ADVERTISEMENT

ಅಕ್ರಮ ಸಾಗಣೆ | 2024-25ನೇ ಸಾಲಿನಲ್ಲಿ 2,960 ಟನ್‌ ಪಡಿತರ ಅಕ್ಕಿ ವಶ: ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 14:43 IST
Last Updated 8 ಡಿಸೆಂಬರ್ 2025, 14:43 IST
<div class="paragraphs"><p>ಪಡಿತರ ಅಕ್ಕಿ </p></div>

ಪಡಿತರ ಅಕ್ಕಿ

   

ಸುವರ್ಣ ವಿಧಾನಸೌಧ (ಬೆಳಗಾವಿ): ಅನ್ನಭಾಗ್ಯ ಯೋಜನೆಯಲ್ಲಿ ಪಡಿತರದಾರರಿಗೆ ವಿತರಿಸಿದ್ದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, 2024-25ನೇ ಸಾಲಿನಲ್ಲಿ 2,960 ಟನ್‌ ಅಕ್ಕಿ ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಸಿ.ಟಿ.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಪಿಎಲ್‌ ಪಡಿತರ ಚೀಟಿ ಇರುವ ಕುಟುಂಬಗಳಿಗೆ ವಿತರಿಸಿದ್ದ ಅಕ್ಕಿಯನ್ನು ಸಂಗ್ರಹಿಸಿ ಹೊರ ರಾಜ್ಯ‌, ವಿದೇಶಗಳಿಗೆ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದು ಪ್ರತಿ ಜಿಲ್ಲೆಯಲ್ಲೂ ಕಾರ್ಯಾಚರಣೆ ನಡೆಸಲಾಗಿತ್ತು. ಅಕ್ರಮದಲ್ಲಿ ಭಾಗಿಯಾದ ಆರೋಪದ ಮೇಲೆ 570 ಮಂದಿಯನ್ನು ಬಂಧಿಸಲಾಗಿದೆ. 314 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಪ್ರಕರಣಗಳು ಪತ್ತೆಯಾದ ನಂತರ ಆಹಾರ ಇಲಾಖೆಯಲ್ಲಿ ಎರವಲು ಸೇವೆ ಸಲ್ಲಿಸುತ್ತಿದ್ದ ಅನ್ಯ ಇಲಾಖೆಯ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಗೋದಾಮು ವ್ಯವಸ್ಥಾಪಕರೂ ಸೇರಿ ಆಹಾರ ಇಲಾಖೆಯ ಕೆಲ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಸಾಗಣೆದಾರರು ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದರಿಂದ ಮೃತಪಟ್ಟಿರುವ ಪ್ರಕರಣ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ ಎಂದು ಎಫ್‌ಐಆರ್ ದಾಖಲಿಸಿದ್ದಾರೆ. ಈ ಕುರಿತು ವಿಚಾರಣೆ ನಡೆಯುತ್ತಿದೆ ಎಂದರು.

ಪಡಿತರ ಅಕ್ರಮ ಸಾಗಣೆ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನ್ಯಾಯಬೆಲೆ ಅಂಗಡಿ ಹಂತದಿಂದ ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದವರೆಗೂ ಜಾಗೃತಿ ಸಮಿತಿಗಳನ್ನು ರಚಿಸಲಾಗಿದ್ದು, ಅಕ್ರಮ ಪತ್ತೆ ಕಾರ್ಯಕ್ಕೆ ನೆರವು ಪಡೆಯಲಾಗುತ್ತಿದೆ. ಪಡಿತರದಾರರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.