ADVERTISEMENT

ಐ.ಟಿ ಅಧಿಕಾರಿಗೆ ₹ 25 ಕೋಟಿ ಲಂಚ: ಮನ್ಸೂರ್‌

ಐಎಂಎ ವಂಚನೆ

ಹೊನಕೆರೆ ನಂಜುಂಡೇಗೌಡ
Published 17 ಆಗಸ್ಟ್ 2019, 20:01 IST
Last Updated 17 ಆಗಸ್ಟ್ 2019, 20:01 IST
   

ಬೆಂಗಳೂರು: ‘ಆದಾಯ ತೆರಿಗೆ ಇಲಾಖೆಯ (ಐ.ಟಿ) ಹಿರಿಯ ಅಧಿಕಾರಿಗಳಿಗೆ ₹ 25 ಕೋಟಿ ಲಂಚ ಕೊಟ್ಟಿದ್ದೇನೆ’ ಎಂಬ ಮಹತ್ವದ ಸಂಗತಿಯನ್ನು ಐಎಂಎ (ಐ ಮಾನಿಟರಿ ಅಡ್ವೈಸರಿ) ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಖಾನ್‌ ಬಹಿರಂಗಪಡಿಸಿದ್ದಾರೆ.

ಐಎಂಎ ವಂಚನೆ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಖಾನ್‌ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ‘ಐ.ಟಿ ಸೆಂಟ್ರಲ್‌ ಸರ್ಕಲ್‌ನಲ್ಲಿ ಕೆಲಸ ಮಾಡುತ್ತಿರುವ ಮಧ್ಯಮ ಹಂತದ ಅಧಿಕಾರಿಯೊಬ್ಬರ ಮೂಲಕ ಹಿರಿಯ ಅಧಿಕಾರಿಗೆ ಹಣ ತಲುಪಿಸಿರುವುದಾಗಿ ಆರೋಪಿ ಹೇಳಿದ್ದಾರೆ’ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ಈ ಆರೋಪಕ್ಕೆ ಪುಷ್ಟಿ ಕೊಡುವಂತೆ, ಆರೋಪಿಯ ವೈಯಕ್ತಿಕ ಇ– ಮೇಲ್‌ ಖಾತೆಯಿಂದ ಟಿಪ್ಪಣಿ ವಶಪಡಿಸಿಕೊಳ್ಳಲಾಗಿದೆ. ಎಸ್‌ಐಟಿಗೆ ಮುನ್ನ, ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳೂ ಮನ್ಸೂರ್‌ ಖಾನ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು. ಆವಾಗಲೂ, ‘ಐ.ಟಿ ಸೇರಿದಂತೆ ಕೆಲವು ಇಲಾಖೆಯ ಅಧಿಕಾರಿಗಳು ತನ್ನಿಂದ ‘ಅಕ್ರಮ ಲಾಭ’ ಪಡೆದಿರುವುದಾಗಿ ತಿಳಿಸಿದ್ದಾರೆ. ಆದರೆ, ಆರೋಪಿ ಹೇಳಿಕೆಯನ್ನು ಇ.ಡಿ ಒಪ್ಪಿಕೊಂಡಿಯೂ ಇಲ್ಲ, ನಿರಾಕರಿಸಿಯೂ ಇಲ್ಲ.

ADVERTISEMENT

ಎಸ್‌ಐಟಿ ಮತ್ತು ಇ.ಡಿ ಅಧಿಕಾರಿಗಳು ಖಾನ್‌ನನ್ನು ಸುದೀರ್ಘವಾಗಿ ವಿಚಾರಣೆ ನಡೆಸಿ ಪ್ರತಿಯೊಂದು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಅಕ್ರಮ ಲಾಭ ಪಡೆದಿರುವ ಅಧಿಕಾರಿಗಳ ಹೆಸರನ್ನು ಬಾಯ್ಬಿಟ್ಟಿದ್ದಾರೆ.

‘ಕಮಿಷನರೇಟ್‌ ಕಚೇರಿಯಲ್ಲಿದ್ದ ಉನ್ನತ ಅಧಿಕಾರಿಯಬ್ಬರಿಗೆ ಚಿನ್ನದ ಉಡುಗೋರೆ, ಐಜಿಪಿ ದರ್ಜೆಯ ಅಧಿಕಾರಿಯೊಬ್ಬರಿಗೆ ₹ 50 ಲಕ್ಷ ಪಾವತಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಇವರಲ್ಲದೆ, ಸಿಸಿಬಿ ಅಧಿಕಾರಿಗಳು, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿಯ ಕೆಲವು ಅಧಿಕಾರಿಗಳು ತನ್ನನ್ನು ಶೋಷಿಸಿದ್ದಾರೆ’ ಎಂದಿದ್ದಾರೆ.

ಖಾನ್‌ ಹೇಳಿಕೆಯ ಸತ್ಯಾಸತ್ಯತೆ ಕುರಿತು ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಹೆಸರಿಸಲಾಗಿರುವ ಅಧಿಕಾರಿಗಳನ್ನು ಪ್ರಶ್ನಿಸುವ ಸಾಧ್ಯತೆಯಿದೆ. ಇದುವರೆಗೆ ಬೆಂಗಳೂರು ಪೂರ್ವ ವಲಯದ ಡಿಸಿಪಿ ಅಜಯ್‌ ಹಿಲೋರಿ, ಪುಲಕೇಶಿ ನಗರದ ಎಸಿಪಿ ರಮೇಶ್‌ ಕುಮಾರ್‌ ಮತ್ತು ಕಮರ್ಷಿಯಲ್‌ ಸ್ಟ್ರೀಟ್‌ ಇನ್‌ಸ್ಪೆಕ್ಟರ್‌ ಎಂ. ರಮೇಶ್‌ ಅವರನ್ನು ಮಾತ್ರ ಎಸ್‌ಐಟಿ ಪ್ರಶ್ನಿಸಿದೆ.

ಜೂನ್‌ 17ರಂದು ಸೇರಿದ್ದ ರಾಜ್ಯ ಮಟ್ಟದ ಸಮನ್ವಯ ಸಮಿತಿ (ಎಸ್‌ಎಲ್‌ಸಿಸಿ)ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ, ಐಎಂಎಗೆ ಕ್ಲೀನ್‌ ಚಿಟ್‌ ನೀಡಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

‘ನಮಗೆ ಸಂಬಂಧವಿಲ್ಲ’

‘ಮನ್ಸೂರ್‌ ಖಾನ್‌ನಿಂದ ಅಕ್ರಮ ಲಾಭ ಮಾಡಿಕೊಂಡ ಅಧಿಕಾರಿಗಳು ಯಾರು?’ ಎಂಬ ಪ್ರಶ್ನೆ ಐ.ಟಿ ಇಲಾಖೆಯಲ್ಲಿ ಕುತೂಹಲದ ಚರ್ಚೆಗೆ ಕಾರಣವಾಗಿದೆ. ಈ ಸುದ್ದಿ ವ್ಯಾಪಕ ಪ್ರಚಾರ ಪಡೆದುಕೊಂಡಿದೆ.

‘ಐಎಂಎ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನಾನು ಆತನನ್ನು ನೋಡಿಯೇ ಇಲ್ಲ, ನನ್ನ ಹೆಸರಿನವರೇ ಮತ್ತೊಬ್ಬರು ಅಧಿಕಾರಿ ಇದ್ದಾರೆ. ಅವರನ್ನು ಕೇಳಿ ಎಂದು ನಿವೃತ್ತ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ನನಗೂ ಐಎಂಎ ಪ್ರಕರಣದ ತನಿಖೆಗೂ ಸಂಬಂಧವಿಲ್ಲ’ ತನಿಖಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಜಂಟಿ ಕಮಿಷನರ್‌ ಹಂತದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.