ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಎನ್‌ಕೌಂಟರ್ ಘಟನೆಯು ದೇಶದಲ್ಲಿ ಈ ಹಿಂದೆ ನಡೆದಿರುವ ಎನ್‌ಕೌಂಟರ್‌ಗಳನ್ನು ನೆನಪಿಸಿದೆ. ಜನರ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದ ಕೆಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.
2019ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಎನ್‌ಕೌಂಟರ್ ಘಟನೆಯು ದೇಶದಾದ್ಯಂತ ಸುದ್ದಿಯಾಗಿತ್ತು. 26 ವರ್ಷದ ಪಶುವೈದ್ಯೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯನ್ನು ಕೊಂದು ಸುಟ್ಟುಹಾಕಿದ್ದ ಪ್ರಕರಣದ ನಾಲ್ವರು ಆರೋಪಿಗಳನ್ನು ತೆಲಂಗಾಣ ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದಿದ್ದರು.
ಈ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವು ದೇಶದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣವನ್ನು ‘ದಿಶಾ’ ಪ್ರಕರಣ ಎಂದೇ ಗುರುತಿಸಲಾಗುತ್ತಿದೆ. ಯುವತಿಯ ಶವವನ್ನು ಸುಟ್ಟಿದ್ದ ಜಾಗದ ಮಹಜರು ನಡೆಸಲು ಆರೋಪಿಗಳನ್ನು ಕರೆದುಕೊಂಡು ಹೋಗಿದ್ದಾಗ ಎನ್‌ಕೌಂಟರ್ ನಡೆದಿತ್ತು.
ಎನ್‌ಕೌಂಟರ್‌ನ ತನಿಖೆಗೆ ಸುಪ್ರೀಂ ಕೋರ್ಟ್ ನೇಮಿಸಿದ್ದ ತನಿಖಾ ಆಯೋಗವು, ‘ಪೊಲೀಸರು ಉದ್ದೇಶಪೂರ್ವಕವಾಗಿಯೇ ಎನ್‌ಕೌಂಟರ್ ನಡೆಸಿದ್ದಾರೆ’ ಎಂದು ವರದಿ ನೀಡಿತ್ತು. ನಕಲಿ ಎನ್‌ಕೌಂಟರ್‌ಗೆ ಯೋಜನೆ ರೂಪಿಸಿದ 10 ಪೊಲೀಸರ ವಿರುದ್ಧ ಕೊಲೆಯ ದೋಷಾರೋಪ ನಿಗದಿ ಮಾಡುವಂತೆಯೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಎಸ್. ಸಿರ್ಪುರಕರ್ ನೇತೃತ್ವದ ಆಯೋಗ ಶಿಫಾರಸು ಮಾಡಿತ್ತು.
ಇತರ ಪ್ರಕರಣಗಳು:
* ಮಾರ್ಚ್ 21, 2025: ಉತ್ತರ ಪ್ರದೇಶದ ಲಖನೌದಲ್ಲಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯ ಹತ್ಯೆಗೈದ ಆರೋಪಿ ಅಜಯ್ ದ್ವಿವೇದಿ ಎಂಬಾತ ಪೊಲೀಸ್ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದ.
* ಸೆ.23, 2024: ಮಹಾರಾಷ್ಟ್ರದ ಬದ್ಲಾಪುರದಲ್ಲಿ ಇಬ್ಬರು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಅಕ್ಷಯ್ ಶಿಂದೆ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ. ಎನ್‌ಕೌಂಟರ್‌ಗೆ ಕಾರಣರಾಗಿದ್ದಾರೆ ಎನ್ನಲಾದ ಐವರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ಈಚೆಗೆ ಆದೇಶಿಸಿದೆ.
* ಜೂನ್ 1, 2024: ಉತ್ತರ ಪ್ರದೇಶದ ಮಥುರಾದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ, 29 ವರ್ಷದ ಮನೋಜ್ ಎಂಬಾತ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.