
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಜಗದೀಶ ಶೆಟ್ಟರ್
ನವದೆಹಲಿ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ನಂಬಿಕೆಯೊಂದಿಗೆ ಪಕ್ಷಕ್ಕೆ ಮರು ಸೇರ್ಪಡೆಯಾಗುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ತಿಳಿಸಿದರು.
ಇಲ್ಲಿನ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಪಕ್ಷಕ್ಕೆ ಮರಳಿ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, ‘ಈ ಹಿಂದೆ ಪಕ್ಷ (ಬಿಜೆಪಿ) ನನಗೆ ಹಲವು ಜಬಾಬ್ದಾರಿಗಳನ್ನು ವಹಿಸಿತ್ತು. ಆದರೆ ಕೆಲವು ಕಾರಣಗಳಿಂದಾಗಿ, ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ’ ಎಂದು ಅವರು ಹೇಳಿದರು.
‘ಕಳೆದ 8–9 ತಿಂಗಳಿನಿಂದ ಹಲವು ಚರ್ಚೆಗಳು ನಡೆದವು. ಪಕ್ಷಕ್ಕೆ ಮರಳಿ ಬರುವಂತೆ ಬಿಜೆಪಿ ಕಾರ್ಯಕರ್ತರು ಕೇಳಿಕೊಂಡಿದ್ದರು. ನಾನು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಬೇಕು ಎಂದು ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಬಯಸಿದ್ದರು’ ಎಂದು ಅವರು ನುಡಿದರು.
‘ಪ್ರಧಾನಿಯಾಗಿ ದೇಶದ ಶಕ್ತಿಯನ್ನು ನರೇಂದ್ರ ಮೋದಿಯವರು ಹೆಚ್ಚಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರವಾಗಿದೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ನಂಬಿಕೆಯೊಂದಿಗೆ ಪಕ್ಷಕ್ಕೆ ಮರು ಸೇರ್ಪಡೆಯಾಗುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.