ADVERTISEMENT

ಹಿಂಬಡ್ತಿ ಪಟ್ಟಿಯಲ್ಲಿ ಮತ್ತೆ 3 ಐಎಎಸ್‌ ಅಧಿಕಾರಿಗಳು

ಕೆಪಿಎಸ್‌ಸಿ 1998ನೇ ಸಾಲಿನ ಪಟ್ಟಿ ಮತ್ತೆ ಪರಿಷ್ಕರಣೆ * ರಾಜಭವನ ಅಂಗಳದಲ್ಲಿ ಸುಗ್ರೀವಾಜ್ಞೆ

ರಾಜೇಶ್ ರೈ ಚಟ್ಲ
Published 10 ಜೂನ್ 2019, 1:20 IST
Last Updated 10 ಜೂನ್ 2019, 1:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದ ‘ಅಕ್ರಮ’ಗಳನ್ನು ಸಕ್ರಮಗೊಳಿಸಲು ಸಿದ್ಧಪಡಿಸಿದ ಸುಗ್ರೀವಾಜ್ಞೆ ರಾಜಭವನದ ಅಂಗಳ ತಲುಪಿದ ಬೆನ್ನಲ್ಲೆ, ಈ ಸಾಲಿನ ಆಯ್ಕೆ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ಪರಿಷ್ಕೃತ ಪಟ್ಟಿಯಲ್ಲಿ ಸಹಾಯಕ ಆಯುಕ್ತ (ಎ.ಸಿ) ವೃಂದದಲ್ಲಿರುವ ನಾಲ್ವರು ಅಧಿಕಾರಿಗಳು, ಮತ್ತೊಮ್ಮೆ ಪಟ್ಟಿ ಪರಿಷ್ಕರಣೆಗೆ ಒಳಪಟ್ಟಿರುವುದರಿಂದ ಸ್ಥಾನಪಲ್ಲಟಗೊಳ್ಳಲಿದ್ದಾರೆ. ಈ ಪೈಕಿ, ಈಗಾಗಲೇ ಐಎಎಸ್‌ಗೆ ಬಡ್ತಿ ಪಡೆದ ಮೂವರು ಅಧಿಕಾರಿಗಳೂ ಇದ್ದಾರೆ. ಈ ಅಧಿಕಾರಿಗಳು ಹಿಂಬಡ್ತಿಗೆ ಒಳಗಾಗಬೇಕಿದೆ. ಆದರೆ, ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದರೆ, ಈ ಅಧಿಕಾರಿಗಳೂ ಹಿಂಬಡ್ತಿಯ ತೂಗುಗತ್ತಿಯಿಂದ ರಕ್ಷಣೆ ಪಡೆಯಲಿದ್ದಾರೆ.

ಮತ್ತೊಮ್ಮೆ ಪಟ್ಟಿ ಪರಿಷ್ಕರಣೆ: 1998ರ ಸಾಲಿನ ಪ್ರಕರಣದಲ್ಲಿ ತೀರ್ಪು ನೀಡಿದ್ದ ಹೈಕೋರ್ಟ್‌, ಆಯ್ಕೆ ಪಟ್ಟಿಯಲ್ಲಿರುವ ಅನರ್ಹರನ್ನು ಕೈಬಿಟ್ಟು ಅರ್ಹರನ್ನು ನೇಮಿಸುವಂತೆ ತೀರ್ಪು ನೀಡಿತ್ತು. ಅಲ್ಲದೆ, 91 ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನದ ಅಂಕ ಪರಿಗಣಿಸಿ ಪಟ್ಟಿ ಪರಿಷ್ಕರಿಸುವಂತೆಯೂ ನಿರ್ದೇಶಿಸಿತ್ತು.

ADVERTISEMENT

ಮೊದಲ ಪರಿಷ್ಕೃತ ಆಯ್ಕೆಪಟ್ಟಿಯನ್ನು ಕಳೆದ ಜನವರಿ 25ರಂದು ಕೆಪಿಎಸ್‌ಸಿ ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. ಆ ಪಟ್ಟಿಯ ಪ್ರಕಾರ, 28 ಅಧಿಕಾರಿಗಳು ಹುದ್ದೆ ಕಳೆದುಕೊಂಡು, ಹೊಸತಾಗಿ 28 ಅಧಿಕಾರಿಗಳು ನೇಮಕಾತಿ ಆದೇಶ ಪಡೆಯಲು ಅರ್ಹರಾಗುತ್ತಾರೆ. ಅಲ್ಲದೆ, 140 ಅಧಿಕಾರಿಗಳ ಹುದ್ದೆಗಳಲ್ಲಿ ಸ್ಥಾನಪಲ್ಲಟ ಉಂಟಾಗಲಿದ್ದು, ಈ ಪೈಕಿ, ಐಎಎಸ್‌ಗೆ ಬಡ್ತಿ ಪಡೆದ 7 ಅಧಿಕಾರಿಗಳೂ ಹಿಂಬಡ್ತಿ ಪಡೆಯುತ್ತಾರೆ ಎಂದು ವಿವರಿಸಲಾಗಿತ್ತು.

ಆದರೆ, ಹೀಗೆ ಪರಿಷ್ಕರಿಸುವ ವೇಳೆ 91 ಅಭ್ಯರ್ಥಿಗಳ ಮರು ಮೌಲ್ಯಮಾಪನ ಅಂಕ ಪರಿಗಣಿಸಿಲ್ಲ ಎಂದು ಅಭ್ಯರ್ಥಿಯೊಬ್ಬರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಕೋರ್ಟ್‌ ಈ ಹಿಂದೆ ನೀಡಿರುವ ತೀರ್ಪು ಅನುಷ್ಠಾನಗೊಳಿಸಿದ ಬಗ್ಗೆ ಜೂನ್‌ 10ರಂದು ಅನುಪಾಲನಾ ವರದಿ ಸಲ್ಲಿಸುವಂತೆ ಕೆಪಿಎಸ್‌ಸಿ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಇದೀಗ 91 ಅಭ್ಯರ್ಥಿಗಳ ಮರು ಮೌಲ್ಯಮಾಪನ ಅಂಕ ಮತ್ತು ಈ ಹಿಂದೆ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ನಡೆಸಲು ಬಾಕಿ ಉಳಿದಿದ್ದ ಏಳು ಅಭ್ಯರ್ಥಿಗಳ (ಒಟ್ಟು ಒಂಬತ್ತು ಅಭ್ಯರ್ಥಿಗಳು. ಈ ಪೈಕಿ, ಒಬ್ಬ ಮೃತಪಟ್ಟಿದ್ದು, ಇನ್ನೊಬ್ಬರು ನಿವೃತ್ತಿ ವಯಸ್ಸು ದಾಟಿದ್ದಾರೆ) ವ್ಯಕ್ತಿತ್ವ ಪರೀಕ್ಷೆಯನ್ನೂ ಕೆಪಿಎಸ್‌ಸಿ ಪೂರ್ಣಗೊಳಿಸಿದೆ. ಮತ್ತೆ ಅಂಕಗಳಲ್ಲಿ ವ್ಯತ್ಯಾಸ ಉಂಟಾಗಿರುವುದರಿಂದ ಇಡೀ ಪಟ್ಟಿ ಮತ್ತೊಮ್ಮೆ ಪರಿಷ್ಕೃತಗೊಂಡಿದೆ. ಹೊಸ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

ಹೈಕೋರ್ಟ್‌ನತ್ತ ಕೆಎಎಸ್‌ ಅಧಿಕಾರಿಗಳ ಚಿತ್ತ

1998ನೇ ಸಾಲಿನಲ್ಲಿ ನಡೆದ ಅಕ್ರಮ ಪ್ರಕರಣಗಳಿಗೆ ಸಂಬಂಧಿಸಿದಂತೆ 2016ರ ಜೂನ್‌ 21ರಂದು ನೀಡಿದ್ದ ತೀರ್ಪು ಅನುಷ್ಠಾನಗೊಂಡಿಲ್ಲ ಎಂದು ಸಲ್ಲಿಕೆಯಾಗಿರುವ ‘ನ್ಯಾಯಾಂಗ ನಿಂದನೆ’ ಅರ್ಜಿಗಳ ವಿಚಾರಣೆ ಸೋಮವಾರ (ಜೂನ್‌ 10) ಹೈಕೋರ್ಟ್‌ನಲ್ಲಿ ನಡೆಯಲಿದೆ.

ಈ ಹಿಂದಿನ ವಿಚಾರಣೆ ವೇಳೆ (ಏ. 26), ಕೋರ್ಟ್‌ ತೀರ್ಪಿನಂತೆ ಪರಿಷ್ಕೃತ ಪಟ್ಟಿಯ ಅನುಷ್ಠಾನಕ್ಕೆ ಬದ್ಧ ಎಂದು ಹೇಳಿತ್ತು. ಸ್ಥಾನಪಲ್ಲಟಗೊಳ್ಳುವ ಅಧಿಕಾರಿಗಳ ಪಟ್ಟಿ ಸಮೇತ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿತ್ತು.

ಇದೀಗ ನಿಲುವು ಬದಲಿಸಿರುವ ಸರ್ಕಾರ, ಸುಗೀವಾಜ್ಞೆ ಸಿದ್ಧಪಡಿಸಿ ಒಪ್ಪಿಗೆಗಾಗಿ ರಾಜ್ಯಪಾಲರಿಗೆ ಸಲ್ಲಿಸಿರುವ ವಿಷಯವನ್ನು ಪ್ರಮಾಣ ಪತ್ರದ ಮೂಲಕ ಕೋರ್ಟ್‌ಗೆ ಸಲ್ಲಿಸಲು ‌ನಿರ್ಧರಿಸಿದೆ. ಸರ್ಕಾರದ ಈ ದ್ವಂದ್ವ ನಿಲುವು ಮತ್ತು ಇನ್ನೂ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕದೇ ಇರುವುದರಿಂದ ಈ ವಿಷಯದಲ್ಲಿ ನ್ಯಾಯಪೀಠ ಯಾವ ರೀತಿ ಸ್ಪಂದಿಸಬಹುದು ಎಂಬ ಕುತೂಹಲ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.