ಬೆಂಗಳೂರು: ದೆಹಲಿ ಕರ್ನಾಟಕದ ಭವನದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿಶೇಷ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್. ಆಂಜನೇಯ ಅವರು ದರ್ಪದಿಂದ ವರ್ತಿಸುತ್ತಿದ್ದು, ಸಿಬ್ಬಂದಿಯನ್ನು ಅಗೌರವದಿಂದ ಕಾಣುತ್ತಿದ್ದಾರೆ ಎಂದು ಆರೋಪಿ ಮಹಿಳಾ ಸಿಬ್ಬಂದಿಯೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಕರ್ನಾಟಕ ಭವನದಲ್ಲಿ ಉಪ ಸಮನ್ವಯಾಧಿಕಾರಿ ಮತ್ತು ಲೆಕ್ಕಧಾಧಿಕರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ದೂರುದಾರೆ ಕುಸುಮಾ ಪಿ, ನಂದರಗಿ, ಮಹಿಳಾ ನೌಕರರು ಅಸುರಕ್ಷಿತ ವಾತಾವರಣದಲ್ಲಿ ಕೆಲಸ ನಿರ್ವಹಿಸುವ ಪ್ರಸಂಗ ಬಂದಿರುವುದು ವಿಷಾದನೀಯ ಎಂದು ಹೇಳಿದ್ದಾರೆ.
ದೂರಿನಲ್ಲಿ ಏನಿದೆ?
ಹೆಚ್. ಆಂಜನೇಯ ಅವರು ಪ್ರಸ್ತುತ ಕರ್ನಾಟಕ ಭವನದಲ್ಲಿ ಕಛೇರಿ ಅಧೀಕ್ಷಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕಚೇರಿಯ ವಿಚಾರದಲ್ಲಿ ಲೆಕ್ಕ ಶಾಖೆಯ ಸಿಬ್ಬಂದಿಯನ್ನು ಕರೆದು ಬಾಯಿಗೆ ಬಂದ ಹಾಗೆ ಮಾತನಾಡುವುದಲ್ಲದೇ ‘ಲೆಕ್ಕಾಧಿಕಾರಿ ಏನು ಕತ್ತೆ ಕಾಯುತ್ತಿದ್ದಾಳಾ’ ಎಂದು ಆಗೌರವದಿಂದ ಮಾತನಾಡಿದ್ದಾರೆ.
ಉಪ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಎಂಬ ದರ್ಪದಿಂದ ಪ್ರತಿ ದಿನ ಕಚೇರಿಯ ಕರ್ತವ್ಯದ ಅವಧಿಯಲ್ಲಿ ನೌಕರರಿಗೆ ಪ್ರತಿ ಮಾತು ಮಾತಿಗೂ ಅವಹೇಳನ ಮಾಡುತ್ತಿದ್ದಾರೆ. ನೌಕರರನ್ನು ಅಗೌರವದಿಂದ ಕಾಣುವುದಲ್ಲದೇ ಅಸಭ್ಯವಾದ ಅಶ್ಲೀಲವಾದ ಕೆಟ್ಟ ಪದಗಳನ್ನು ಉಪಯೋಗಿಸುತ್ತಾರೆ. ಮಹಿಳಾ ನೌಕರರಿಗೂ ಅಸಭ್ಯ ಪದಗಳಿಂದ ಮಾತನಾಡುತ್ತಾರೆ.
ಅಲ್ಲದೇ, ನಿಮ್ಮ ಮೇಲೆ ಡಿಜಿ ಮಾಡುತ್ತೇನೆ, ಅಮಾನತು ಮಾಡುತ್ತೇನೆ, ವಜಾಗೊಳಿಸುತ್ತೇನೆ ಎಂದು ಹೇಳಿ ನೌಕರರಿಗೆ ಬೆದರಿಕೆ ಹಾಕುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.