ADVERTISEMENT

20 ವರ್ಷ: 28 ಬಾರಿ ಎತ್ತಂಗಡಿ! ಐಎಎಸ್ ಅಧಿಕಾರಿ ಹರ್ಷ ಗುಪ್ತಾ ನಡೆಗೆ ಶಿಕ್ಷೆ?

ರಾಜೇಶ್ ರೈ ಚಟ್ಲ
Published 19 ಜನವರಿ 2020, 20:34 IST
Last Updated 19 ಜನವರಿ 2020, 20:34 IST
ಹರ್ಷ ಗುಪ್ತ
ಹರ್ಷ ಗುಪ್ತ   

ಬೆಂಗಳೂರು: ಬಹುಕೋಟಿ ವಂಚನೆಯ ಐಎಂಎ ಪ್ರಕರಣದ ವಿಶೇಷ ತನಿಖಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ ಹುದ್ದೆಗೆ ಹಿರಿಯ ಐಎಎಸ್‌ ಅಧಿಕಾರಿ ಹರ್ಷ ಗುಪ್ತ ಅವರನ್ನು ನಿಯೋಜಿಸುವ ಮೂಲಕ ರಾಜ್ಯ ಸರ್ಕಾರ, 20 ವರ್ಷಗಳ ಕರ್ತವ್ಯ ಅವಧಿಯಲ್ಲಿ 28 ಬಾರಿ ಎತ್ತಂಗಡಿ ಮಾಡಿದಂತಾಗಿದೆ!

ನೇರ, ನಿಷ್ಠುರ ಅಧಿಕಾರಿಯೆಂದೇ ಗುರುತಿಸಿಕೊಂಡಿರುವ ಹರ್ಷ ಗುಪ್ತ, ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿ ವರ್ಗಾವಣೆಗೊಂಡು ನಾಲ್ಕೂವರೆ ತಿಂಗಳಷ್ಟೆ ಆಗಿತ್ತು. ಅದರ ಜೊತೆಗೆ ವಹಿಸಿದ್ದ ಹೊಣೆಯನ್ನು ‌ಹೊಸ ಹುದ್ದೆಯಾಗಿ ಸರ್ಕಾರ ಸೃಜಿಸಿದೆ. ಆದರೆ, ಕಚೇರಿಯೇ ಇಲ್ಲದ, ಸಿಬ್ಬಂದಿಯೂ ನೇಮಕವಾಗದ ಈ ಹುದ್ದೆಗೆ ಹಿರಿಯ ‌‌ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ಹೊಸ ಹುದ್ದೆ ವಹಿಸಿಕೊಂಡ ದಿನವೇ (ಜ. 16) ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅವರು ವಿವರವಾದ ‍ಪತ್ರ ಬರೆದಿದ್ದಾರೆ. ‘ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಸೇರಿದಂತೆ ಅಗತ್ಯ ಸಿಬ್ಬಂದಿ, ಪ್ರತ್ಯೇಕ ಕಚೇರಿ, ವಾಹನವನ್ನು ತಕ್ಷಣವೇ ಒದಗಿಸಬೇಕು’ ಎಂದು ಮನವಿ ಮಾಡಿದ್ದಾರೆ.

ADVERTISEMENT

ಐಎಂಎಗೆ ಸೇರಿದ ಸ್ಥಿರ ಮತ್ತು ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಬಳಿಕ ಕೋರ್ಟ್‌ ಸೂಚನೆ ಅನ್ವಯ‌ ಹರಾಜು ಹಾಕಿ ಸಂತ್ರಸ್ತರಿಗೆ ಹಣ ಹಂಚಿಕೆ ಮಾಡಲು ಪ್ರತ್ಯೇಕ ಹುದ್ದೆಯೊಂದನ್ನು ಸೃಜಿಸಿ ಮತ್ತು ಅದಕ್ಕೆ ಐಎಎಸ್‌ ಅಧಿಕಾರಿಯನ್ನು ನೇಮಿಸುವ ಅಗತ್ಯ ಇತ್ತೇ ಎಂಬ ಪ್ರಶ್ನೆ ಅಧಿಕಾರಿಗಳ ವಲಯದಲ್ಲಿ ಮೂಡಿದೆ. ಐಎಂಎ ಆಸ್ತಿ ಜಪ್ತಿ ಕುರಿತಂತೆ ನಾಲ್ಕು ವರದಿಗಳನ್ನು ಹೈಕೋರ್ಟ್‌ಗೆ ಹರ್ಷ ಗು‍ಪ್ತ ಅವರು ಈಗಾಗಲೇ ಸಲ್ಲಿಸಿದ್ದಾರೆ.

ಬೆಂಗಳೂರು ಪ್ರಾದೇಶಿಕ ಆಯುಕ್ತ ಹುದ್ದೆಯಲ್ಲಿದ್ದಾಗ ಕೋಟ್ಯಂತರ ಮೌಲ್ಯದ ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ ಮಾಡಿದ ಆರೋಪದಲ್ಲಿ ತಹಶೀಲ್ದಾರ್‌ ಹಾಗೂ ಭೂ ದಾಖಲೆಗಳ ಉಪನಿರ್ದೇಶಕರ (ಡಿಡಿಎಲ್‌ಆರ್‌) ಮೇಲೆ ಕಠಿಣ ಕ್ರಮ ತೆಗೆದುಕೊಂಡಿದ್ದರು. ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆ ಮುಂದೂಡಲು ಬಿಜೆಪಿ ಸರ್ಕಾರ ಮಾಡಿದ ಪ್ರಯತ್ನವನ್ನೂ ಅವರು ವಿಫಲಗೊಳಿಸಿದ್ದರು.

1997ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಹರ್ಷ ಗುಪ್ತ, 1999ರ ಆ. 1ರಂದು ಉಪವಿಭಾಗಾಧಿಕಾರಿಯಾಗಿ ಸರ್ಕಾರಿ ಕರ್ತವ್ಯಕ್ಕೆ ಸೇರಿದ್ದಾರೆ. 2003ರಲ್ಲಿ ಬಳ್ಳಾರಿ ಸಿಇಒ ಆಗಿದ್ದ ಅವರು ಚಾಮರಾಜನಗರ, ಚಿಕ್ಕಮಗಳೂರು, ಬೀದರ್‌, ಬಳ್ಳಾರಿ, ಶಿವಮೊಗ್ಗ, ಮೈಸೂರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಎಲ್ಲ ಹುದ್ದೆಗಳಲ್ಲಿ ಕರ್ತವ್ಯ ನಿಭಾಯಿಸಿದ ಸರಾಸರಿ ಅವಧಿ 10 ತಿಂಗಳಿಗೂ ಕಡಿಮೆ!

ಕಾರ್ಮಿಕ ಇಲಾಖೆ ಆಯುಕ್ತರಾಗಿದ್ದಾಗ ಭ್ರಷ್ಟಾಚಾರದ ಬಗ್ಗೆ ಸರ್ಕಾರಕ್ಕೆ ಬರೆದಿದ್ದ ಪತ್ರದ ಬಗ್ಗೆ ಚರ್ಚೆ ನಡೆದಿತ್ತು. ಭದ್ರಾವತಿಯ ಎಂಪಿಎಂ ಕಾರ್ಖಾನೆಯ ಎಂ.ಡಿ ಆಗಿದ್ದ ಸಂದರ್ಭದಲ್ಲಿ ಸಚಿವರ ವಿರುದ್ಧ ದೂರು ನೀಡಿದ್ದರೆಂಬ ಕಾರಣಕ್ಕೆ ಹರ್ಷ ಗುಪ್ತ ಸುದ್ದಿಯಾಗಿದ್ದರು.

*
ಐಎಂಎ ಪ್ರಕರಣದ ತನಿಖೆಗೆ ವಿಶೇಷ ಅಧಿಕಾರಿ ಎನ್ನುವ ಸರ್ಕಾರದ ಆದೇಶ ತಪ್ಪುದಾರಿಗೆ ಎಳೆಯುವಂತಿದೆ. ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿದೆ.
-ಹರ್ಷ ಗುಪ್ತ, ವಿಶೇಷ ಅಧಿಕಾರಿ, ಸಕ್ಷಮ ಪ್ರಾಧಿಕಾರ, ಐಎಂಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.