ADVERTISEMENT

ಪ್ರತ್ಯೇಕ ರಾಜ್ಯದ ಕೂಗು ಬೇಡ: ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 18:30 IST
Last Updated 4 ಫೆಬ್ರುವರಿ 2020, 18:30 IST
ಎಚ್‌.ಎಸ್‌.ವೆಂಕಟೇಶಮೂರ್ತಿ
ಎಚ್‌.ಎಸ್‌.ವೆಂಕಟೇಶಮೂರ್ತಿ   

ಕಲಬುರ್ಗಿ: ‘ಪ್ರಾದೇಶಿಕ ಅಸಮತೋಲನೆಯ ಕಾರಣಕ್ಕೆ ಪ್ರತ್ಯೇಕ ರಾಜ್ಯದ ಕೂಗು ಸಲ್ಲದು. ಅಖಂಡ ಕರ್ನಾಟಕ ರಚನೆಗಾಗಿ ಹತ್ತಾರು ವರ್ಷ ಹೋರಾಟ ಮಾಡಿದ್ದೇವೆ. ಇದನ್ನು ಉಳಿಸಿಕೊಂಡು, ಕನ್ನಡತನ ಬೆಳೆಸಿಕೊಂಡು ಹೋಗಬೇಕು. ಪ್ರಾದೇಶಿಕ ಅಸಮತೋಲನ ಹೊಡೆದೋಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.

ಸಾಹಿತ್ಯ ಸಮ್ಮೇಳನದ ಮುನ್ನಾ ದಿನವಾದ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕನ್ನಡ ಉಳಿಯಬೇಕಾದರೆ ಮಕ್ಕಳಲ್ಲಿ ಕನ್ನಡದ ಜಾಗೃತಿ ಅತ್ಯಗತ್ಯ.ಗಡಿ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದೇಶದ ಏಕತೆಗೆ ಕಂಟಕ ಒಡ್ಡಿದಂತೆ. ಪದೇ ಪದೇ ಗಡಿ ವಿವಾದ ಕೆದಕುವುದರಿಂದ ದೇಶದ ಅಖಂಡತೆಗೆ ಧಕ್ಕೆ ಬರುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರವೇ ಇಂಗ್ಲಿಷ್ ಶಾಲೆಗಳನ್ನು ತೆಗೆಯುತ್ತಿರುವುದು ದೊಡ್ಡ ದುರಂತ. ಅದೇ ರೀತಿ ನೆರೆ ರಾಜ್ಯಗಳ ಗಡಿಯಲ್ಲಿನ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದೂ ಆತಂಕಕಾರಿ ವಿದ್ಯಮಾನ. ರಾಜ್ಯದ ಒಳಗೆ ಮತ್ತು ಹೊರಗೆ ಎರಡೂ ಕಡೆ ಕನ್ನಡದ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಆಲೋಚಿಸಬೇಕಿದೆ. ಕನ್ನಡ ಉಳಿಸಲು ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ’ ಎಂದರು.

ADVERTISEMENT

ಸಮ್ಮೇಳನದಲ್ಲಿ ಭಾಗವಹಿಸಲು ಮಂಗಳವಾರ ಬೆಳಿಗ್ಗೆ ರೈಲಿನ ಮೂಲಕ ನಗರಕ್ಕೆ ಬಂದಿಳಿದ ವೆಂಕಟೇಶಮೂರ್ತಿ ಹಾಗೂ ಅವರ ಕುಟುಂಬ ಸದಸ್ಯರನ್ನು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ, ಜಿ.ಪಂ. ಸಿಇಒ ಡಾ.ರಾಜಾ ಪಿ. ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.