ADVERTISEMENT

ಡಿಕೆಶಿ ವಿರುದ್ಧ ತನಿಖೆ ಅಗತ್ಯ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 12:29 IST
Last Updated 3 ಫೆಬ್ರುವರಿ 2023, 12:29 IST
   

ರಾಮನಗರ: ಸಿ.ಡಿ. ಪ್ರಕರಣದ ಕುರಿತು ಡಿ.ಕೆ. ಶಿವಕುಮಾರ್ ಮೇಲೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾಡಿರುವ ಆರೋಪಗಳಲ್ಲಿ ಸತ್ಯವಿದೆ. ಈ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಬಿಡದಿಯಲ್ಲಿ ಗುರುವಾರ ಬಿಜೆಪಿ ಪ್ರಮುಖರ ಸಭೆ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ ಕಾಂಗ್ರೆಸ್ ಅನ್ನು ಬ್ಲಾಕ್‌ಮೇಲರ್‌ಗಳ ಪಕ್ಷ, ಸಿ.ಡಿ. ‍ಪಕ್ಷ ಎನ್ನುತ್ತಾರೆ. ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷರು ಅದರಲ್ಲಿ ಪರಿಣತರು. ಎಲ್ಲರ ಸಿ.ಡಿ. ಮಾಡಿಸಿದ್ದಾರೆ ಎಂದು ಜಾರಕಿಹೊಳಿ ಆರೋಪಿಸಿದ್ದಾರೆ. ಅವರ ಆರೋಪ ಒಪ್ಪುವಂತಹದ್ದು. ಇಂತಹ ಕೆಲಸಗಳಿಗೆ ಡಿಕೆಶಿ ಹೆಸರುವಾಸಿ. ಕಾಂಗ್ರೆಸ್‌ನಲ್ಲಿ ಇಂತಹ ನಾಯಕರು ಇನ್ನಷ್ಟು ಜನ ಇದ್ದಾರೆ’ ಎಂದು ಹೇಳಿದರು.

‘ ಮತ್ತಷ್ಟು ನಾಯಕರ ಸಿ.ಡಿ. ಇದೆ ಎನ್ನುವ ವಿಚಾರವಾಗಿ ಶಿವಕುಮಾರ್‌ ರನ್ನೇ ಕೇಳಬೇಕು. ಇನ್ನು ಯಾವ ಯಾವ ಸಿನಿಮಾ ಇದೆ. ಟ್ರೈಲರ್‌, ಟೀಸರ್ ಇದೆ. ಯಾವಾಗ ಬಿಡುಗಡೆ ಆಗುತ್ತದೆ ಎಂಬುದೆಲ್ಲ ಅವರಿಗೇ ಗೊತ್ತು. ಇದೊಂದು ಕೆಟ್ಟ ಬೆಳವಣಿಗೆ. ರಾಜಕಾರಣಗಳನ್ನು ಟ್ರ್ಯಾಪ್‌, ಫ್ಯಾಬ್ರಿಕೇಟ್‌ ಮಾಡಲಾಗುತ್ತಿದೆ. ಇಂತಹದ್ದೊಂದು ವ್ಯವಸ್ಥಿತ ಜಾಲವೇ ಬೆಳೆದಿದೆ. ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಿ, ಚುನಾಯಿತ ಪ್ರತಿನಿಧಿಗಳ ಬದುಕು ಹಾಳು ಮಾಡಲಾಗುತ್ತಿದೆ. ಇಂತಹ ರಾಕೆಟ್‌ ದಂದೆ ನಡೆಸುವ ನಾಯಕರ ಬಂಡವಾಳ ಬಯಲಾಗಬೇಕು’ ಎಂದರು.

ADVERTISEMENT

‘ ಜಾರಕಿಹೊಳಿ ಧೈರ್ಯ ತೋರಿ ದೂರು ನೀಡಿದ್ದಾರೆ. ಆದರೆ ಈ ಬಗ್ಗೆ ತನಿಖೆ ಆಗಲಿ ಎಂದು ಯಾವೊಬ್ಬ ಕಾಂಗ್ರೆಸ್‌ ನಾಯಕರು ಹೇಳುತ್ತಿಲ್ಲ ಏಕೆ’ ಎಂದು ಅಶ್ವತ್ಥನಾರಾಯಣ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.