ADVERTISEMENT

ಹೈಕಮಾಂಡ್ ಸೂಚಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಸಚಿವ ಆರ್‌.ಬಿ. ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 12:00 IST
Last Updated 4 ಜೂನ್ 2019, 12:00 IST
ಆರ್‌.ಬಿ. ತಿಮ್ಮಾಪುರ
ಆರ್‌.ಬಿ. ತಿಮ್ಮಾಪುರ   

ಬೆಳಗಾವಿ: ‘ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತೇನೆ. ಆದರೆ, ನನಗೆ ಆ ರೀತಿಯ ನಿರ್ದೇಶನ ಬಂದಿಲ್ಲ’ ಎಂದು ಸಕ್ಕರೆ ಸಚಿವ ಆರ್‌.ಬಿ. ತಿಮ್ಮಾಪುರ ತಿಳಿಸಿದರು.

ಮಂಗಳವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ಪಕ್ಷದಲ್ಲಿಯೇ ಇದ್ದಾರೆ. ಎಲ್ಲಿಗೂ ಹೋಗಿಲ್ಲ’ ಎಂದರು.

‘ಪಕ್ಷದ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಲಾಗುತ್ತಿದೆ’ ಎಂಬ ಮುಖಂಡ ರಾಮಲಿಂಗಾರೆಡ್ಡಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ಹಿರಿಯ ರಾಜಕಾರಣಿಯಾದ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ. ಆದಾಗ್ಯೂ ಏನಾದರೂ ಅಸಮಾಧಾನ ಇದ್ದರೆ ವರಿಷ್ಠರು ಸರಿಪಡಿಸುತ್ತಾರೆ. ಶಾಸಕ ರೋಷನ್‌ ಬೇಗ್ ಅವರ ಅನಿಸಿಕೆ ಹೇಳಿದ್ದಾರೆ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಕೆಲವು ವಿಚಾರಗಳನ್ನು ಜನರಿಗೆ ಹೇಳುತ್ತಿರುತ್ತೇವೆ’ ಎಂದರು.

ADVERTISEMENT

‘ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಪರೇಷನ್ ಕಮಲದ ಯತ್ನ ನಡೆಸುತ್ತಲೆ ಇದ್ದಾರೆ. ಆಪರೇಷನ್ ಕಮಲ ಪ್ರಜಾಪ್ರಭುತ್ವ ವಿರೋಧಿಯಾದುದು; ಅಸಹ್ಯಕರವಾದುದು’ ಎಂದು ಪ್ರತಿಕ್ರಿಯಿಸಿದರು.

‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಇವಿಎಂಗಳನ್ನು (ವಿದ್ಯುನ್ಮಾನ ಮತ ಯಂತ್ರ) ಹ್ಯಾಕ್ ಮಾಡಿಸಿದ್ದಾರೆ ಎಂಬ ಸಂಶಯವಿದೆ. ಹೀಗಾಗಿ, ಮತ್ತೆ ಬ್ಯಾಲೆಟ್ ಪೇಪರ್‌ನಲ್ಲೇ ಚುನಾವಣೆ ನಡೆಸಬೇಕು. ಇವಿಎಂ ಬಳಸುತ್ತಿದ್ದ ಅನೇಕ ರಾಷ್ಟ್ರಗಳು ಬ್ಯಾಲೆಟ್ ಪೇಪರ್‌ಗೆ ಮರಳಿವೆ. ನಮ್ಮಲ್ಲೂ ಹಾಗೆಯೇ ಆಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.