ADVERTISEMENT

‘ಕಂಡಲ್ಲಿ ಗುಂಡಿಕ್ಕಬೇಕು’ ಹೇಳಿಕೆಗೆ ಬದ್ಧ: ಅಂಗಡಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 13:09 IST
Last Updated 18 ಡಿಸೆಂಬರ್ 2019, 13:09 IST
   

ಬೆಳಗಾವಿ: ‘ರೈಲ್ವೆ ಇಲಾಖೆಯ ಆಸ್ತಿಪಾಸ್ತಿ ನಾಶ ಮಾಡುವ ಪ್ರತಿಭಟನಾಕಾರರಿಗೆ ಕಂಡಲ್ಲಿ ಗುಂಡಿಕ್ಕಬೇಕು ಎನ್ನುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ಬುಧವಾರ ಘಟಪ್ರಭಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ನಮ್ಮ ದೇಶದ ಅಲ್ಪಸಂಖ್ಯಾತರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ, ವಿರೋಧ ಪಕ್ಷಗಳು ಈ ವಿಚಾರದಲ್ಲಿ ಕೆಲವು ಅಲ್ಪಸಂಖ್ಯಾತರನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿವೆ’ ಎಂದು ದೂರಿದರು.

‘ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಲು ವಿಪಕ್ಷಗಳು ಕುಮ್ಮಕ್ಕು ನೀಡುತ್ತಿವೆ. ನಗರ ನಕ್ಸಲರು ಹಾಗೂ ಬುದ್ಧಿಜೀವಿಗಳಿಂದ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗುವಾಗ ಸರ್ಕಾರ ಏನು ಮಾಡಬೇಕು, ನಾವು ಮೂಕಪ್ರೇಕ್ಷಕರಾಗಿ ಕೂರಬೇಕಾ?’ ಎಂದು ಕೇಳಿದರು.

ADVERTISEMENT

‘ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಸಾಧ್ಯವೇ ಇಲ್ಲ. ದೇಶದ ಜನರನ್ನು ನಾವು ರಕ್ಷಣೆ ಮಾಡುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ವಿಳಂಬವಾದರೂ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ’ ಎಂದು ‍ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.