ADVERTISEMENT

ಮಾನವ–ಪ್ರಾಣಿ ಸಂಘರ್ಷ: ಚಾಮರಾಜನಗರ ಮೈಸೂರು ಜಿಲ್ಲೆಯಲ್ಲಿ ಸಫಾರಿಗೆ ನಿರ್ಬಂಧ?

ಅರಣ್ಯ, ಕಂದಾಯ, ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ‌ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 6:37 IST
Last Updated 3 ನವೆಂಬರ್ 2025, 6:37 IST
<div class="paragraphs"><p>ಮೈಸೂರು&nbsp;ಜಿಲ್ಲೆಯ ಸರಗೂರು ತಾಲ್ಲೂಕಿನ ಬಡಗನಪುರ ಗ್ರಾಮದಲ್ಲಿ ರೈತರ ಮೇಲೆ ದಾಳಿ ಮಾಡಿದ ಹುಲಿ</p></div>

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಬಡಗನಪುರ ಗ್ರಾಮದಲ್ಲಿ ರೈತರ ಮೇಲೆ ದಾಳಿ ಮಾಡಿದ ಹುಲಿ

   

ಚಾಮರಾಜನಗರ: ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯಲ್ಲಿ ಮಾನವ ಪ್ರಾಣಿ ಸಂಘರ್ಷ ನಿಯಂತ್ರಣಕ್ಕೆ ಬಾರದಿದ್ದರೆ ಸಫಾರಿ ನಿರ್ಬಂಧಕ್ಕೆ ಕ್ರಮ ಕೈಗೊಳ್ಳಲಾವುದು ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಅರಣ್ಯ, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಾಗಿರುವ ಸ್ಥಳಗಳಲ್ಲಿ ನಿಯೋಜನೆಗೆ ಸಿಬ್ಬಂದಿ ಕೊರತೆಯಾದರೆ ಸಫಾರಿಗೆ ನಿಯೋಜಿಸಿರುವ ಸಿಬ್ಬಂದಿಯನ್ನೇ ನಿಯೋಜನೆ ಮಾಡಬೇಕು ಎಂದು ಸೂಚನೆ ನೀಡಿದರು.

ADVERTISEMENT

ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಇಲಾಖೆಗಳ ಮಧ್ಯೆ ಸಮನ್ವಯತೆ ಕೊರತೆ, ಪರಸ್ಪರ ಟೀಕೆ, ಆರೋಪಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಅರಣ್ಯದೊಳಗೆ ಆನೆ, ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಅರಣ್ಯ ಪ್ರಮಾಣ ವಿಸ್ತಾರವಾಗಿಲ್ಲ. ಲಭ್ಯವಿರುವ ಕಾಡಿನೊಳಗೆ ವನ್ಯಜೀವಿಗಳಿಗೆ ಸೂಕ್ತ ಆಹಾರ ದೊರೆಯುವಂತೆ ಕಾರ್ಯಯೋಜನೆ ರೂಪಿಸಬೇಕು. ಮಾಂಸಾಹಾರಿ ಪ್ರಾಣಿಗಳಿಗೆ ಜಿಂಕೆ, ಕಡವೆ ಸೇರಿದಂತೆ ಇತರೆ ಸಸ್ಯಾಹಾರಿ ಪ್ರಾಣಿಗಳು ಬೇಟೆಗೆ ಸಿಗಬೇಕಾದರೆ ಹುಲ್ಲುಗಾವಲು ಸಮೃದ್ಧವಾಗಿರಬೇಕು ಎಂದರು.

ಸಸ್ಯಾಹಾರಿ ಪ್ರಾಣಿಗಳಿಗೆ ಮೇವಿನ ಕೊರತೆಯಾಗದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಲಂಟನಾ, ಸನ್ನಾ ಸಹಿತ ಇತ್ಯಾದಿ ಕಳೆ ಗಿಡಗಳನ್ನು ತೆಗೆದು ಸೊಪ್ಪು ಹಾಗೂ ಸ್ಥಳೀಯ ಹುಲ್ಲಿನ ಪ್ರಬೇಧ ಬೆಳೆಯಲು ಪೂರಕ ವಾತಾವರಣ ನಿರ್ಮಿಸಬೇಕು ಎಂದು ಸೂಚನೆ ನೀಡಿದರು.

ಇತ್ತೀಚೆಗೆ ಸರಗೂರಿನಲ್ಲಿ ಹುಲಿ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನು ಸರಗೂರು, ಎಚ್.ಡಿ.ಕೋಟೆ ಅಥವಾ ನಂಜನಗೂಡಿನಲ್ಲಿ ಮಾಡಿಸಬಹುದಾಗಿತ್ತು. ಮೈಸೂರಿಗೆ ಮೃತದೇಹ ತಂದು ಅನಗತ್ಯ ಗೊಂದಲ ಸೃಷ್ಟಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಸಚಿವರು, ‘ಸರ್ಕಾರ ಹಾಗೂ ಸಚಿವರ ಮೇಲೆ ಆರೋಪ ಬರುವಂತಹ ಕೆಲಸ ಮಾಡಬೇಡಿ. ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ತಾಕೀತು ಮಾಡಿದರು.

ಮಾನವ-ವನ್ಯಜೀವಿ ಸಂಘರ್ಷದಲ್ಲಿ ಮೃತಪಟ್ಟರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜವಾಬ್ದಾರಿಯುತವಾಗಿ
ಕಾರ್ಯನಿರ್ವಹಿಸಬೇಕು. ತಕ್ಷಣ ಮರಣೋತ್ತರ ಪರೀಕ್ಷೆ ನಡೆಸಿ ಮೃತರ ಕುಟುಂಬಕ್ಕೆ ಪಾರ್ಥಿವ ಶರೀರ ಒಪ್ಪಿಸಬೇಕು ಎಂದು ಸೂಚನೆ ನೀಡಿದರು.

8 ಅಂಶಗಳ ಕಾರ್ಯಯೋಜನೆ:  ಮಾನವ–ವನ್ಯಜೀವಿ ಸಂಘರ್ಷ ಪ್ರದೇಶಗಳನ್ನು ಗುರುತಿಸಿ ಸಮಸ್ಯೆ ಪಟ್ಟಿ ಮಾಡಬೇಕು. ಮಾನವ ಸಂಪನ್ಮೂಲ ಸಮರ್ಪಕ ನಿರ್ವಹಣೆಯಾಗಬೇಕು, ಸಂಘರ್ಷದ ತೀವ್ರತೆ ಆಧಾರದ ಮೇಲೆ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜನೆ ಮಾಡಬೇಕು. ಅಗತ್ಯಬಿದ್ದರೆ ಸಮೀಪದ ವಲಯದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಬೇಕು.

ಅರಣ್ಯದೊಳಗೆ ಹಾಗೂ ಅರಣ್ಯದಂಚಿನ ಗ್ರಾಮಗಳಲ್ಲಿ ಗಸ್ತು ಹೆಚ್ಚಿಸಿ, ಗಸ್ತು ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ಗಸ್ತು ಮಾಡಿದ ಬಗ್ಗೆ ರಿಜಿಸ್ಟರ್ ನಿರ್ವಹಣೆ ಮಾಡಬೇಕು. ಹಿರಿಯ ಅಧಿಕಾರಿಗಳು ನಿಯಮಿತವಾಗಿ ಅರಣ್ಯದಂಚಿನ ಹಾಗೂ ಸಂಘರ್ಷ ಪೀಡಿತ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಸಮಸ್ಯೆ ಪರಿಹರಿಸಬೇಕು ಎಂದು ಹೇಳಿದರು.

‘ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ’

ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಸ್ಥಳೀಯರ ಬೆಂಬಲ ಅಗತ್ಯವಾಗಿದ್ದು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅರಣ್ಯದಂಚಿನ ಗ್ರಾಮಗಳ ಉತ್ಸಾಹಿ ಯುವಕರು ಹಾಗೂ ಹಿರಿಯರನ್ನು ಗುರುತಿಸಿ ಅರಣ್ಯ ಮಿತ್ರರು ಎಂದು ಪರಿಗಣಿಸಿ ಗಸ್ತು ಹಾಗೂ ವನ್ಯಜೀವಿ ಸೆರೆ ಕಾರ್ಯಾಚರಣೆ ವೇಳೆ ಸ್ಥಳೀಯರ ಸೇವೆ ಬಳಸಿಕೊಳ್ಳಬೇಕು. ವಾಹನಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ವನ್ಯಜೀವಿ ದಾಳಿ ಮಾಡಿದಾಗ ಸ್ಪಂದಿಸಬೇಕಾದ ಕ್ರಮಗಳ ಕುರಿತು ಗ್ರಾಮದ ಯುವಕರಿಗೆ ಹಾಗೂ ಜನರಿಗೆ ಅಣಕು ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಬೇಕು. ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಮಿತಿ ತಾಲ್ಲೂಕು ಮಟ್ಟದಲ್ಲಿ ಉಪ ಸಮಿತಿ ರಚಿಸಿ ನಿಯಮಿತ ಸಭೆಗಳನ್ನು ನಡೆಸಿ ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಣ ಮಾಡಬೇಕು ಎಂದು ಸಚಿವರು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.