ADVERTISEMENT

ಪರಿಹಾರ ಮೊತ್ತ ₹30 ಲಕ್ಷಕ್ಕೆ ಹೆಚ್ಚಳ: ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಸಿಎಂ

ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಸಿ.ಎಂ ಭರವಸೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 20:15 IST
Last Updated 11 ಸೆಪ್ಟೆಂಬರ್ 2019, 20:15 IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸಿ ನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸಿ ನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕರ್ತವ್ಯದಲ್ಲಿದ್ದಾಗ ಹುತಾತ್ಮರಾಗುವ ಅರಣ್ಯ ಇಲಾಖೆ ಸಿಬ್ಬಂದಿ ಕುಟುಂಬಕ್ಕೆ ನೀಡುತ್ತಿರುವ ಪರಿಹಾರ ಮೊತ್ತವನ್ನು ₹20 ಲಕ್ಷದಿಂದ ₹30 ಲಕ್ಷಕ್ಕೆ ಹೆಚ್ಚಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ನಗರದ ಅರಣ್ಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

‘ಪೊಲೀಸ್ ಸಿಬ್ಬಂದಿ ಮೃತಪಟ್ಟರೆ ₹30 ಲಕ್ಷ ಪರಿಹಾರ ನೀಡಲಾಗುತ್ತಿದೆ. ಇದಕ್ಕೆ ಸರಿಸಮನಾಗಿ ಪರಿಹಾರ ಮೊತ್ತವನ್ನು ಅರಣ್ಯ ಸಿಬ್ಬಂದಿಗೂ ನೀಡಬೇಕಿದೆ. ಈ ಸಂಬಂಧ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಕೂಡಲೇ ಮಾತನಾಡುತ್ತೇನೆ. ಇಲಾಖೆಯ ದಿನಗೂಲಿ ನೌಕರರ ಬೇಡಿಕೆಗಳ ಸಂಬಂಧವೂ ಶೀಘ್ರವೇ ತೀರ್ಮಾನ ಕೈಗೊಳ್ಳುತ್ತೇನೆ’ ಎಂದರು.

ADVERTISEMENT

‘ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಶೇ 22ರಷ್ಟು ಅರಣ್ಯ ಪ್ರದೇಶವಿದೆ. ಕಾಡು ಮತ್ತು ಅಲ್ಲಿ ವಾಸವಿರುವ ವನ್ಯಜೀವಿಗಳ ರಕ್ಷಣೆಗೆ ಅರಣ್ಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. 1966ರಿಂದ ಈವರೆಗೆ 47 ಮಂದಿ ಅರಣ್ಯ ರಕ್ಷಣೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಅವರನ್ನು ಸ್ಮರಿಸಿಕೊಳ್ಳುವುದರಿಂದ ಅರಣ್ಯ ರಕ್ಷಣೆ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಸ್ಫೂರ್ತಿ ನೀಡಿದಂತೆ ಆಗಲಿದೆ’ ಎಂದರು.

‘ಆನೆಗಳ ದಾಳಿಯಿಂದ ಪ್ರಾಣ ಹಾನಿ, ಬೆಳೆ ಹಾನಿ ಹೆಚ್ಚಾಗುತ್ತಿದೆ. ಮಾನವ–ಆನೆ ಸಂಘರ್ಷ ನಿಯಂತ್ರಣಕ್ಕೆ ಸರ್ಕಾರ ಯೋಜನೆ ರೂಪಿಸಿದೆ. ಅರಣ್ಯದಲ್ಲಿ ಬೇಟೆ ಹಾಗೂ ಅಕ್ರಮ ಚಟುವಟಿಕೆಗಳ ನಿಗ್ರಹಕ್ಕೆ ಅತ್ಯಾಧುನಿಕ ಸಲಕರಣೆಗಳನ್ನು ಅರಣ್ಯ ಸಿಬ್ಬಂದಿಗೆ ಪೂರೈಸಲಾಗುತ್ತಿದೆ. ಈ ಕ್ರಮ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.