ADVERTISEMENT

ಕೋವಿಡ್-19‌ ಚಿಕಿತ್ಸೆಗೆ ಗಂಗಾಜಲ ಅಧ್ಯಯನಕ್ಕೆ ಐಸಿಎಂಆರ್‌ ನಕಾರ

ಜಲ ಶಕ್ತಿ ಸಚಿವಾಲಯದ ಪ್ರಸ್ತಾವ ತಿರಸ್ಕಾರ: ಪ್ರಬಲ ವೈಜ್ಞಾನಿಕ ಪುರಾವೆಗಳು ಹಾಗೂ ದತ್ತಾಂಶ ಇಲ್ಲ

ಪಿಟಿಐ
Published 7 ಮೇ 2020, 20:59 IST
Last Updated 7 ಮೇ 2020, 20:59 IST
   

ನವದೆಹಲಿ: ಕೋವಿಡ್‌–19 ರೋಗಿಗಳಿಗೆ ಗಂಗಾ ನದಿ ನೀರನ್ನು ಬಳಸಿ ಚಿಕಿತ್ಸೆ ನೀಡುವ ಬಗ್ಗೆ ಅಧ್ಯಯನ ನಡೆಸುವಂತೆ ಜಲಶಕ್ತಿ ಸಚಿವಾಲಯಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ಗೆ (ಐಸಿಎಂಆರ್‌) ಪ್ರಸ್ತಾವ ಸಲ್ಲಿಸಿದೆ. ಆದರೆ, ಈ ಸಂಬಂಧ ಯಾವುದೇ ಅಧ್ಯಯನ ಕೈಗೊಳ್ಳದಿರಲು ಐಸಿಎಂಆರ್‌ ನಿರ್ಧರಿಸಿದೆ.

‘ಕೊರೊನಾ ವೈರಸ್‌ ಸೋಂಕಿಗೆ ಗಂಗಾಜಲ ಬಳಸಿ ಚಿಕಿತ್ಸೆ ನೀಡುವ ಸಂಬಂಧ ಅಧ್ಯಯನ ನಡೆಸಲು ಪೂರಕವಾದ ಪ್ರಬಲ ವೈಜ್ಞಾನಿಕ ಪುರಾವೆಗಳು ಹಾಗೂ ದತ್ತಾಂಶ ಇಲ್ಲ. ಹೀಗಾಗಿ ಈ ವಿಷಯ ಕುರಿತು ಅಧ್ಯಯನ ಕೈಗೊಳ್ಳದಿರಲು ನಿರ್ಧರಿಸಲಾಗಿದೆ’ ಎಂದು ಐಸಿಎಂಆರ್‌ನ ಸಂಶೋಧನಾ ಪ್ರಸ್ತಾವಗಳ ಮೌಲ್ಯಮಾಪನ ವಿಭಾಗದ ಮುಖ್ಯಸ್ಥ ಡಾ.ವೈ.ಕೆ.ಗುಪ್ತ ಸ್ಪಷ್ಟಪಡಿಸಿದ್ದಾರೆ.

ಗಂಗಾ ನದಿ ಶುದ್ಧೀಕರಣ ಹಾಗೂ ಪುನಶ್ಚೇತನಕ್ಕಾಗಿ ಜಲಶಕ್ತಿ ಸಚಿವಾಲಯ ‘ನ್ಯಾಷನಲ್‌ ಮಿಷನ್‌ ಫಾರ್‌ ಕ್ಲೀನ್‌ ಗಂಗಾ’ (ಎನ್‌ಎಂಸಿಜಿ) ಎಂಬ ಕಾರ್ಯಕ್ರಮ ರೂಪಿಸಿದೆ. ಎನ್‌ಎಂಸಿಜಿಯೇ ಪ್ರಸ್ತಾವವನ್ನು ಐಸಿಎಂಆರ್‌ಗೆ ಕಳುಹಿಸಿದೆ.

ADVERTISEMENT

‘ಕೋವಿಡ್‌ ರೋಗಿಗಳಿಗೆ ಗಂಗಾ ಜಲ ಬಳಸಿ ಚಿಕಿತ್ಸೆ ನೀಡಲುಕ್ಲಿನಿಕಲ್‌ ಅಧ್ಯಯನ ನಡೆಸಬೇಕು ಎಂದು ಹಲವರಿಂದ ಹಾಗೂ ಎನ್‌ಜಿಒಗಳಿಂದ ಎನ್‌ಎಂಸಿಜಿಗೆ ಪ್ರಸ್ತಾವ ಬಂದಿದ್ದವು. ಈ ಎಲ್ಲ ಪ್ರಸ್ತಾವಗಳನ್ನು ಯಥಾವತ್ತಾಗಿ ಐಸಿಎಂಆರ್‌ಗೆ ಕಳುಹಿಸಲಾಗಿದೆ’ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

‘ಗಂಗಾ ನದಿ ನೀರಿನ ಗುಣಮಟ್ಟ ಹಾಗೂ ಅದು ಹೊಂದಿರಬಹುದಾದ ವಿಶೇಷ ಗುಣಗಳನ್ನು ತಿಳಿಯಲು ಅಧ್ಯಯನ ಕೈಗೊಂಡಿದ್ದ ನ್ಯಾಷನಲ್‌ ಎನ್ವಿರಾನ್‌ಮೆಂಟಲ್‌ ಎಂಜಿನಿಯರಿಂಗ್‌ ಆ್ಯಂಡ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ (ಎನ್‌ಇಇಆರ್‌ಐ) ವಿಜ್ಞಾನಿಗಳೊಂದಿಗೆ ನಮಗೆ ಬಂದಿದ್ದ ಪ್ರಸ್ತಾವಗಳ ಕುರಿತು ಚರ್ಚಿಸಿದ್ದೇವೆ. ಆದರೆ, ಈ ನದಿ ನೀರಿನಲ್ಲಿ ವೈರಸ್‌ ನಿರೋಧಕ ಗುಣ ಇಲ್ಲ ಎಂದು ಸಂಸ್ಥೆಯ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.