ADVERTISEMENT

ಅಂಗಾಂಗ ದಾನ: ಯುವಜನರಲ್ಲಿ ಹೆಚ್ಚಿದ ಒಲವು

ನೊಟ್ಟೊ ಅಡಿ ರಾಜ್ಯದಲ್ಲಿ 45 ವರ್ಷದೊಳಗಿನ 23 ಸಾವಿರಕ್ಕೂ ಅಧಿಕ ಮಂದಿ ಪ್ರತಿಜ್ಞೆ

ವರುಣ ಹೆಗಡೆ
Published 8 ಏಪ್ರಿಲ್ 2025, 23:30 IST
Last Updated 8 ಏಪ್ರಿಲ್ 2025, 23:30 IST
.
.   

ಬೆಂಗಳೂರು: ರಾಜ್ಯದಲ್ಲಿ ಅಂಗಾಂಗ ದಾನಕ್ಕೆ ಯುವಜನರು ಹೆಚ್ಚಿನ ಒಲವು ತೋರುತ್ತಿದ್ದು, ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯಡಿ (ನೊಟ್ಟೊ) ಯುವಜನರೇ ಅಧಿಕ ಸಂಖ್ಯೆಯಲ್ಲಿ ಅಂಗಾಂಗ ದಾನದ ಪ್ರತಿಜ್ಞೆ ಕೈಗೊಂಡಿದ್ದಾರೆ.

ಬದಲಾದ ಜೀವನ ಶೈಲಿ ಸೇರಿ ವಿವಿಧ ಕಾರಣಗಳಿಂದ ಅಂಗಾಂಗ ವೈಫಲ್ಯಕ್ಕೆ ಒಳಪಡುವವರ ಸಂಖ್ಯೆ ಹೆಚ್ಚುತ್ತಿದ್ದು, ಮೂತ್ರಪಿಂಡ, ಯಕೃತ್ತು, ಹೃದಯ ಸೇರಿ ವಿವಿಧ ಅಂಗಾಂಗಗಳ ಕಸಿಗೆ ರಾಜ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಸರ್ಕಾರದ ‘ಜೀವಸಾರ್ಥಕತೆ’ ಸಂಸ್ಥೆಯಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಅಂಗಾಂಗಕ್ಕೆ ಬೇಡಿಕೆ ಹೆಚ್ಚಳ, ದಾನಿಗಳ ಕೊರತೆಯ ಕಾರಣ ಸರ್ಕಾರದ ಜತೆಗೆ ಆಸ್ಪತ್ರೆಗಳೂ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಅಂಗಾಂಗ ದಾನ ಪ್ರಕ್ರಿಯೆ ಪ್ರೋತ್ಸಾಹಿಸಲು ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಹಾಗೂ ರಾಜ್ಯ ಮಟ್ಟದಲ್ಲಿ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ನೊಟ್ಟೊ) ಕಾರ್ಯನಿರ್ವಹಿಸುತ್ತಿವೆ. ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ದಾನಿಗಳ ಸಂಖ್ಯೆ ಹೆಚ್ಚಿಸಲು ನೊಟ್ಟೊ 2023ರಲ್ಲಿ ಕ್ಯೂಆರ್‌ ಕೋಡ್ ಕೂಡ ಪರಿಚಯಿಸಿದೆ. ನೊಟ್ಟೊ ಅಡಿ ಅಂಗಾಂಗ ಪ್ರತಿಜ್ಞೆ ಮಾಡಿದ 34 ಸಾವಿರ ಮಂದಿಯಲ್ಲಿ 23 ಸಾವಿರಕ್ಕೂ ಅಧಿಕ ಮಂದಿ 45 ವರ್ಷದೊಳಗಿನವರಾಗಿದ್ದಾರೆ.

ADVERTISEMENT

ರಸ್ತೆ ಅಪಘಾತ ಸೇರಿ ವಿವಿಧ ಸಂದರ್ಭದಲ್ಲಿ ಮಿದುಳು ನಿಷ್ಕ್ರಿಯಗೊಂಡವರು ಅಂಗಾಂಗ ದಾನ ಮಾಡಬಹುದಾಗಿದೆ. ಒಬ್ಬ ದಾನಿಯು ಹೃದಯ, ಮೂತ್ರಪಿಂಡ, ಶ್ವಾಸಕೋಶ, ಯಕೃತ್ತು, ಸಣ್ಣ ಕರುಳು ಹಾಗೂ ಮೇದೋಜೀರಕ ಗ್ರಂಥಿ ದಾನದ ಮೂಲಕ ಎಂಟು ಜೀವಗಳಿಗೆ, ಹೃದಯದ ಕವಾಟ, ಚರ್ಮ, ಕಣ್ಣು ಗುಡ್ಡೆ ಸೇರಿ ವಿವಿಧ ಅಂಗಾಂಶಗಳ ನೆರವಿನಿಂದ 50 ಮಂದಿಗೆ ನೆರವಾಗಬಹುದು. ಅಂಗಾಂಗ ದಾನಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಇದರಿಂದಾಗಿ ವಿವಿಧ ವಯೋಮಾನದವರು ಅಂಗಾಂಗ ದಾನದ ಪ್ರತಿಜ್ಞೆ ಕೈಗೊಳ್ಳುತ್ತಿದ್ದಾರೆ. ಈ ರೀತಿ ಪ್ರತಿಜ್ಞೆ ಕೈಗೊಂಡವರ ಅಂಗಾಂಗವನ್ನು ಮರಣದ ಬಳಿಕ ಪಡೆಯಲಾಗುತ್ತದೆ.

ಮಹಿಳೆಯರೇ ಅಧಿಕ: ನೊಟ್ಟೊ ಅಡಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಕೈಗೊಂಡವರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಿದೆ. 18 ಸಾವಿರಕ್ಕೂ ಅಧಿಕ ಮಹಿಳೆಯರು ಅಂಗಾಂಗ ದಾನದ ಪ್ರತಿಜ್ಞೆ ಕೈಗೊಂಡರೆ, 16,035 ಪುರುಷರು ಅಂಗಾಂಗ ದಾನದ ಪ್ರತಿಜ್ಞೆ ಮಾಡಿದ್ದಾರೆ. ಮಾನವ ಅಂಗಾಂಗ ದಾನ ಕಸಿ ಕಾಯ್ದೆ–1994 ಅಂಗಾಂಗ ದಾನಕ್ಕೆ ಉತ್ತೇಜನ ನೀಡುತ್ತಿದೆ. ಮಿದುಳು ನಿಷ್ಕ್ರಿಯಗೊಂಡ ಯಾವುದೇ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ. ಕಳೆದ ಮೂರು ವರ್ಷಗಳಿಂದ ವಾರ್ಷಿಕ 150ಕ್ಕೂ ಅಧಿಕ ಮಂದಿಯ ಅಂಗಾಂಗವನ್ನು ದಾನವಾಗಿ ಪಡೆಯಲಾಗಿದೆ. ಈ ವರ್ಷ ಮೂರು ತಿಂಗಳಲ್ಲಿ 58 ಮಂದಿ ಅಂಗಾಂಗ ದಾನ ಮಾಡಿದ್ದಾರೆ.

‘ರಾಜ್ಯದಲ್ಲಿ ಅಂಗಾಂಗ ದಾನಕ್ಕೆ ಉತ್ತೇಜನ ನೀಡಲು ಅಂಗಾಂಗ ದಾನಿಗಳ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದ ವತಿಯಿಂದ ಪ್ರಶಂಸನಾ ಪತ್ರಗಳನ್ನು ನೀಡಲಾಗುತ್ತಿದೆ. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಗೌರವಿಸಲಾಗುತ್ತಿದೆ. ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡುತ್ತಿದ್ದು, ಪ್ರತಿಜ್ಞೆ ಕೈಗೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಗಾಂಗ ದಾನಕ್ಕೆ ಕ್ಯೂಆರ್‌ ಕೋಡ್

ಎಲ್ಲ ಜಿಲ್ಲೆಗಳಲ್ಲೂ ಪ್ರತಿಜ್ಞೆ

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿವಿಧ ವಯೋಮಾನದವರು ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯಡಿ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಬಳ್ಳಾರಿಯಲ್ಲಿ (8024) ಗರಿಷ್ಠ ಮಂದಿ ಪ್ರತಿಜ್ಞೆ ಕೈಗೊಂಡಿದ್ದಾರೆ. ಧಾರವಾಡ (7524) ಬೆಂಗಳೂರು ನಗರ (2457) ಕೋಲಾರ (1781) ದಕ್ಷಿಣ ಕನ್ನಡ (1399) ಕೊಪ್ಪಳ (1094) ಹಾಗೂ ಹಾವೇರಿಯಲ್ಲಿ (1056) ಸಾವಿರಕ್ಕೂ ಅಧಿಕ ಮಂದಿ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. 

ಅಂಗಾಂಗ ದಾನದ ಬಗ್ಗೆ ಆಸ್ಪತ್ರೆ ಮತ್ತು ವಿವಿಧೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಅಂಗಾಂಗ ದಾನಿಗಳ ಕುಟುಂಬವನ್ನು ಸನ್ಮಾನಿಸಲಾಗುತ್ತಿದ್ದು ದಾನಿಗಳು ಸ್ವಯಂ ಪ್ರೇರಿತರಾಗಿ ಮುಂದಕ್ಕೆ ಬರಬೇಕು
–ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.