ADVERTISEMENT

ಅಕ್ರಮ ಗಣಿಗಾರಿಕೆ ದಂಡ ಪ್ರಮಾಣ ಇಳಿಕೆ: ನಿರಾಣಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 16:37 IST
Last Updated 21 ಏಪ್ರಿಲ್ 2021, 16:37 IST
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ   

ಬೆಂಗಳೂರು: ‘ರಾಜ್ಯದಾದ್ಯಂತ ಅಕ್ರಮ ಗಣಿಗಾರಿಕೆಯನ್ನು ಡ್ರೋನ್ ‌ಮೂಲಕ‌ ಸಮೀಕ್ಷೆ ‌ನಡೆಸಿ‌ ವಿಧಿಸಿದ್ದ ಐದು ಪಟ್ಟು ದಂಡವನ್ನು ಬದಲಿಸಿ, ಸದ್ಯ ಒಂದು ಪಟ್ಟು ಮಾತ್ರ ವಿಧಿಸಲು ನಿರ್ಧರಿಸಲಾಗಿದೆ’ ಎಂದುಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಗಳ ನಂತರ ಗಣಿಗಾರಿಕೆ ಕಂಪನಿಗಳ ಪರವಾನಗಿ ಮತ್ತು ದಂಡ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ’ ಎಂದರು.

‘ಕಾನೂನುಬಾಹಿರ ಗಣಿಗಾರಿಕೆ ‌ನಡೆಯುವ ಕಡೆ ಡ್ರೋನ್ ‌ಸಮೀಕ್ಷೆ ‌ನಡೆಸಿ‌ ದಂಡ ವಿಧಿಸಲಾಗಿತ್ತು. ಸುಮಾರು ‌₹ 6 ಸಾವಿರ ಕೋಟಿ ಮೊತ್ತದ ದಂಡ ವಿಧಿಸಲಾಗಿತ್ತು. ಆದರೆ, ಗಣಿ ಮಾಲೀಕರು ಈ ದಂಡ ಐದು ಪಟ್ಟು ಹೆಚ್ಚಾಗಿದೆ ಎಂದು ಕೋರ್ಟ್‌ ಮೆಟ್ಟಿಲೇರಿದ್ದರು. ಅಲ್ಲದೆ, ಇದರಿಂದ ‌2 ಸಾವಿರಕ್ಕೂ ಹೆಚ್ಚು ಗಣಿಗಾರಿಕೆಗಳು ಬಂದ್ ಆಗಿವೆ’ ಎಂದು ಅವರು ವಿವರಿಸಿದರು.

ADVERTISEMENT

‘ಗಣಿ ಸುರಕ್ಷತಾ ಮಹಾ ನಿರ್ದೇಶಕರಿಂದ (ಡಿಜಿಎಂಎಸ್) ಪರವಾನಗಿ ಪಡೆದುಕೊಳ್ಳಲು 90 ದಿನಗಳ ಕಾಲ ಅವಕಾಶ ನೀಡಲಾಗಿದೆ’ ಎಂದೂ ಅವರು ವಿವರಿಸಿದರು.

ತುರ್ತು ಕ್ರಮ: ‘ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಕೊರತೆಯ ಸಮಸ್ಯೆ ಉಂಟಾಗದಂತೆ ಇಲಾಖೆಯ ವತಿಯಿಂದ ಕೆಲವು ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜಿಂದಾಲ್ ಸೇರಿದಂತೆ ಕೆಲವು ಕಂಪನಿಗಳ ಜೊತೆ ಮಾತುಕತೆ ನಡೆಸಲಾಗಿದದೆ’ ಎಂದರು.

‘ಸದ್ಯ ಜಿಂದಾಲ್‌ನಿಂದ 400 ಟನ್ ಆಕ್ಸಿಜನ್ ಸಿಗುತ್ತಿದೆ. ಬೇರೆ ಕಂಪನಿಗಳಿಂದ 200 ಟನ್ ಸೇರಿ ರಾಜ್ಯಕ್ಕೆ ಪ್ರತಿದಿನ ಒಟ್ಟು 600 ಟನ್ ಆಕ್ಸಿಜನ್ ಸಿಗಲಿದೆ. ನಮಗೆ ಇಷ್ಟು ಸಾಕಾಗಬಹುದು. ಬಂದ್‌ ಆಗಿರುವ ಬಲ್ಡೋಟಾ ಗಣಿ ಕಂಪನಿಯನ್ನು ಮತ್ತೆ ಆರಂಭಿಸಿ, ಆಕ್ಸಿಜನ್‌ ಪೂರೈಸುವಂತೆ ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.