
ಸುಪ್ರೀಂ ಕೋರ್ಟ್
ಪಿಟಿಐ ಚಿತ್ರ
ನವದೆಹಲಿ: ಮಾನವ ಕಳ್ಳಸಾಗಾಟ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ‘ಸಂತ್ರಸ್ತೆ ಬಾಲಕಿಯು ಘಟನೆಯ ಸಂದರ್ಭದಲ್ಲಿ ಏಕಾಂಗಿಯಾಗಿದ್ದು, ಆಕೆಯ ಹೇಳಿಕೆಯನ್ನು ಓರ್ವ ಗಾಯಾಳುವಿನ ಸಾಕ್ಷಿಯಂತೆ ಪರಿಗಣಿಸಬೇಕು’ ಎಂದು ಶುಕ್ರವಾರ ಹೇಳಿದೆ.
ಬೆಂಗಳೂರಿನ ಕೆ.ಪಿ.ಕಿರಣ್‌ಕುಮಾರ್ ಅಲಿಯಾಸ್ ಕಿರಣ್ ಎಂಬಾತನ ಸಜೆಯನ್ನು ಎತ್ತಿಹಿಡಿದಿರುವ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಜೊಯ್‌ಮಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠ, ‘ಸಂತ್ರಸ್ತೆಯ ಹೇಳಿಕೆಗಳು ವಿಶ್ವಾಸಾರ್ಹ ಮತ್ತು ಸೂಕ್ತವೆನಿಸಿದಲ್ಲಿ, ಆಕೆಯ ಏಕೈಕ ಹೇಳಿಕೆಯ ಆಧಾರದ ಮೇಲೆಯೇ ಶಿಕ್ಷೆಯ ಆದೇಶವನ್ನು ಮುಂದುವರಿಸಬಹುದು’ ಎಂದು ಹೇಳಿದೆ.
ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ಕಾನೂನುಗಳು, ಸುರಕ್ಷತಾ ನಿಯಮಗಳ ಹೊರತಾಗಿಯೂ ಮುಂದುವರಿಯುತ್ತಿರುವ ಸಂಘಟಿತ ಶೋಷಣೆಯ ಭದ್ರವಾದ ಮಾದರಿಯ ಭಾಗವಾಗಿದೆ. ಇಂತಹ ಪ್ರಕರಣಗಳ ಸೂಕ್ಷ್ಮತೆಗಳನ್ನು ಸಂತ್ರಸ್ತರ ಕುಟುಂಬ ಸದಸ್ಯರು, ಸಂಬಂಧಿಕರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ, ಸಂತ್ರಸ್ತೆಯ ಸಾಕ್ಷ್ಯವು ಅತ್ಯಂತ ವಿಶ್ವಾಸಾರ್ಹವಾಗಿದೆ. ಆರೋಪಿಯು ಆಕೆಯನ್ನು ಲೈಂಗಿಕವಾಗಿ ಶೋಷಿಸಿದ್ದಲ್ಲದೆ, ಅನೈತಿಕ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದಾನೆ ಎಂದು ನ್ಯಾಯಾಲಯವು ತಿಳಿಸಿದೆ.
ಸಂತ್ರಸ್ತೆ ಬಾಲಕಿಯ ಹೇಳಿಕೆ, ದಾಖಲೆಯಲ್ಲಿರುವ ಇತರ ಪುರಾವೆಗಳಿಂದ ಆರೋಪಿಯು ತನ್ನ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದನು ಎಂದು ಪೊಲೀಸರಿಗೆ ದೂರು ನೀಡಿರುವ ಸ್ವಯಂಸೇವಾ ಸಂಘಟನೆಯ ಪದಾಧಿಕಾರಿಗಳು ಕೂಡ ಹೇಳಿಕೆ ನೀಡಿದ್ದಾರೆ. ಪೊಲೀಸರು ಆರೋಪಿಯಿಂದ ನಗದು, ಕಾಂಡೋಮ್ ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯವು ಪರಿಗಣಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.