ADVERTISEMENT

ಅಕ್ರಮ ಸಾಗಣೆ; ಮಹಿಳೆಯರು, ಮಕ್ಕಳೇ ಗುರಿ: ಮೂರು ವರ್ಷಗಳಲ್ಲಿ 1,003 ಪ್ರಕರಣಗಳು

ಶಿವರಾಯ ಪೂಜಾರಿ
Published 2 ಏಪ್ರಿಲ್ 2024, 20:11 IST
Last Updated 2 ಏಪ್ರಿಲ್ 2024, 20:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ರಾಯಿಟರ್ಸ್

ಹುಬ್ಬಳ್ಳಿ: ರಾಜ್ಯದಲ್ಲಿ ಮಹಿಳೆಯರ, ಮಕ್ಕಳ ಅಕ್ರಮ ಸಾಗಣೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಕಳೆದ ಮೂರು ವರ್ಷಗಳಲ್ಲಿ 1,003 ಪ್ರಕರಣಗಳು ವರದಿಯಾಗಿವೆ.

ADVERTISEMENT

2021ರಿಂದ 2024ರ ಜನವರಿ 31ರವರೆಗೆ ಮಹಿಳೆಯರ ಅಕ್ರಮ ಸಾಗಣೆ ಪ್ರಕರಣಗಳೇ ಹೆಚ್ಚು ವರದಿಯಾಗಿವೆ. 860 ಮಹಿಳೆಯರು, 56 ಬಾಲಕರು, 87 ಬಾಲಕಿಯರ ಅಕ್ರಮ ಸಾಗಣೆ ನಡೆದಿದೆ. ಬೆಂಗಳೂರಿನಲ್ಲಿ 695 ಅಕ್ರಮ ಸಾಗಣೆ ಪ್ರಕರಣಗಳು ಪತ್ತೆಯಾಗಿವೆ.

‘ಕೆಲ ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿದ್ದು, ಕಾನೂನು ಕಣ್ತಪ್ಪಿಸಿ ದೊಡ್ಡಮಟ್ಟದಲ್ಲಿ ಈ ಜಾಲ ರಾಜ್ಯದಲ್ಲಿ ವ್ಯಾಪಿಸಿದೆ. ಮಾನವ ಕಳ್ಳ ಸಾಗಣೆಗೆ ಮಹಿಳೆಯರು, ಮಕ್ಕಳು, ಬಡವರು ಹೆಚ್ಚು ಒಳಪಡುತ್ತಾರೆ. ಕಳ್ಳ ಸಾಗಣೆದಾರರು ಉದ್ಯೋಗ, ಆದಾಯ, ಜೀವನಕ್ರಮ ಸುಧಾರಣೆ ಆಮಿಷವೊಡ್ಡಿ ವೇಶ್ಯಾವಾಟಿಕೆ, ಅಶ್ಲೀಲ ಚಿತ್ರೀಕರಣ, ಬಾರ್‌ಗಳಲ್ಲಿ ನೃತ್ಯ, ಬಲವಂತದ ವಿವಾಹ, ದುಡಿಮೆ, ಗುಲಾಮ ವೃತ್ತಿ, ಭಿಕ್ಷಾಟನೆಗೆ ದೂಡುತ್ತಾರೆ’ ಎಂದು ಮೂಲಗಳು ತಿಳಿಸಿವೆ.

‘ಬೆಳಗಾವಿಯಲ್ಲಿ ಗುಜರಾತ್‌, ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ 9 ಮಕ್ಕಳು ಮತ್ತು 7 ಮಹಿಳೆಯರನ್ನು ರಕ್ಷಿಸಲಾಗಿದೆ. 19  ರಿಂದ 25 ವರ್ಷದ ಮಹಿಳೆಯರ ಅಕ್ರಮ ಸಾಗಣೆ ಮಾಡಿ, ವೇಶ್ಯಾವಾಟಿಕೆಗೆ ಬಳಸಲಾಗುತ್ತದೆ. ಒಬ್ಬರೇ ಪಾಲಕರನ್ನು ಹೊಂದಿದವರು, ವಿಧವೆಯರು ಮತ್ತು ಪ್ರೇಮ ಪ್ರಕರಣಗಳಲ್ಲಿ ವೈಫಲ್ಯಕ್ಕೆ ಒಳಗಾದವರು ಇದ್ದಾರೆ’ ಬೆಳಗಾವಿಯ ಉಜ್ವಲಾ ಮಹಿಳೆಯರ ರಕ್ಷಣೆ ಮತ್ತು ಪುನವರ್ಸತಿ ಕೇಂದ್ರದ ಯೋಜನಾ ನಿರ್ದೇಶಕಿ ಸುರೇಖಾ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾನವ ಕಳ್ಳ ಸಾಗಣೆ ತಡೆಗೆ ಸಿಐಡಿ ಘಟಕದಲ್ಲಿ ಮಾನವ ಕಳ್ಳ ಸಾಗಣೆ ತಡೆ ಘಟಕ ಸ್ಥಾಪಿಸಲಾಗಿದೆ. ಪೊಲೀಸ್ ಇಲಾಖೆ ಮತ್ತು ಸರ್ಕಾರೇತರ ಸಂಘಸಂಸ್ಥೆಗಳು ಮಾನವ ಕಳ್ಳ ಸಾಗಣೆ ತಡೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಸಂತ್ರಸ್ತರನ್ನು ರಕ್ಷಿಸಿ, ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.