ADVERTISEMENT

ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂಬುದು ವದಂತಿ: ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 13:10 IST
Last Updated 7 ಜೂನ್ 2021, 13:10 IST
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ   

ಧಾರವಾಡ: ‘ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎನ್ನುವುದು ಕೇವಲ ವದಂತಿ. ಈಗ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಜತೆಗೆ ಯಾವುದೇ ಸಹಿ ಸಂಗ್ರಹ ಅಭಿಯಾನವೂ ನಡೆದಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬದಲಾವಣೆ ಕುರಿತು ಬಿಜೆಪಿ ರಾಷ್ಟ್ರೀಯ ನಾಯಕರಲ್ಲಿ ಯಾವುದೇ ಚರ್ಚೆಗಳೂ ನಡೆದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಯಡಿಯೂರಪ್ಪ ಅವರನ್ನೂ ಒಳಗೊಂಡು ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಿದ್ದೇವೆ. ಭಾನುವಾರ ಅವರು ಏಕೆ ಆ ಹೇಳಿಕೆ ನೀಡಿದರೋ ಗೊತ್ತಿಲ್ಲ. ಆದರೆ ಅದು ಮುಗಿದ ಅಧ್ಯಾಯ’ ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ‘ಮುಖ್ಯಮಂತ್ರಿ ಪರ ಹಾಗೂ ವಿರೋಧ ಯಾವುದೇ ಸಹಿ ಸಂಗ್ರಹ ಅಭಿಯಾನ ಪಕ್ಷದಲ್ಲಿ ನಡೆದಿಲ್ಲ. ಆದರೆ ಹಿಂದೊಮ್ಮೆ ಸಧನ ನಡೆಯುತ್ತಿದ್ದ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆ ಮಾಡುವಂತೆ 65 ಶಾಸಕರು ಸಹಿ ಹಾಕಿ ಸಚಿರಿಗೆ ನೀಡಲಾಗಿತ್ತು. ಬಹುಷಃ ಈಗ ಆ ಸಹಿ ಹಾಕಿದ ಪತ್ರವನ್ನೇ ಬಳಸಿರುವ ಸಾಧ್ಯತೆ ಇದೆ. ಆದರೆ ಯಾವುದೇ ಬದಲಾವಣೆಯ ಚರ್ಚೆ ನಡೆದರೂ ಅದು ಶಾಸಕಾಂಗ ಸಭೆಯಲ್ಲಿ ನಡೆಯುತ್ತದೆ’ ಎಂದರು.

ADVERTISEMENT

ಮತ್ತೊಂದೆಡೆ ಕೃಷಿ ಸಚಿವ ಬಿ.ಸಿ.ಪಾಟಲ ಅವರು ಇದೇ ವಿಷಯವಾಗಿ ಪ್ರತಿಕ್ರಿಯಿಸಿ, ‘ಸಿಎಂ ಬದಲಾವಣೆಯ ಊಹಾಪೋಹಗಳಿಂದ ಆಡಳಿತದ ಮೇಲೆ ಪರಿಣಾಮ ಬೀರುತ್ತಿದ್ದು, ಇದರಿಂದ ಬೇಸರಗೊಂಡು ಯಡಿಯೂರಪ್ಪ ಅವರು ಆ ಹೇಳಿಕೆ ನೀಡಿದ್ದಾರೆ. ಆದರೆ ಪೂರ್ಣಾವಧಿಗೆ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಮತ್ತು ಮುಂದಿನ ಚುನಾವಣೆಯೂ ಅವರ ನೇತೃತ್ವದಲ್ಲೇ ನಡೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.