ADVERTISEMENT

ಭಾರಿ ಮಳೆಯಾಗುವ ಸಾಧ್ಯತೆ: ನಾಳೆ ಮೂರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 16:05 IST
Last Updated 28 ಸೆಪ್ಟೆಂಬರ್ 2023, 16:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದ ಕೆಲವೆಡೆ ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ತಲಾ ಮೂರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ ‘ಯೆಲ್ಲೊ ಅಲರ್ಟ್’ ಘೋಷಿಸಿದೆ. 

ಕರಾವಳಿಯ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡಕ್ಕೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಬೆಳಗಾವಿ, ಧಾರವಾಡ ಹಾಗೂ ಚಾಮರಾಜನಗರ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. 

ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ, ಉತ್ತರ ಒಳನಾಡಿನ ಧಾರವಾಡ ಮತ್ತು ಬೆಳಗಾವಿ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ ಜಿಲ್ಲೆಯ ಒಂದೆರಡು ಕಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 45 ಕಿ.ಮೀ.ಯಿಂದ 55 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಹೇಳಿದೆ.

ADVERTISEMENT

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರುತ್ತದೆ. ಸಂಜೆ ಅಥವಾ ರಾತ್ರಿ ಅವಧಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. 

ಗುರುವಾರ ಬೆಳಿಗ್ಗೆ 8.30ಕ್ಕೆ ಅನ್ವಯಿಸಿದಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಕೆಲವೆಡೆ ಮಳೆಯಾಗಿದೆ. ಮಂಗಳೂರಿನ ಪಣಂಬೂರು, ಉಡುಪಿಯ ಕಾರ್ಕಳ, ಕೋಟ ಹಾಗೂ ಗದಗದ ನರಗುಂದದಲ್ಲಿ ಗರಿಷ್ಠ (ತಲಾ 5 ಸೆಂ.ಮೀ) ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.