ADVERTISEMENT

ಎಸ್‌ಸಿ–ಎಸ್‌ಟಿ ಮೀಸಲು ಹೆಚ್ಚಳ: ಸಂಪುಟ ಉಪಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 11:19 IST
Last Updated 18 ನವೆಂಬರ್ 2020, 11:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುವ ಸಂಬಂಧ ಸಾಧಕ–ಬಾಧಕಗಳನ್ನು ಚರ್ಚಿಸಿ ವರದಿ ನೀಡಲು ಸಂಪುಟ ಉಪಸಮಿತಿ ರಚಿಸಲು ಬುಧವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕು ಎಂಬ ಕಾರಣಕ್ಕೆ ಹೋರಾಟಗಳು ನಡೆದಿವೆ. ಈ ವಿಷಯ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಸಂಪುಟ ಉಸಮಿತಿ ರಚಿಸಲು ತೀರ್ಮಾನಿಸಲಾಯಿತು. ಸಮಿತಿಯಲ್ಲಿ ಯಾರೆಲ್ಲ ಇರಬೇಕು ಎಂಬುದನ್ನು ಮುಖ್ಯಮಂತ್ರಿಯವರು ಪ್ರಕಟಿಸಲಿದ್ದಾರೆ ಎಂದರು.

ADVERTISEMENT

ಈ ಕುರಿತು ಮಾತನಾಡಿದ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಹಲವು ಸಂಘ–ಸಂಸ್ಥೆಗಳು ಒತ್ತಡ ಹೇರುತ್ತಲೇ ಬಂದಿವೆ. ನ್ಯಾ. ನಾಗಮೋಹನದಾಸ್‌ ಸಮಿತಿಯೂ ಸರ್ಕಾರಕ್ಕೆ ಈ ಸಂಬಂಧ ವರದಿಯನ್ನು ನೀಡಿದೆ. ಸಂಪುಟ ಉಪಸಮಿತಿಯು ಆ ವರದಿಯ ಪರಾಮರ್ಶೆ ನಡೆಸಲಿದೆ ಎಂದರು.

ಪರಿಶಿಷ್ಟ ಜಾತಿಗೆ ಶೇ 15 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ 7 ರಷ್ಟು ಮೀಸಲಾತಿ ನಿಗದಿ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ ಎಂದು ರಾಮುಲು ತಿಳಿಸಿದರು.

ಪ್ರಮುಖ ತೀರ್ಮಾನಗಳು

*ಕೃಷ್ಣಾ ಭಾಗ್ಯ ಜಲನಿಗಮ ₹500 ಕೋಟಿ, ಕರ್ನಾಟಕ ನೀರಾವರಿ ನಿಗಮ ₹650 ಕೋಟಿ, ಕಾವೇರಿ ನೀರಾವರಿ ನಿಗಮ ₹250 ಕೋಟಿ ಮತ್ತು ವಿಶ್ವೇಶ್ವರಯ್ಯ ಜಲ ನಿಗಮ ₹250 ಕೋಟಿ ಸಾಲ ಪಡೆಯುವುದಕ್ಕಾಗಿ ಸರ್ಕಾರ ಖಾತರಿ ನೀಡಲು ಒಪ್ಪಿಗೆ

*ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಯಾಗಿ ವಿವಿಧ ಸೇವೆಯಲ್ಲಿರುವ ಅಧಿಕಾರಿಗಳು ತಪ್ಪು ಮಾಡಿದಾಗ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಸಂಬಂಧ ಕೆಪಿಎಸ್‌ಸಿಯ ಸಲಹೆ ಪಡೆಯುವ ನಿಯಮವನ್ನು ಕೈಬಿಟ್ಟಿದ್ದು, ಇನ್ನು ಮುಂದೆ ಸರ್ಕಾರವೇ ನೇರ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ

*ದಕ್ಷಿಣ ಕನ್ನಡ ಜಿಲ್ಲೆಯ ಮನಬೆಟ್ಟು, ಕಿನ್ನಿಗೋಳಿ ಮತ್ತು ಕಟೀಲು ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಕಟೀಲು ಪಟ್ಟಣ ಪಂಚಾಯಿತಿ ರಚಿಸಲು ತೀರ್ಮಾನ

* ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಕೈಗೊಳ್ಳಲು ಕೇಂದ್ರ ಸರ್ಕಾರ ₹500 ಕೋಟಿ ನೀಡಿದ್ದು, ರಾಜ್ಯ ಸರ್ಕಾರ ₹500 ಕೋಟಿ ಸೇರಿಸಿ ಒಟ್ಟು ₹1,000 ಕೋಟಿ ಬಳಸಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲಾಗುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.