ADVERTISEMENT

ಪ್ರಧಾನಿ ಹುದ್ದೆ: ನನ್ನ ಬೆಂಬಲ ರಾಹುಲ್ ಗಾಂಧಿಗೆ ಎಂದ ದೇವೇಗೌಡ

ಲೋಕಸಭಾ ಚುನಾವಣೆ 2019

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 14:20 IST
Last Updated 5 ಮಾರ್ಚ್ 2019, 14:20 IST
   

ಬೆಂಗಳೂರು: ‘ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದೀರಾ?’. ಪ್ರಜಾವಾಣಿ ಸಂವಾದ ಕಾರ್ಯಕ್ರಮದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರತ್ತ ತೂರಿ ಬಂದ ಪ್ರಶ್ನೆಯಿದು.

ಇದಕ್ಕುತ್ತರಿಸಿದ ಗೌಡರು, ‘ಕಾಂಗ್ರೆಸ್ ಹೈಕಮಾಂಡ್ ಒತ್ತಾಯದ ಮೇರೆಗೆ ನನ್ನ ಮಗ ಕುಮಾರಸ್ವಾಮಿ ರಾಜ್ಯದಲ್ಲಿ ಮುಖ್ಯಮಂತ್ರಿಯಾದರು. ಹೀಗಾಗಿ ದೇಶದ ಪ್ರಧಾನಿ ಯಾರಾಗಬೇಕು ಎಂಬ ಪ್ರಶ್ನೆ ಬಂದಾಗ ನಾನು ರಾಹುಲ್ ಗಾಂಧಿ ಅವರನ್ನು ಬೆಂಬಲಿಸಬೇಕಾದದ್ದು ಧರ್ಮ. ನನ್ನ ಬೆಂಬಲ ಸದಾ ರಾಹುಲ್ ಗಾಂಧಿಯವರಿಗೆ. ಹಾಗೆಂದು ಅತಂತ್ರ ಲೋಕಸಭೆ ನಿರ್ಮಾಣವಾದಲ್ಲಿ ಪ್ರಧಾನಿ ಯಾರಾಗಬೇಕು ಎಂಬ ಆಯ್ಕೆಯ ನಿರ್ಧಾರ ಮಹಾಮೈತ್ರಿಯ ಇತರ ಪಕ್ಷಗಳಿಗೂ ಇದೆ. ಅವರೇ ಅಂತಿಮ ನಿರ್ಧಾರ ಕೈಗೊಳ್ಳಬಹುದು’ ಎಂದು ಹೇಳಿದರು.

ಮಮತಾ ಬ್ಯಾನರ್ಜಿ ಬಹಳ ಪ್ರಭಾವಿ ಹೋರಾಟಗಾರ್ತಿ. ಸರಳ ಜೀವಿ. ಅವರಿಗೂ ಪ್ರಧಾನಿ ಆಗುವ ಆಸೆ ಇರಬಹುದು. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಯು ನಾಯ್ಡುಗೂ ಪ್ರಧಾನಿಯಾಗುವ ಆಸೆ ಇರಬಹುದು, ತಪ್ಪಲ್ಲ ಎಂದೂ ಅವರು ಹೇಳಿದರು.

ADVERTISEMENT

‘ಚುನಾವಣೆಯಲ್ಲಿ ಸ್ಪರ್ಧೆ, ಇನ್ನೂ ನಿರ್ಧಾರ ಮಾಡಿಲ್ಲ’

‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಇನ್ನೂ ತೀರ್ಮಾನ ಮಾಡಿಲ್ಲ. ಸಂಸತ್ತಿನಲ್ಲಿಯೂ ಇದೇ ನನ್ನ ಕೊನೆಯ ಭಾಷಣ, ಮಾತನಾಡಲು ಅವಕಾಶ ಕೊಡಿ ಅಂತ ಪ್ರಾರ್ಥನೆ ಮಾಡಿಕೊಂಡಿದ್ದೆ. ಆದರೆ, ಹೀಗೆಲ್ಲ ಮಾತನಾಡಬಾರದು ಎಂದು ಅನೇಕ ನಾಯಕರು ಹೇಳಿದರು. ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಒತ್ತಡ ಹಲವೆಡೆಯಿಂದ ಬರುತ್ತಿದೆ. ರಾಷ್ಟ್ರಮಟ್ಟದ ಅನೇಕ ನಾಯಕರು ಚುನಾವಣೆ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಪರಿಸ್ಥಿತಿ ಹೇಗೆ ಬರುತ್ತದೆಯೋ ಗೊತ್ತಿಲ್ಲ. ಬಂದಹಾಗೆ ಸ್ವೀಕರಿಸುವೆ’ ಎಂದು ಗೌಡರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.