ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಕುರಿತು ಕಾರ್ಯಪಡೆ ಸಮಿತಿಯ ಶಿಫಾರಸುಗಳನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು.
ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಕಾರ್ಯಪಡೆಯ ಸಮಿತಿ ತನ್ನ ವರದಿಯನ್ನು ಯಡಿಯೂರಪ್ಪ ಅವರಿಗೆ ಸೋಮವಾರ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಪಡೆ ಸಮಿತಿಯ ಸದಸ್ಯರು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ರಚನಾ ಸಮಿತಿಯ ಸದಸ್ಯರು ಆದ ಪ್ರೊ. ಎಂ.ಕೆ. ಶ್ರೀಧರ್, ‘175 ವರ್ಷಗಳ ನಂತರ ಕೇಂದ್ರ ಸರ್ಕಾರ ತನ್ನದೇ ಆದ ಶಿಕ್ಷಣ ನೀತಿ ರೂಪಿಸಿದೆ. ಈ ನೀತಿ ನಿರೂಪಣೆಯಲ್ಲಿ ಕರ್ನಾಟಕ ರಾಜ್ಯ ಮಹತ್ವದ ಪಾತ್ರ ವಹಿಸಿದೆ. ಶಿಕ್ಷಣ ವ್ಯವಸ್ಥೆಗೆ ಸರ್ಕಾರ ಹಾಗೂ ಸಮಾಜ ಹೆಚ್ಚಿನ ಒತ್ತು ನೀಡಬೇಕೆನ್ನುವುದು ಶಿಕ್ಷಣ ನೀತಿಯ ಆಶಯ’ ಎಂದರು.
ಸಮಿತಿಯ ಸದಸ್ಯರಾದ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪೂರ, ವಾಸುದೇವ ಅತ್ರೆ, ಪ್ರೊ. ಅನುರಾಗ್ ಬೆಹರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು.
ಕಾರ್ಯಪಡೆಯ ಶಿಫಾರಸುಗಳಲ್ಲಿರುವ ಮುಖ್ಯಾಂಶಗಳು:
ಶಾಲಾ ಶಿಕ್ಷಣ
* ಕೆಎಸ್‍ಎಸ್‍ಇಸಿ ಮತ್ತು ಎಸ್‍ಎಸ್‍ಎಸ್‍ಎಗಳು ಶಾಲೆಗಳ ನಿಯಂತ್ರಣ ಮತ್ತು ಕಾರ್ಯಾಚರಣೆಗಳ ಪ್ರತ್ಯೇಕತೆಯನ್ನು ಖಾತರಿಪಡಿಸಿಕೊಳ್ಳುವುದು.
* ಡಿಎಸ್‍ಇಆರ್‌ಟಿಯನ್ನು ಪುನರ್ ರಚಿಸುವುದು.
* ಲಿಂಗಾಧಾರಿತ ಒಳಗೊಳ್ಳುವಿಕೆ ಮತ್ತು ದಿವ್ಯಾಂಗ ನಿಧಿಗಾಗಿ ಸಾಂಸ್ಥಿಕ ಸಾರ್ವಜನಿಕ ಜವಾಬ್ದಾರಿ (ಸಿಎಸ್‍ಆರ್) ಅಡಿಯಲ್ಲಿ ಹಣ ಆಕರ್ಷಿಸುವುದು.
* ಸಾಕಷ್ಟು ಸಂಖ್ಯೆಯ ವಿಶೇಷ ಶೈಕ್ಷಣಿಕ ವಲಯಗಳನ್ನು ಸ್ಥಾಪಿಸುವುದು.
* ಎಲ್ಲಾ ರೀತಿಯ ವಿದ್ಯಾರ್ಥಿವೇತನಗಳಿಗೆ ಏಕ ವೇದಿಕೆ ರೂಪಿಸುವುದು. ಅದರೊಂದಿಗೆ ದಿವ್ಯಾಂಗ. ವಿದ್ಯಾರ್ಥಿವೇತನವನ್ನು ಸ್ಥಾಪಿಸುವುದು.
ಉನ್ನತ ಶಿಕ್ಷಣ
* ಹೊಸ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ಕೆಎಸ್‍ಯು) ಕಾಯ್ದೆ ಜಾರಿಗೆ ತರುವುದು.
* ಮತ್ತೊಂದು ಹೊಸ ಕಾಯ್ದೆ ಜಾರಿಗೆ ತಂದು ಅದರನ್ವಯ ಕರ್ನಾಟಕ ಉನ್ನತ ಶಿಕ್ಷಣ ಆಯೋಗ (ಕೆಎಚ್‍ಇಸಿ) ಸ್ಥಾಪಿಸಬೇಕು.
* ವಿಶೇಷ ಶೈಕ್ಷಣಿಕ ವಲಯಗಳನ್ನು ಗುರುತಿಸಿ ಸ್ಥಾಪಿಸಬೇಕು.
* ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಗುಂಪುಗಳಿಗೆ (ಇಎಸ್‍ಡಿಜಿ) ಅನ್ವಯವಾಗುವ ಎಲ್ಲಾ ವಿದ್ಯಾರ್ಥಿವೇತನಗಳನ್ನು ಒಂದೇ ವೇದಿಕೆಯಲ್ಲಿ ತರುವುದು.
* ಸಂಲಗ್ನಿತ (affiliated) ಅಂಗಸಂಸ್ಥೆಗಳು ಮತ್ತು ಸ್ವಾಯತ್ತ (autonomous) ಕಾಲೇಜುಗಳ ಶ್ರೇಣೀಕೃತ ಸಬಲೀಕರಣ ಪ್ರಕ್ರಿಯೆಗೆ ಚಾಲನೆ ನೀಡುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.