ADVERTISEMENT

HRMS System | ತಂತ್ರಾಂಶ ಅಡ್ಡಿ, ವೇತನ ವಿಳಂಬ

ಕೈಕೊಟ್ಟ ಎಚ್‌ಆರ್‌ಎಂಎಸ್‌–2 | 20 ದಿನದಿಂದ ವೇತನಕ್ಕಾಗಿ ಕಾದಿರುವ ಸಿಬ್ಬಂದಿ

ವಿಕ್ರಂ ಕಾಂತಿಕೆರೆ
Published 21 ಜುಲೈ 2025, 23:30 IST
Last Updated 21 ಜುಲೈ 2025, 23:30 IST
ಎಚ್‌ಆರ್‌ಎಂಎಸ್‌ ತಂತ್ರಾಂಶ
ಎಚ್‌ಆರ್‌ಎಂಎಸ್‌ ತಂತ್ರಾಂಶ   

ಮಂಗಳೂರು: ಸರ್ಕಾರಿ ನೌಕರರ ಮಾನವ ಸಂಪನ್ಮೂಲ ನಿರ್ವಹಣೆ ತಂತ್ರಾಂಶದ ಪರಿಷ್ಕೃತ ಆವೃತ್ತಿ ‘ಎಚ್‌ಆರ್‌ಎಂಎಸ್‌ 2.0’ ಅನ್ನು ಪ್ರಾಯೋಗಿಕವಾಗಿ ಅಳವಡಿಸಿರುವ ಇಲಾಖೆಗಳ ಪೈಕಿ ಕೆಲ ಇಲಾಖೆಗಳ ಸಿಬ್ಬಂದಿಗೆ 20 ದಿನ ಕಳೆದರೂ ಜೂನ್‌ ತಿಂಗಳ ವೇತನ ಜಮೆ ಆಗಿಲ್ಲ.

ಕೆಜಿಐಡಿ (ಕರ್ನಾಟಕ ಗವರ್ನ್‌ಮೆಂಟ್ ಇನ್ಶೂರೆನ್ಸ್ ಡಿಪಾರ್ಟ್‌ಮೆಂಟ್‌) ಕ್ರಮಸಂಖ್ಯೆ ಇರುವ ಉದ್ಯೋಗಿಗಳ ಎಲ್ಲ ವಿವರ ಎಚ್ಆರ್‌ಎಂಎಸ್‌ (ಹ್ಯೂಮನ್ ರಿಸೋರ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಂ) ತಂತ್ರಾಂಶದಲ್ಲಿ ಇರಲಿದೆ. ವೇತನ ಪಾವತಿ ಪ್ರಕ್ರಿಯೆ ಇದರ ಮೂಲಕವೇ ಆಗಲಿದೆ.

ಈ ತಂತ್ರಾಂಶದ ಪರಿಷ್ಕೃತ ಆವೃತ್ತಿಯನ್ನು ಜೂನ್ ತಿಂಗಳಿಂದ ಕೆಲವು ಇಲಾಖೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಹೊಸ ತಂತ್ರಾಂಶ ಅಳವಡಿಕೆ ಜೊತೆಗೆ ಅದರ ಬಳಕೆ ಕುರಿತು ತರಬೇತಿಯನ್ನೂ ನೀಡಲಾಗುತ್ತಿದೆ. ಆದರೆ ಸದ್ಯ ಪ್ರಯೋಗಕ್ಕೆ ಒಳಪಡಿಸಿರುವ ಇಲಾಖೆಗಳಲ್ಲಿ ವೇತನ ಕೈಸೇರಿಲ್ಲ.

ADVERTISEMENT

ಕೊಡಗು ಮತ್ತು ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಿಂದ ಈಗಾಗಲೇ ಈ ಸಂಬಂಧ ನೋಡಲ್ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಕೆಯಾಗಿದೆ.

ಪ್ರತಿ ತಿಂಗಳ ಕೊನೆಯಲ್ಲಿ ವೇತನಕ್ಕೆ ಸಂಬಂಧಿಸಿದ ಪ್ರಕ್ರಿಯೆ ಎಚ್‌ಆರ್‌ಎಂಎಸ್‌ನಲ್ಲಿ ನಡೆಯಲಿದೆ. ನೇರವಾಗಿ ಆಯಾ ಇಲಾಖೆಯ ಮುಖ್ಯಸ್ಥರಿಗೆ (ಡಿಡಿಒ–ಡ್ರಾಯಿಂಗ್ ಆ್ಯಂಡ್ ಡಿಸ್ಪರ್ಸಿಂಗ್ ಆಫೀಸರ್‌) ಹೋಗುತ್ತದೆ. ಅವರು ಲಾಗ್‌ ಇನ್ ಆಗಿ ಕೆಜಿಐಡಿ ಸಂಖ್ಯೆ ಮೂಲಕ ತಮ್ಮ ಅಧೀನ ಸಿಬ್ಬಂದಿಯ ವೇತನದ ಬಿಲ್ ಸಿದ್ಧಗೊಳಿಸಿ ಖಜಾನೆ–2ಗೆ ಕಳುಹಿಸುತ್ತಾರೆ. ಖಜಾನೆಯಿಂದ ಕೆಜಿಐಡಿಗಳಿರುವ ಖಾತೆಗಳಿಗೆ ವೇತನ ಜಮೆ ಮಾಡಲಾಗುತ್ತದೆ.

ಎಚ್‌ಆರ್‌ಎಂಎಸ್‌–2.0ದಲ್ಲಿ ವೇತನ ಪಾವತಿ ಕುರಿತು ಹಲವು ದೋಷಗಳಿವೆ ಎಂಬ ದೂರುಗಳು ಬಂದಿವೆ. ಹಲವು ಕಚೇರಿಗಳ ಡಿಡಿಒ ಸಂಖ್ಯೆ ತಪ್ಪಾಗಿ ನಮುದಾಗಿದೆ. ಕೆಲವು ಕಚೇರಿಗಳ ಡಿಡಿಒಗಳ ಹೆಸರೇ ತಪ್ಪಾಗಿದೆ. ಹೀಗಾಗಿ ಡ್ರಾಫ್ಟ್ ಬಿಲ್‌ ಸಿದ್ದಪಡಿಸಲು ಅಗುತ್ತಿಲ್ಲ. ಇದರಿಂದಾಗಿ ಆಧೀನ ಸಿಬ್ಬಂದಿ ಮಾತ್ರವಲ್ಲದೆ ಮುಖ್ಯಸ್ಥರಿಗೂ ವೇತನ ಪಡೆಯಲು ಆಗುತ್ತಿಲ್ಲ.

ಬಿಲ್ ಸಿದ್ಧಪಡಿಸಿ ಕಳುಹಿಸಿ ತಿಂಗಳು ಸಮೀಪಿಸುತ್ತಿದ್ದರೂ ಖಜಾನೆ–2ಗೆ ತಲುಪಿಲ್ಲ. ಇದನ್ನು ಎಚ್‌ಆರ್‌ಎಂಎಸ್‌–1ರಲ್ಲಿ ಪರಿಶೀಲಿಸಿದಾಗ ‘ಪೇ ಬಿಲ್ ರಿವರ್ಟೆಡ್’ ಸಂದೇಶ ಬರುತ್ತಿದೆ. ಇನಿಷಿಯೇಟರ್ ಲಾಗ್‌ಇನ್‌ನಲ್ಲಿ ಮತ್ತೊಂದು ಬಾರಿ ಬಿಲ್ ಸಿದ್ಧಪಡಿಸಲು ಅಗದ ಕಾರಣ ಫಜೀತಿಗೆ ಸಿಲುಕಿದಂತಾಗಿದೆ ಎಂದು ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕೆಲ ಕಚೇರಿಗಳಲ್ಲಿ ಯೂಸರ್ ನೇಮ್/ಪಾಸ್‌ವರ್ಡ್ ಇನ್‌ವ್ಯಾಲಿಡ್ ಎಂಬ ಸಂದೇಶ ಬರುತ್ತಿದ್ದು, ತಂತ್ರಾಂಶ ತೆರೆಯಲು ಸಾಧ್ಯವಾಗಿಲ್ಲ. ಹೀಗಾಗಿ ವೇತನ ಬಿಲ್ ಸಿದ್ಧಪಡಿಸಲು ಆಗಿಲ್ಲ ಎಂದು ನೋಡಲ್ ಅಧಿಕಾರಿಗೆ ದೂರು ನೀಡಲಾಗಿದೆ ಎಂದು ವಿವರಿಸಿದ್ದಾರೆ.

ರಾಜ್ಯಮಟ್ಟದಲ್ಲಿ ಎಚ್‌ಆರ್‌ಎಂಎಸ್‌ ತಂತ್ರಾಂಶವನ್ನು ನಿರ್ವಹಿಸುವ ಹಿರಿಯ ಅಧಿಕಾರಿ ಮತ್ತು ಖಜಾನೆಯ ಆಯುಕ್ತರು ಈ ಕುರಿತ ಪ್ರತಿಕ್ರಿಯೆಗಾಗಿ ಸಂಪರ್ಕಕ್ಕೆ ಸಿಗಲಿಲ್ಲ.

ಪ್ರಾಯೋಗಿಕವಾಗಿ ಹೊಸ ತಂತ್ರಾಂಶ ಬಳಸಲಾಗುತ್ತಿದೆ. ವೇತನ ವಿಳಂಬವಾಗಿರುವ ಇಲಾಖೆಯವರು ಮಾಹಿತಿ ನೀಡಿದರೆ ಸಂಬಂಧಿತ ಅಧಿಕಾರಿಗಳ ಸಂಪರ್ಕಿಸಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗುವುದು.
ಸಿ.ಎಸ್.ಷಡಾಕ್ಷರಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

‘ಖಜಾನೆಯಲ್ಲಿ ಸಮಸ್ಯೆ ಇಲ್ಲ’ ‘ವೇತನ ಜಮೆ ಕುರಿತು ಖಜಾನೆಯಲ್ಲಿ ಸಮಸ್ಯೆ ಇಲ್ಲ. ಡಿಡಿಒ ಕಳುಹಿಸಿದ ಬಿಲ್‌ಗೆ ಅನುಗುಣವಾಗಿ ಖಾತೆಗಳಿಗೆ ವೇತನ ಜಮೆ ಮಾಡುವುದಷ್ಟೇ ನಮ್ಮ ಕೆಲಸ. ಇದು ಒಂದೆರಡು ದಿನಗಳಲ್ಲಿ ಆಗಲಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಜಾನೆ ಅಧಿಕಾರಿ ರಮೇಶ್ ‘ಪ್ರಜಾವಾಣಿ‘ಗೆ ತಿಳಿಸಿದರು. ವೇತನದ ಬಿಲ್ ಎಷ್ಟು ಬೇಗ ಸಿದ್ಧವಾದರೂ ಆರ್‌ಬಿಐ ನಿಯಮಗಳ ಪ್ರಕಾರ ವೇತನ ಪಾವತಿ ಆಯಾ ತಿಂಗಳ ಕೊನೆಯಲ್ಲೇ ಆಗಲಿದೆ. ಈ ತಿಂಗಳು ಯಾರಿಗೆಲ್ಲ ಜಮೆ ಆಗಿದೆ ಎಂದು ಈಗಲೇ ಹೇಳಲಾಗದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.