ADVERTISEMENT

SC/ST ಸಭೆ ಸಹಿಸಲ್ಲ ಎಂದು ಯಾರಾದರು ಹೇಳಿದರೆ ತಕ್ಕ ಉತ್ತರ ಕೊಡುವೆ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 7:08 IST
Last Updated 8 ಜನವರಿ 2025, 7:08 IST
<div class="paragraphs"><p>ಜಿ. ಪರಮೇಶ್ವರ</p></div>

ಜಿ. ಪರಮೇಶ್ವರ

   

– ಫೇಸ್‌ಬುಕ್ ಚಿತ್ರ

ಬೆಂಗಳೂರು: 'ಎಸ್‌ಸಿ, ಎಸ್‌ಟಿ ಸಮಾವೇಶದ ಕುರಿತು ಚರ್ಚೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಯಾರೂ ನನಗೆ ಹೇಳಿಲ್ಲ. ಒಂದು ವೇಳೆ ಸಭೆ ಮಾಡಿದರೆ ಸಹಿಸುವುದಿಲ್ಲ ಎಂದು ಯಾರಾದರು ಹೇಳಿದರೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ಆ ಶಕ್ತಿ ನಮಗಿದೆ' ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ADVERTISEMENT

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, 'ಆ ರೀತಿಯಾಗಿ ಯಾರಾದರು ಹೇಳಿದರೆ, ನಾವು ತಲೆ ಕೆಡಿಸಿಕೊಳ್ಳುವುದೂ ಇಲ್ಲ' ಎಂದರು.

ವಿಧಾನಸಭೆ ಚುನಾವಣೆಗೂ ಮೊದಲು ಚಿತ್ರದುರ್ಗದಲ್ಲಿ ಎಸ್‌ಸಿ, ಎಸ್‌ಟಿ ಸಮಾವೇಶ ಮಾಡಲಾಗಿತ್ತು. ಸರ್ಕಾರ ಅಧಿಕಾರಕ್ಕೆ ಬಂದರೆ ಅನೇಕ ಸಮಸ್ಯೆಗಳ‌ನ್ನು ಬಗೆಹರಿಸುವುದಾಗಿ ಹೇಳಿಕೊಂಡಿದ್ದೆವು. ಚಿತ್ರದುರ್ಗ ನಿರ್ಣಯ ಎಂದು ಹೆಸರು ಕೊಟ್ಟು ಬೇಡಿಕೆಗಳನ್ನು ಇಟ್ಟಿದ್ದೆವು. ಅದರಂತೆಯೇ ಸರ್ಕಾರ ಅಧಿಕಾರಕ್ಕೆ ಬಂತು. ಅನೇಕ ಭರವಸೆಗಳನ್ನು ಈಡೇರಿಸುವ ಕೆಲಸಗಳನ್ನು ಸರ್ಕಾರ ಮಾಡಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ಪೋಸ್ಟ್ ಮ್ಯಾಟ್ರಿಕ್ ಸ್ಕಾಲರ್‌ಶಿಪ್ ಬರುತ್ತಿಲ್ಲ. ಕೇಂದ್ರದಿಂದ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದ ಪಾಲು ಕೂಡಾ ರಾಜ್ಯಕ್ಕೆ ಬರುತ್ತಿಲ್ಲ. ಎಲ್ಲವನ್ನು ಚರ್ಚೆ ಮಾಡಬೇಕಿದೆ. ಒಗ್ಗಟ್ಟಾಗಿ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಸಭೆ ಸೇರಲು ತೀರ್ಮಾನಿಸಲಾಗಿತ್ತು. ಈ ವಿಚಾರವನ್ನು ದೆಹಲಿ ನಾಯಕರ ಗಮನಕ್ಕೆ ತಂದಿರಲಿಲ್ಲ. ನಮ್ಮದೆ ಆಂತರಿಕ ವಿಚಾರ ಆಗಿರುವುದರಿಂದ ಹೇಳುವ ಅವಶ್ಯಕತೆ ಇಲ್ಲ ಎಂಬ ಕಾರಣದಿಂದ ಹೇಳಿರಲಿಲ್ಲ. ಪಕ್ಷದ ವಿಚಾರಗಳು ಹಾಗೂ ಸರ್ಕಾರದ ತೀರ್ಮಾನಗಳು ನಡೆದಾಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಗಮನಕ್ಕೆ ಹೋಗುತ್ತದೆ. ಸುರ್ಜೇವಾಲಾ ಅವರು ನನಗೆ ಕರೆ ಮಾಡಿ ಸಮಾವೇಶದಲ್ಲಿ ನಾನು ಭಾಗವಹಿಸಬೇಕು ಎಂದರು. ರಾಜಕೀಯ ಪ್ರೇರಿತ ಅಥವಾ ರಾಜಕೀಯಕ್ಕಾಗಿ ಮಾಡುತ್ತಿರುವ ಸಮಾವೇಶ ಅಲ್ಲ. ನೀವು ಭಾಗವಹಿಸುವಂತೆ ಆಹ್ವಾನಿಸಿದೆ. ಈಗ ಆಗುವುದಿಲ್ಲ. ಮುಂದೆ ಸಮಯ ನೀಡುತ್ತೇನೆ. ಆಗ ಸಮಾವೇಶ ಮಾಡಿ ಭಾಗವಹಿಸುತ್ತೇನೆ ಎಂದು ಸುರ್ಜೇವಾಲಾ ಅವರು ತಿಳಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹೇಳಿದ್ದರಿಂದ‌ ಮುಂದೂಡಿದ್ದೇವೆ. ಸಮಾವೇಶ ಏರ್ಪಡಿಸುತ್ತಿರುವುದರನ್ನು ರದ್ದು ಮಾಡಿಲ್ಲ. ಅವರ ಸಮಯ ತೆಗೆದುಕೊಂಡು ಚರ್ಚೆ ಮಾಡುತ್ತೇವೆ‌ ಎಂದು ಸ್ಪಷ್ಟಪಡಿಸಿದರು.

ಡಿನ್ನರ್ ಬಗ್ಗೆ ಏನೇನೋ ವ್ಯಾಖ್ಯಾನ ಮಾಡಲಾಗುತ್ತಿದೆ.‌ ಡಿನ್ನರ್ ಅಂದರೆ ಊಟ. 7 ಗಂಟೆಗೆ ಸಭೆಗೆ ಕರೆಯಲಾಗಿತ್ತು. ಎರಡು ಅಥವಾ ಮೂರು ತಾಸು ಚರ್ಚೆ ಆಗಬಹುದು. ಊಟದ ಸಮಯ ಆಗುವುದರಿಂದ, ನಿಮ್ಮ ಮನೆಗೆ ಹೋಗಿ ಊಟ ಮಾಡಿಕೊಂಡು ಬಿಡಿ ಅಂತ ಹೇಳುವುದರ ಬದಲು, ಊಟಕ್ಕೆ ಏರ್ಪಾಟು ಮಾಡಲಾಗಿತ್ತು‌ ಎಂದರು.

ಈ ಹಿಂದೆ ನಡೆದ ಚಿತ್ರದುರ್ಗ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಧಾನ ಕಾರ್ಯದರ್ಶಿ ಭಾಗವಹಿಸಿದ್ದರು. ಸಮಾವೇಶ ನಡೆಸಲು ಹೈಕಮಾಂಡ್ ವಿರೋಧ ವ್ಯಕ್ತಪಡಿಸಿಲ್ಲ. ವಿರೋಧ ಮಾಡಿದ್ದರೆ ನಿಲ್ಲಿಸಿ ಎಂದು ಹೇಳುತ್ತಿದ್ದರು. ಆ ರೀತಿ ಬೆಳವಣಿಗೆ ಏನೂ ಆಗಿಲ್ಲ. ಸಭೆ ಬೇರೆ ರೀತಿಯ ಆಯಾಮ ಪಡೆದುಕೊಳ್ಳುತ್ತದೆ ಎಂದು ಹೈಕಮಾಂಡ್‌ಗೆ ದೂರು ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಸುರ್ಜೇವಾಲಾ ಅವರು ಕರೆ ಮಾಡಿ‌ ಕೇಳಿದಾಗ ರಾಜಕೀಯ ಲೇಪನ ಇಲ್ಲ‌ ಎಂಬುದನ್ನು ಹೇಳಿದ್ದೇನೆ ಎಂದರು.

ಪೂರ್ವಭಾವಿ ಸಭೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಬೇಕು ಎನ್ನುವುದರ ಬಗ್ಗೆಯೂ ಚರ್ಚಿಸಲಾಗಿತ್ತು. ಇದರಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ. ಮುಚ್ಚಿಟ್ಟುಕೊಂಡು ರಾಜಕಾರಣ ಮಾಡುವಂತದ್ದು ಏನಿದೆ. ಯಾವ ವಿಷಯದ ಬಗ್ಗೆ ಚರ್ಚೆ ಮಾಡಬೇಕು, ಬಹಿರಂಗವಾಗಿ ಚರ್ಚೆ ಮಾಡುತ್ತೇವೆ. ಅದನ್ನು ಯಾರಿಗೂ ಗೊತ್ತಾಗದಂತೆ ನಾಲ್ಕು ಗೋಡೆ‌ ಮಧ್ಯೆ ಚರ್ಚಿಸುವಂಥ ಅನಿವಾರ್ಯತೆ ಇಲ್ಲ. ಅನೇಕ ಜ್ವಲಂತ ಸಮಸ್ಯೆಗಳಿವೆ. ದಲಿತ ಸಮುದಾಯಕ್ಕೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚೆ ಮಾಡಬೇಕಲ್ಲವೇ ಎಂದು ಹೇಳಿದರು.

ಸಮಾವೇಶದಲ್ಲಿ ಹೈಕಮಾಂಡ್‌ನವರು ಭಾಗವಹಿಸುತ್ತೇವೆ ಎಂದಾಗ ಒಳ್ಳೆಯದಲ್ಲವೇ.‌ ಹೈಕಮಾಂಡ್ ಪ್ರತಿನಿಧಿಗಳು ಸಮಾವೇಶದಲ್ಲಿದ್ದಾಗ ಅನೇಕ ತೀರ್ಮಾನಗಳು ಅಲ್ಲೇ ಆಗುತ್ತವೆ ಎಂದರು.

ಸಮಾವೇಶ ನಡೆಯದಿರಲು ಹೈಕಮಾಂಡ್ ಸಮಾಜಾಯಿಷಿ ನೀಡುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದನ್ನು ಮುಂದಿನ‌ ದಿನಗಳಲ್ಲಿ ನೋಡೋಣ. ಸ್ವಲ್ಪ ದಿನ‌ ಮುಂದಕ್ಕೆ ಹಾಕುವುದಾಗಿ ತಿಳಿಸಿದ್ದೇವೆ. ಮತ್ತೆ ಏರ್ಪಡಿಸುತ್ತೇವೆ ಆಗ ಗೊತ್ತಾಗುತ್ತದೆ ಎಂದರು.

'ನಕ್ಸಲರು ಶರಣಾಗುತ್ತಿದ್ದಾರೆ ಎಂಬುದನ್ನು ಮಾತ್ರ ಹೇಳಬಲ್ಲೆ. ವಿಕ್ರಂ ಗೌಡ ಸಾವು ಆದಾಗ, ಶರಣಾಗುವಂತೆ ನಕ್ಸಲರಿಗೆ ಕರೆ ಕೊಡಲಾಗಿತ್ತು. ಜೀವನದಲ್ಲಿ ಯಾಕೆ ಈ ದಾರಿ ಹಿಡಿದಿದ್ದೀರಿ. ಸಮಾಜದ‌ ಮುನ್ನೆಲೆಗೆ ಬನ್ನಿ ಎಂದು ಆಹ್ವಾನ ನೀಡಿದ್ದೆ. ಅದೇ ರೀತಿಯಾಗಿ ಎಎನ್‌ಎಫ್ ಹಿರಿಯ ಅಧಿಕಾರಿಗಳು‌ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ಕೊಟ್ಟಿದ್ದರು. ಅನೇಕ ಪ್ರಕರಣಗಳಿವುದು ನಿಜ. ಶರಣಾದ ನಂತರ ಯಾವ ರೀತಿ ಚರ್ಚೆ ಮಾಡಬೇಕು, ಕಾನೂನಿನಲ್ಲಿ ಏನು ಅವಕಾಶವಿದೆ ಎಂಬುದನ್ನು ನೋಡುತ್ತೇವೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.