ಸುವರ್ಣ ವಿಧಾನಸೌಧ (ಬೆಳಗಾವಿ): ‘1999ರಲ್ಲಿ ಕಾಂಗ್ರೆಸ್ ಸರ್ಕಾರ ತರಲು ಶ್ರಮಿಸಿದ್ದ ನನ್ನ ಹೆಸರನ್ನೇ ಸಚಿವರ ಪಟ್ಟಿಯಿಂದ ಕೈಬಿಡಲಾಗಿತ್ತು. ಮಂತ್ರಿಗಿರಿ ಪಡೆಯುವುದಕ್ಕಾಗಿ ಎಸ್.ಎಂ. ಕೃಷ್ಣ ಅವರ ಮನೆಯ ಬಾಗಿಲಿಗೆ ಒದ್ದಿದ್ದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಗುರುವಾರ ಹೇಳಿದರು.
ಮಾಜಿ ಶಾಸಕರಾದ ಆರ್. ನಾರಾಯಣ ಮತ್ತು ಜಯಣ್ಣ ಅವರ ನಿಧನಕ್ಕೆ ಸಂತಾಪ ಸೂಚಿಸುವ ನಿರ್ಣಯ ಬೆಂಬಲಿಸುವಾಗಲೇ ಕೃಷ್ಣ ಅವರ ಕುರಿತು ಮಾತನಾಡಿದ ಶಿವಕುಮಾರ್, ‘ಉಪ ಮುಖ್ಯಮಂತ್ರಿಯಾದ ನಂತರದ ಚುನಾವಣೆಯಲ್ಲಿ ಕೃಷ್ಣ ಅವರು ಸೋತಿದ್ದರು. ಆ ಬಳಿಕ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುವುದರಲ್ಲಿ ನಮ್ಮ ಪಾತ್ರವಿತ್ತು. ಕೃಷ್ಣ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವುದಕ್ಕೂ ಶ್ರಮಿಸಿದ್ದೆವು’ ಎಂದರು.
‘1999ರಲ್ಲಿ ಪಾಂಚಜನ್ಯ ಯಾತ್ರೆಯ ಫಲವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಸಂಪುಟದ ಸದಸ್ಯರ ಪಟ್ಟಿಯನ್ನು ನಾನೇ ಸಿದ್ಧಪಡಿಸಿ ಕಳುಹಿಸಿದ್ದೆ. ಆದರೆ, ರಾಜಭವನಕ್ಕೆ ರವಾನೆಯಾದ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ. ತಕ್ಷಣ ಜ್ಯೋತಿಷಿ ದ್ವಾರಕಾನಾಥ್ ಅವರನ್ನು ಸಂಪರ್ಕಿಸಿ, ಭವಿಷ್ಯ ಕೇಳಿದ್ದೆ. ನೀನು ಒದ್ದು ಮಂತ್ರಿಗಿರಿ ಕಿತ್ತುಕೊಳ್ಳಬೇಕಾಗುತ್ತದೆ ಎಂಬ ಸಲಹೆ ನೀಡಿದ್ದರು’ ಎಂದು ನೆನಪಿಸಿಕೊಂಡರು.
‘ಆಗ ಟಿ.ಬಿ. ಜಯಚಂದ್ರ ಕೂಡ ಸಂಪುಟ ಸದಸ್ಯರ ಪಟ್ಟಿಯಲ್ಲಿರಲಿಲ್ಲ. ಜಯಚಂದ್ರ ಅವರೊಡನೆ ಕೃಷ್ಣ ಅವರ ಮನೆಗೆ ಹೋದೆ. ಕೃಷ್ಣ ಮಲಗಿದ್ದರು. ಸಿಟ್ಟಿನಿಂದ ಅವರ ಮನೆಯ ಬಾಗಿಲಿಗೆ ಒದ್ದಿದ್ದೆ. ಕೊಠಡಿಯಿಂದ ಹೊರಬಂದ ಕೃಷ್ಣ ಕೋಪಕ್ಕೆ ಕಾರಣವೇನು ಎಂದು ಕೇಳಿದ್ದರು. ನನ್ನನ್ನು ಬಿಟ್ಟು ಹೇಗೆ ಸಂಪುಟ ರಚಿಸುತ್ತೀರಿ? ನಾನಿಲ್ಲದೆ ಸರ್ಕಾರ ರಚನೆಯಾಗಕೂಡದು ಎಂದು ಪಟ್ಟುಹಿಡಿದಿದ್ದೆ. ಮರುದಿನ ಬೆಳಿಗ್ಗೆ ನನಗೆ ಪ್ರಮಾಣವಚನಕ್ಕೆ ಕರೆಬಂತು’ ಎಂದು ಹೇಳಿದರು.
‘ಎಸ್. ಬಂಗಾರಪ್ಪ ಅವರು ನನ್ನ ರಾಜಕೀಯ ಗುರು. ಅವರು ಅಧಿಕಾರ ಕಳೆದುಕೊಳ್ಳಬೇಕಾದ ಸಂದರ್ಭದಲ್ಲಿ ಅವರ ಸೂಚನೆಯಂತೆಯೇ ಕೃಷ್ಣ ಅವರ ಜೊತೆ ಹೋಗಿದ್ದೆ. ಕೃಷ್ಣ ಅವರು ಕೊನೆಯ ದಿನದವರೆಗೂ ನನ್ನನ್ನು ಮಗನಂತೆ ನೋಡಿಕೊಂಡರು’ ಎಂದರು.
ಅಬಕಾರಿ ಇಲಾಖೆಯಲ್ಲಿ ವರಮಾನ ಸೋರಿಕೆ ಕುರಿತು ವಿಧಾನ ಪರಿಷತ್‌ನಲ್ಲಿ ಮಾತನಾಡಿದ್ದ ಆಗಿನ ವಿರೋಧ ಪಕ್ಷದ ನಾಯಕ ಎಂ.ಸಿ. ನಾಣಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕೃಷ್ಣ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಪ್ರಮುಖ ಮದ್ಯ ಉತ್ಪಾದಕರೆಲ್ಲರೂ ಕೃಷ್ಣ ಅವರ ಗೆಳೆಯರೇ ಆಗಿದ್ದರು. ಆದರೆ, ಯಾರ ಪ್ರಭಾವಕ್ಕೂ ಮಣಿಯದೆ ರಾಜ್ಯ ಪಾನೀಯ ನಿಗಮ ಸ್ಥಾಪಿಸಿದ್ದರು. ಅದರಿಂದ ಈಗ ರಾಜ್ಯ ಸರ್ಕಾರಕ್ಕೆ ವಾರ್ಷಿಕ ₹ 35,000 ಕೋಟಿ ವರಮಾನ ಬರುತ್ತದೆ ಎಂದು ಹೇಳಿದರು.
- ‘ಈಗಲೂ ಒದ್ದು ಸಿಎಂ ಕುರ್ಚಿ ಕಿತ್ತುಕೊಳ್ತೀರಾ?’
‘ನಿಮ್ಮ ಜ್ಯೋತಿಷಿ ನಮಗೂ ಪರಿಚಯ ಇದ್ದಾರೆ. ಜನವರಿ ಒಳಗಾಗಿ ಶಿವಕುಮಾರ್ ಮುಖ್ಯಮಂತ್ರಿ ಆಗದಿದ್ದರೆ ಮತ್ತೆ ಅಸಾಧ್ಯ ಎಂದು ಹೇಳಿದ್ದಾರೆ. ಈಗಲೂ ಹಾಗೆಯೇ ಮಾಡುತ್ತೀರಾ? ಮುಖ್ಯಮಂತ್ರಿ ಪದವಿಯನ್ನು ಯಾವಾಗ ಒದ್ದು ಕಿತ್ತುಕೊಳ್ಳುತ್ತೀರಿ’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಕೇಳಿದರು. ಕೃಷ್ಣ ಅವರ ಮನೆಯ ಬಾಗಿಲಿಗೆ ಒದ್ದ ಪ್ರಕರಣವನ್ನು ಶಿವಕುಮಾರ್ ಪ್ರಸ್ತಾಪಿಸುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಆರ್. ಅಶೋಕ ಅವರು ಹೀಗೆ ಪ್ರಶ್ನಿಸಿದರು. ‘ಜ್ಯೋತಿಷಿ ನನಗೆ ಹೇಳಿರುವುದನ್ನು ಇಲ್ಲಿ ಹೇಳಿದರೆ ಬಿಜೆಪಿ ಜೆಡಿಎಸ್‌ನ 25–30 ಶಾಸಕರು ಈ ಕಡೆ ಬರುತ್ತಾರೆ’ ಎಂದು ಶಿವಕುಮಾರ್ ಹೇಳಿದರು. ‘ಹಾಗಿದ್ದರೆ ನೀವು ಈ ಕಡೆ (ಬಿಜೆಪಿಗೆ) ಬರುವಂತಿದೆ’ ಎಂದು ಅಶೋಕ ಕಾಲೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.