ADVERTISEMENT

ಹುಬ್ಬಳ್ಳಿ: ಗೋಡೆ ಕುಸಿದು ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 2:39 IST
Last Updated 28 ಜುಲೈ 2022, 2:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಕೆಲವು ದಿನಗಳಿಂದ ಕಡಿಮೆಯಾಗಿದ್ದ ಮಳೆ ಬುಧವಾರ ಸಾಯಂಕಾಲ ನಗರದಲ್ಲಿ ಏಕಾಏಕಿ ರಭಸವಾಗಿ ಸುರಿಯಿತು. ಅಬ್ಬರದ ಮಳೆಗೆ ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಶ್ರೇಯಾ ಜ್ಯುಪಿಟರ್‌ ಕಾಂಪ್ಲೆಕ್ಸ್‌ನ ತಡೆಗೋಡೆ ಕುಸಿದು ಕಲಬುರ್ಗಿ ಮೂಲದ, ಇಲ್ಲಿನ ಬೆಂಗೇರಿ ನಿವಾಸಿ ದರ್ಶನ್‌(16)ಮೃತಪಟ್ಟಿದ್ದಾರೆ.

ಮಾರುಕಟ್ಟೆ ಪ್ರದೇಶ ಸೇರಿದಂತೆ, ಕೆಲವು ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದೆ. ಹೊಸೂರು ವೃತ್ತ, ಹೊಸೂರು ಬಿಆರ್‌ಟಿಎಸ್‌ ಬಸ್‌ ನಿಲ್ದಾಣ, ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ನೀರು
ನಿಂತಿತ್ತು.

ಸಿಡಿಲು ಬಡಿದು ಯುವತಿಗೆ ಗಾಯ

ADVERTISEMENT

ಉತ್ತರ ಕನ್ನಡದ ಹಳಿಯಾಳ, ಸಿದ್ದಾಪುರ, ಭಟ್ಕಳ ತಾಲ್ಲೂಕುಗಳ ಕೆಲವೆಡೆ ಸಂಜೆ ಮಳೆಯಾಗಿದೆ. ಸಿದ್ದಾಪುರ ತಾಲ್ಲೂಕಿನ ಹೇಮಗಾರ ಗ್ರಾಮದಲ್ಲಿ ಸಿಡಿಲು ಬಡಿದು ಜ್ಯೋತಿ ಅಣ್ಣಪ್ಪ ನಾಯ್ಕ (20) ಎಂಬುವವರು ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗಕ್ಕೆ ಕರೆದುಕೊಂಡು
ಹೋಗಲಾಗಿದೆ.

ಹಳಿಯಾಳದಲ್ಲಿ ಅರ್ಧ ಗಂಟೆಗೂ ಹೆಚ್ಚು ಜೋರಾಗಿ ಮಳೆಯಾದ ಬಗ್ಗೆ ವರದಿಯಾಗಿದೆ.

ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ದಂಪತಿ‌ ಶವ ಪತ್ತೆ

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ‌ ಜಟ್ಟೂರು ಗ್ರಾಮದ ಬಳಿ ಕಾಗಿಣಾ ನದಿಯ ಪ್ರವಾಹದಲ್ಲಿ ಮಂಗಳವಾರ ಮಧ್ಯಾಹ್ನ ಕೊಚ್ಚಿ ಹೋಗಿದ್ದ ತೆಲಂಗಾಣದ ಮಂತಟ್ಟಿ ಗ್ರಾಮದ ಬುಗ್ಗಪ್ಪ ನರಸಪ್ಪ (60) ಮತ್ತು ಯಾದಮ್ಮ ಬುಗ್ಗಪ್ಪ (55) ದಂಪತಿ ಶವಗಳು ಬುಧವಾರ ಬೆಳಿಗ್ಗೆ ಪತ್ತೆಯಾಗಿವೆ.‌

‌‘ತರಕಾರಿ ಮಾರಲು ಚಂದ್ರವಂಚ ಗ್ರಾಮಕ್ಕೆ ಬಂದಿದ್ದ ಅವರಿಬ್ಬರೂ ಮನೆಗೆ ಮರಳುತ್ತಿದ್ದ ವೇಳೆ ಘಟನೆ ನಡೆದಿದೆ. ಮಂಗಳವಾರ ಸಂಜೆ ಯಾದಮ್ಮ ಶವ ಕಾಣಿಸಿತ್ತು. ಆದರೆ, ಪ್ರವಾಹ ಹೆಚ್ಚಿದ್ದ ಕಾರಣ ಕಾರ್ಯಾಚರಣೆ ನಡೆಸಲು ಆಗಿರಲಿಲ್ಲ. ಬುಧವಾರ ಬೆಳಿಗ್ಗೆ ಪ್ರವಾಹ ಕೊಂಚ ತಗ್ಗಿದ್ದರಿಂದ ಶವಗಳು ಪತ್ತೆಯಾದವು’ ಎಂದು ಸುಲೇಪೇಟ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮೈಸೂರು, ಕೊಡಗಿನಲ್ಲಿ ಮಳೆ

ಮೈಸೂರು/ಮಡಿಕೇರಿ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಲ್ಲಿ ಬುಧವಾರ ಸಂಜೆ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಬಿರುಸಿನ ಮಳೆ ಸುರಿಯಿತು.

ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಸೋಮವಾರಪೇಟೆ, ಶನಿವಾರಸಂತೆ, ನಾಪೋಕ್ಲು, ಸುಂಟಿಕೊಪ್ಪ ಭಾಗಗಳಲ್ಲಿ ಬುಧವಾರ ಸಂಜೆಯಿಂದ ಗುಡುಗು ಸಹಿತ ಭಾರಿ ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.