ಪಾಕಿಸ್ತಾನ ಅಂದ್ರೆ ನನಗೆ ಆಗಕ್ಕಿಲ್ಲ
‘ಧರ್ಮಸ್ಥಳದ ವಿಚಾರ ಪಾಕಿಸ್ತಾನದ ಟಿವಿಗಳಲ್ಲೂ ಪ್ರಸಾರ ಆಗಿದೆ’ ಎಂದು ಬಿಜೆಪಿಯ ಭರತ್ ಶೆಟ್ಟಿ ಹೇಳಿದಾಗ ವಸತಿ ಸಚಿವ ಜಮೀರ್ ಅಹಮದ್ ಖಾನ್ ರೋಷಾವೇಶದಿಂದ ಎದ್ದು ನಿಂತು ‘ಪಾಕಿಸ್ತಾನ ಹೆಸರು ಹೇಳಬೇಡಿ, ಪಾಕಿಸ್ತಾನ ಅಂದ್ರೆ ನನಗೆ ಆಗಕ್ಕಿಲ್ಲ’ ಎಂದು ಕಿಡಿಕಾರಿದರು.
‘ನನಗೆ ಪಾಕಿಸ್ತಾನದ ಹೆಸರು ಕೇಳಿದ್ರೆ ಆಗಲ್ಲ. ಅದು ನಮ್ಮ ಶತ್ರುದೇಶ. ಪಾಕಿಗಳಿಗೆ ಗುಂಡು ಹೊಡೀತಿನಿ. ಶತ್ರು ದೇಶದ ಹೆಸರು ಏಕೆ ಎತ್ತುತ್ತೀರಿ’ ಎಂದು ಜಮೀರ್ ಮತ್ತೆ ಆವೇಶ ಭರಿತರಾದರು.
‘ಪಾಕಿಸ್ತಾನ ಎಂದರೆ ಏಕೆ ಪದೇ ಪದೇ ಎದ್ದು ನಿಲ್ಲುತ್ತೀರಿ. ನಿಮ್ಮವರೇ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಹಾಕಿದ್ದರಲ್ಲ’ ಎಂದು ಬಿಜೆಪಿ ಸದಸ್ಯರು ಕಾಲೆಳೆದರು.
ಆಗ ಮಧ್ಯ ಪ್ರವೇಶ ಮಾಡಿದ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ‘ಇಲ್ಲಿ ಎಲ್ಲರ ಸಮಸ್ಯೆ ಎಂದರೆ, ಕಿವಿಗೆ ಹೆಡ್ ಪೋನ್ ಸರಿಯಾಗಿ ಹಾಕಿಕೊಂಡು ಕೇಳಿಸಿಕೊಳ್ಳುವುದಿಲ್ಲ. ಭರತ್ ಶೆಟ್ಟಿ ಏನೋ ಹೇಳಿದರೆ, ಜಮೀರ್‌ಗೆ ಇನ್ನೇನೋ ಕೇಳಿಸಿದೆ. ಜಮೀರ್ ಅವರಿಗೆ ಪಾಕಿಸ್ತಾನದ ಹೆಸರು ಕೇಳಿದರೆ ಕೋಪ ಬರುತ್ತದೆಯಂತೆ. ಪಾಕಿಸ್ತಾನದ ಮೇಲೆ ಯುದ್ಧ ನಡೆದರೆ ತಮ್ಮ ದೇಹಕ್ಕೆ ಬಾಂಬ್ ಕಟ್ಟಿಕೊಂಡು ಹೋಗುತ್ತೇನೆ ಎಂದು ಈ ಹಿಂದೆಯೇ ಹೇಳಿದ್ದರು’ ಎಂದು ಕಾಲೆಳೆದರು.
‘ಛೇ ಅವರು ಬಾಂಬ್‌ಕಟ್ಟಿಕೊಂಡು ಹೋಗೋದು ಬೇಡ, ಅವರು ನಮ್ಮವರೇ ಇಲ್ಲೇ ಇರಲಿ’ ಎಂದು ಬಿಜೆಪಿಯ ಸತೀಶ್‌ರೆಡ್ಡಿ ಹೇಳಿದರು.
––––––––––––––––––––––
‘ಅಸಹಾಯಕ ಸರ್ಕಾರ ಅಂದ್ಕೊಂಡಿದ್ದೀರಾ?’
‘ಸರ್ಕಾರ ಅಷ್ಟೊಂದು ಅಸಹಾಯಕ ಆಗಿದೆ ಅಂದ್ಕೊಂಡಿದ್ದೀರಾ? ಸರ್ಕಾರ ಸುಮ್ಮನೆ ಕುಳಿತಿಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಎದೆ ಸೆಟೆಸಿ ನಿಂತರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 24 ಕೊಲೆ ಆರೋಪ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ’ ಎಂದು ಟೀಕಿಸಿದ ವಿರೋಧ ಪಕ್ಷದ ಸದಸ್ಯರಿಗೆ ಪರಮೇಶ್ವರ ನೀಡಿದ ತಿರುಗೇಟಿದು.
ಆಗ ಬಿಜೆಪಿಯ ಸುನಿಲ್ ಕುಮಾರ್, ‘ದೇಶದ ನಂ.1 ಗೃಹ ಸಚಿವರು ಕ್ರಮ ತೆಗೆದುಕೊಳ್ಳಬೇಕು’ ಎಂದು ಕಾಲೆಳೆದರು.
ಮಾತು ಮುಂದುವರಿಸಿದ ಪರಮೇಶ್ವರ, ‘ನೀವು ಏನೇ ಅಂದರೂ ನಾನು ಉದ್ವೇಗಕ್ಕೆ ಒಳಗಾಗಲ್ಲ. ಆ ವ್ಯಕ್ತಿ ವಿರುದ್ಧ ಹಲವು ಕೇಸ್‌ಗಳಿವೆ. ಆ ವ್ಯಕ್ತಿ ಹೆಸರು ಹೇಳಲ್ಲ. ಇಂಥ ವ್ಯಕ್ತಿಯನ್ನು ಸಮಾಜದಲ್ಲಿ ಹೀಗೇ ಸುಮ್ಮನೆ ಬಿಡಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಏನು ಕ್ರಮ ತೆಗೆದುಕೊಳ್ಳಬೇಕೊ ಅದನ್ನು ತೆಗೆದುಕೊಳ್ಳುತ್ತೇವೆ’ ಎಂದರು.
ಮಧ್ಯಪ್ರವೇಶಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಮುಖ್ಯಮಂತ್ರಿ ವಿರುದ್ಧ ಆರೋಪ ಮಾಡಿರುವ ವಿಡಿಯೊ ನಾನು ನೋಡಿದ್ದೇನೆ, ಕೇಳಿದ್ದೇನೆ. ಮುಖ್ಯಮಂತ್ರಿ ಮೇಲೆ ಕೊಲೆ ಆರೋಪ ಮಾಡಿದ್ದಾರೆ ಎನ್ನುವ ನಂಬರಿನ ವಿವರ ನನ್ನ ಮೊಬೈಲ್ನಲ್ಲಿದೆ. ಆ ವ್ಯಕ್ತಿ ಕೇವಲ ಮುಖ್ಯಮಂತ್ರಿ ಬಗ್ಗೆ ಹೇಳಿಲ್ಲ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಗ್ಗೆಯೂ ಆರೋಪ ಮಾಡಿದ್ದಾನೆ. ಆದರೆ, ಸದನದಲ್ಲಿ ಅಂಥವರ ಹೆಸರು ಪ್ರಸ್ತಾಪಿಸಿ ನಾಯಕನಂತೆ ವಿಜೃಂಭಿಸಬೇಡಿ’ ಎಂದರು.
––
ಹಾಗಾದ್ರೆ ನಮ್ಮ ಸರ್ಕಾರ ಖಚಿತ
ರಾಜ್ಯದಲ್ಲಿ ವನ್ಯಜೀವಿಗಳ ಸಂತತಿ ಹೆಚ್ಚಳ, ವನ್ಯಜೀವಿ–ಮಾನವ ಸಂಘರ್ಷಕ್ಕೆ ಸರ್ಕಾರ ಕೈಗೊಂಡ ಕ್ರಮಗಳು, ಮೃತಪಟ್ಟವರಿಗೆ ನೀಡಿದ ಪರಿಹಾರ ಕುರಿತು ವಿಧಾನಪರಿಷತ್‌ನಲ್ಲಿ ಬಿಜೆಪಿಯ ಕೇಶವ ಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಲು ಮುಂದಾದ ಅರಣ್ಯ ಸಚಿವ ಈಶ್ವರ ಖಂಡ್ರೆ, ಕೇಶವ ಪ್ರಸಾದ್ ಅವರನ್ನು ‘ಮಾನ್ಯ ಸಚಿವರೇ’ ಎಂದು ಸಂಬೋಧಿಸಿದರು.
ಆಗ ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ಮುಖ್ಯಸಚೇತಕ ಎನ್.ರವಿಕುಮಾರ್, ‘ಸಚಿವ ಮಾತಿನಿಂದ ಬಿಜೆಪಿಗೆ ಶುಭ ಸೂಚನೆ ಸಿಕ್ಕಿದೆ. ನಮ್ಮ ಸರ್ಕಾರ ಬರುತ್ತದೆ ಎನ್ನುವುದು ಖಚಿತವಾಯಿತು’ ಎಂದು ಕಾಲೆಳೆದರು.
ಅವರ ಮಾತಿಗೆ ಪ್ರತಿಕ್ರಿಯಿಸಿದ ಈಶ್ವರ ಖಂಡ್ರೆ, ‘ನೀವು ಕನಸು ಕಾಣುತ್ತಲೇ ಇರಿ. 2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ’ ಎಂದರು.
––
‘ಮನೆಯವರು ಊಟ ಹಾಕುವುದಿಲ್ಲ’
ಬೆಳಗಾವಿ ಜಿಲ್ಲಾಸ್ಪತ್ರೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳಿಲ್ಲ ಮತ್ತು ಕಟ್ಟಡ ಶಿಥಿಲವಾಗಿದೆ ಎಂದು ಕಾಂಗ್ರೆಸ್‌ನ ಎಂ. ನಾಗರಾಜು ಅವರು ಹತ್ತಾರು ಸಮಸ್ಯೆಗಳನ್ನು ಪಟ್ಟಿ ಮಾಡಿದರು.
ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು, ‘ವೈದ್ಯಕೀಯ ಶಿಕ್ಷಣ ಸಚಿವರೇ ಈ ಬಗ್ಗೆ ವಿವರವಾದ ಉತ್ತರ ನೀಡಿ. ಇದು ನಾಗರಾಜು ಅವರ ಪತ್ನಿಯವರ ಊರಿನ ವಿಚಾರ. ಹೀಗಾಗಿ ಅವರು ಬಹಳ ಕಳಕಳಿಯಿಂದ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ’ ಎಂದು ಸಚಿವ ಶರಣ ಪ್ರಕಾಶ ಪಾಟೀಲ ಅವರಿಗೆ ಸೂಚಿಸಿದರು.
ಸಚಿವ ಪಾಟೀಲರು, ‘ಹೌದು ನಾನೂ ಇದನ್ನು ಗಮನಿಸಿದೆ. ಅದು ಅವರ ಮನೆಯವರ ಊರು ಆಗಿರುವ ಕಾರಣಕ್ಕೇ ನಾಗರಾಜು ಅವರು ಬಹಳ ಆಕ್ರೋಶದಿಂದ ಈ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ. ಅವರು ಆ ಊರಿನ ಬಗ್ಗೆ ಅಷ್ಟು ಕಾಳಜಿ ತೋರದೇ ಇದ್ದರೆ, ಮನೆಯವರು ಮನೆಯಲ್ಲಿ ಊಟ ಹಾಕದೇ ಇರಬಹುದು’ ಎಂದರು ಕಾಲೆಳೆದರು.
–––––
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.