ADVERTISEMENT

ಬಂಡೆಯಲ್ಲ, ಜನರು ಕೈಗೆತ್ತಿಕೊಳ್ಳುವ ಕಲ್ಲು ನಾನು: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 20:30 IST
Last Updated 23 ಅಕ್ಟೋಬರ್ 2020, 20:30 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ನಾನು ಬಂಡೆಯಲ್ಲ. ಅಗತ್ಯ ಬಿದ್ದರೆ ಈ ಜನ ವಿರೋಧಿ ಸರ್ಕಾರದ ವಿರುದ್ಧ ಜನರು ಕೈಗೆತ್ತಿಕೊಳ್ಳುವ ಕಲ್ಲಾಗುವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಎಚ್‌. ಪರವಾಗಿ ಶುಕ್ರವಾರ ಐಡಿಯಲ್‌ ಹೋಮ್ಸ್‌ನಲ್ಲಿ ಒಕ್ಕಲಿಗ ಸಮುದಾಯದ ಸಂಘಟನೆಗಳ ಮುಖಂಡರ ಜತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ‘ಕೆಲವರು ಬಂಡೆಯನ್ನು ಡೈನಮೈಟ್‌ ಇಟ್ಟು ಪುಡಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಬಂಡೆ ಪುಡಿಯಾಗಿ ಜಲ್ಲಿ ಕಲ್ಲಾದರೆ ಮನೆ ಕಟ್ಟಲು ಬಳಸಬಹುದು. ದೇವರ ಗುಡಿಯ ಮುಂದೆ ಗರುಡಗಂಭವಾಗಿ, ವಿಗ್ರಹವಾಗಿ, ಚಪ್ಪಡಿಯಾಗಿಯೂ ಬಳಸಬಹುದು’ ಎಂದರು.

‘ಜನವಿರೋಧಿ ಸರ್ಕಾರದ ವಿರುದ್ಧ ಜನರು ಬೀಸುವ ಕಲ್ಲಾಗುವೆ. ಬಂಡೆಯಾಗಲು ಇಚ್ಛಿಸುವುದಿಲ್ಲ. ನನ್ನಿಂದ ಜನರಿಗೆ ಉಪಯೋಗವಾದರೆ ಸಾಕು’ ಎಂದು ಹೇಳಿದರು.

ADVERTISEMENT

ಹೇಡಿತನ ತೋರಿದ ರವಿ

‘ಡಿ.ಕೆ. ರವಿ ಪತ್ನಿ ಕುಸುಮಾ ಅವರ ಕುಟುಂಬ ಮೊದಲಿನಿಂದಲೂ ನನಗೆ ಗೊತ್ತು. ರವಿ ಯಾವುದೋ ಕಾರಣಕ್ಕೆ ಹೇಡಿತನ ತೋರಿಬಿಟ್ಟ. ಆತ ಧೈರ್ಯದಿಂದ ಪರಿಸ್ಥಿತಿ ಎದುರಿಸಿ ತಂದೆ, ತಾಯಿ, ಪತ್ನಿಯನ್ನು ನೋಡಿಕೊಳ್ಳಬೇಕಿತ್ತು. ಆತನ ಸಾವು ಕೊಲೆ ಎಂದು ಕೆಲವರು ಧರಣಿ ಮಾಡಿದರು. ನಮ್ಮ ಸರ್ಕಾರವೇ ಸಿಬಿಐ ತನಿಖೆಗೆ ಒಪ್ಪಿಸಿತು. ಏನು ನಡೆಯಿತು ಎಂಬ ದಾಖಲೆ ನಮ್ಮ ಬಳಿ ಇದೆ’ ಎಂದರು.

ತಾಳಿ ಕಟ್ಟಿಸಿಕೊಂಡ ಗಂಡನ ಹೆಸರನ್ನು ಪತ್ನಿ ಹೇಳಬಾರದು ಎಂದು ಶೋಭಕ್ಕ(ಶೋಭಾ ಕರಂದ್ಲಾಜೆ) ಹೇಳುತ್ತಿದ್ದಾರೆ. ಅವರ ಮಗಳೋ, ತಂಗಿಯೋ ಈ ಸ್ಥಾನದಲ್ಲಿ ಇದ್ದಿದ್ದರೆ ಏನು ಹೇಳುತ್ತಿದ್ದರು ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.