನ್ನು ರದ್ದು ಮಾಡುವ ಮೂಲಕ ಬೆಂಬಲ ನೀಡುತ್ತಿದ್ದೇವೆ. ಪರಿಸ್ಥಿತಿ ನೋಡಿಕೊಂಡು ಸಿನಿಮಾ ಪ್ರದರ್ಶನಗಳು ಮುಂದುವರಿಯಲಿವೆ. ಚಿತ್ರೀಕರಣ ಎಂದಿನಂತೆ ನಡೆಯಲಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಎಂ. ತಿಳಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ಎರಡೂ ಬಣಗಳು ಬೆಂಬಲ ನಿರಾಕರಿಸಿವೆ. ಹಲವು ಸಂಘಟನೆಗಳು ನೈತಿಕ ಬೆಂಬಲವನ್ನಷ್ಟೇ ವ್ಯಕ್ತಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.