ADVERTISEMENT

ರಶ್ಮಿಕಾ ಮಂದಣ್ಣ ತೀವ್ರ ವಿಚಾರಣೆ

ಬಹುಭಾಷಾ ನಟಿ ಮನೆಯ ಮೇಲೆ ಐ.ಟಿ ದಾಳಿ ಪ್ರಕರಣ, ದಾಖಲೆಗಳ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 19:45 IST
Last Updated 17 ಜನವರಿ 2020, 19:45 IST
ವಿರಾಜಪೇಟೆ ಸಮೀಪದ ಕುಕ್ಲೂರಿನ ರಶ್ಮಿಕಾ ಮಂದಣ್ಣ ಮನೆ
ವಿರಾಜಪೇಟೆ ಸಮೀಪದ ಕುಕ್ಲೂರಿನ ರಶ್ಮಿಕಾ ಮಂದಣ್ಣ ಮನೆ   

ವಿರಾಜಪೇಟೆ (ಕೊಡಗು ಜಿಲ್ಲೆ): ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಮನೆಯ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನದ ವೇಳೆಗೆ ಪರಿಶೀಲನೆ ಮುಕ್ತಾಯಗೊಳಿಸಿ, ದಾಖಲೆ ಸಹಿತ ವಾಪಸ್ಸಾದರು.

ಗುರುವಾರ ರಾತ್ರಿ 9.30ರ ಸುಮಾರಿಗೆ ಮನೆಗೆ ಬಂದಿದ್ದ ರಶ್ಮಿಕಾ ಅವರನ್ನು ಅಂದು ತಡರಾತ್ರಿ 2.30ರ ತನಕ ತೀವ್ರ ವಿಚಾರಣೆಗೆ ಒಳಪಡಿಸಿದರು. ವಿವಿಧ ಹೂಡಿಕೆ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಪಡೆಯುತ್ತಿರುವ ಸಂಭಾವನೆ, ತೆರಿಗೆ ಪಾವತಿ ಸೇರಿದಂತೆ ಹಲವು ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದ್ದಾರೆ ಎನ್ನಲಾಗಿದೆ. ಶುಕ್ರವಾರ ಬೆಳಿಗ್ಗೆ ರಶ್ಮಿಕಾ ಅವರು ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದರು.

ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಬಂದಿದ್ದ ಅಧಿಕಾರಿಗಳು, ಪಟ್ಟಣದ ಅತಿಥಿ ಗೃಹದಲ್ಲಿ ತಂಗಿದ್ದರು.

ADVERTISEMENT

ಪೂರ್ವ ಸಿದ್ಧತೆ: ದಾಳಿಗೂ ಮೊದಲುಐ.ಟಿ ಅಧಿಕಾರಿಗಳು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಿದೆ. ಜ.15ರಂದೇ ವಿರಾಜಪೇಟೆಗೆ ಬಂದಿದ್ದ ಅಧಿಕಾರಿಗಳು, ಮದನ್‌ ಒಡೆತನದ ಸೆರೆನಿಟಿ ಹಾಲ್‌ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುಟ್ಟಾಗಿ ತೆರಳಿದ್ದರು.

‘ಯಾವ ಉದ್ದೇಶದಿಂದ ದಾಳಿ ನಡೆಸಿದ್ದಾರೆ ಎಂಬುದು ಐ.ಟಿ ಅಧಿಕಾರಿಗಳಿಗೇ ಗೊತ್ತು. ಅವರ ಪ್ರಶ್ನೆಗೆ ಏನು ಹೇಳಬೇಕೋ ಅಷ್ಟು ಹೇಳಿದ್ದೇವೆ. ಕುಟುಂಬವೆಂದ ಮೇಲೆ ಎಲ್ಲರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ’ ಎಂದು ರಶ್ಮಿಕಾ ತಾಯಿ ಸುಮನ್‌ ಮಂದಣ್ಣ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.