ADVERTISEMENT

ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ

ಮೆ 28ರಂದು ಏಕಕಾಲದಲ್ಲಿ ಚಾಲನೆ: ಹೋರಾಟದ ನೆಲದಲ್ಲಿ ಒಂದು ದಿನ

​ಪ್ರಜಾವಾಣಿ ವಾರ್ತೆ
Published 24 ಮೇ 2022, 19:00 IST
Last Updated 24 ಮೇ 2022, 19:00 IST

ಬೆಂಗಳೂರು: ‘ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ‘ಅಮೃತ ಭಾರತಿಗೆ ಕನ್ನಡದಾರತಿ’ ರಾಷ್ಟ್ರಭಕ್ತಿ ಅಭಿಯಾನ ಮೇ 28 ರಿಂದ ಆರಂಭವಾಗಲಿದೆ. ಸ್ವಾತಂತ್ರ್ಯ ಹೋರಾಟ ನಡೆದ ರಾಜ್ಯದ 75 ಸ್ಥಳಗಳಲ್ಲಿ ಈ ಕಾರ್ಯಕ್ರಮ ಏಕಕಾಲದಲ್ಲಿ ಚಾಲನೆ ನೀಡಲಿದ್ದೇವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಕಾರ್ಯಕ್ರಮದ ವಿವರ ನೀಡಿದ ಅವರು, ‘ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡದ ವೀರಭೂಮಿ‌ ನೀಡಿದ ಕೊಡುಗೆಯನ್ನು ಸ್ಮರಿಸುವುದು ಮತ್ತು ಹೊಸ ಪೀಳಿಗೆಗೆ ವಿಷಯ ತಿಳಿಸುವುದು ಕಾರ್ಯಕ್ರಮದ ಆಶಯ’ ಎಂದರು.

ಮೂರು ಹಂತಗಳಲ್ಲಿ ‘ಅಮೃತ ಭಾರತಿಗೆ ಕನ್ನಡದಾರತಿ’ ಅಭಿಯಾನ ಮೂರು ತಿಂಗಳು ಕಾಲ ನಡೆಯಲಿದೆ. ಮೇ 28ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ದಕ್ಷಿಣ ಭಾರತದ ಜಲಿಯನ್ ವಾಲಾಭಾಗ್‌ ಎಂದೇ ಕರೆಯಲ್ಪಡುವ ವಿದುರಾಶ್ವತ್ಥದಲ್ಲಿ ನಡೆಯುವ ಕಾರ್ಯಕ್ರಮವನ್ನು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.

ADVERTISEMENT

‘ಪೋರ್ಚಗೀಸರ ವಿರುದ್ಧ ಮೊದಲ ಹೋರಾಟ ನಡೆದ ಮಂಗಳೂರಿನ ಉಳ್ಳಾಲ, ಬೀದರ್‌ನ ಗೋರಾಟಾ ಸೇರಿ ನೂರಾರು ಸ್ಥಳಗಳು ಸ್ವಾತಂತ್ರ್ಯ ಚಳವಳಿಗೆ ಸಾಕ್ಷಿಯಾಗಿವೆ. ಎಲ್ಲ ಕಡೆ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತಿಲ್ಲ. 75 ಸ್ಥಳಗಳನ್ನು ಗುರುತಿಸಿ ಒಂದೇ ದಿನ ಕಾರ್ಯಕ್ರಮ ನಡೆಸುವ ಉದ್ದೇಶ ಇತ್ತು. ಆದರೆ, ಚುನಾವಣೆ ನೀತಿ ಸಂಹಿತೆ ಇರುವುದರಿಂದ ಮೊದಲ ಹಂತದಲ್ಲಿ 45 ಕಡೆ ಕಾರ್ಯಕ್ರಮಗಳು ನಡೆಯಲಿವೆ. ಉಳಿದೆಡೆ ಜೂನ್ 25ರಂದು ಕಾರ್ಯಕ್ರಮ ನಡೆಯಲಿವೆ. ಹೋರಾಟದ ನೆಲದಲ್ಲಿ ಶಿಲಾಫಲಕ ಅಳವಡಿಸಲಾಗುತ್ತದೆ’ ಎಂದು ಹೇಳಿದರು.

‘ಒಂದೊಂದು ಕಾರ್ಯಕ್ರಮದಲ್ಲಿ 3 ಸಾವಿರದಿಂದ 5 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಇದು ಇಲಾಖೆ ಕಾರ್ಯಕ್ರಮವಷ್ಟೇ ಆಗದೆ ಸಮಾಜದ ಕಾರ್ಯಕ್ರಮ ಆಗಬೇಕು. ಹಾಗಾಗಿ ಸಂಘ–ಸಂಸ್ಥೆಗಳ ಸಹಕಾರ ಕೇಳಿದ್ದೇವೆ. ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲು ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೆ ತಲಾ ₹1.50 ಲಕ್ಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಖಾತೆಗೆ ₹1.80 ಲಕ್ಷ ನೀಡಲಾಗುತ್ತಿದೆ’ ಎಂದು ವಿವರಿಸಿದರು.

‘ಬ್ರಿಟಿಷರ ವಿರುದ್ಧ ಹೋರಾಟ: ಟಿಪ್ಪು ಹೆಸರಿಲ್ಲ’
ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ‘ಅಮೃತ ಭಾರತಿಗೆ ಕನ್ನಡದಾರತಿ’ ಅಭಿಯಾನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 30 ನಿಮಿಷದ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ್ದು, ಅದರಲ್ಲಿ ಟಿಪ್ಪು ಸುಲ್ತಾನ್ ಹೊರತಾಗಿ ಬಹುತೇಕ ಪ್ರಮುಖರ ಹೆಸರು ಉಲ್ಲೇಖವಾಗಿದೆ.

ಉಳ್ಳಾಲದ ರಾಣಿ ಅಬ್ಬಕ್ಕ, ಗೇರುಸೊಪ್ಪೆಯ ರಾಣಿ ಚನ್ನಬೈರಾದೇವಿ, ಸೋಂದೆಯ ರಾಜರು, ದೋಂಡಿಯಾ ವಾಘ್, ಹಲಗಲಿಯ ಬೇಡರು, ವೆಂಕಟಪ್ಪನಾಯ್ಕ,ವಿದುರಾಶ್ವತ್ಥದ ಹತ್ಯಾಕಾಂಡ, ಸುರಪುರದ ಹೋರಾಟ, ಶಿವಮೊಗ್ಗ ಜಿಲ್ಲೆಯ ಈಸೂರು, ಬೀದರ್‌ನ ಗೋರಟಾ ಹೋರಾಟಗಳ ಬಗ್ಗೆ ಹೇಳಲಾಗಿದೆ. ‌ಗಾಂಧೀಜಿ ರಾಜ್ಯದಲ್ಲಿ ನಡೆಸಿದ ಪ್ರವಾಸದ ಕುರಿತು ಕಿರುಚಿತ್ರದಲ್ಲಿ ವಿವರಿಸಲಾಗಿದೆ.

ಬ್ರಿಟಿಷರ ವಿರುದ್ಧ ಪ್ರಬಲವಾಗಿ ಹೋರಾಟ ನಡೆಸಿದ ದೋಂಡಿಯಾ ವಾಘ್‌ ಕುರಿತು ಹೇಳುವಾಗ ಟಿಪ್ಪು ಹೆಸರು ಉಲ್ಲೇಖವಾಗುತ್ತದೆ. ‘ದೋಂಡಿಯಾ ವಾಘ್‌ನನ್ನು ಟಿಪ್ಪು ಸೆರೆಮನೆಯಲ್ಲಿ ಇರಿಸದೇ ಇದ್ದಿದ್ದರೆ ಬ್ರಿಟಿಷರ ವಿರುದ್ಧ ಹೋರಾಟ ಇನ್ನಷ್ಟು ತೀವ್ರಗೊಳ್ಳುತ್ತಿತ್ತು’ ಎಂದು ವಿವರಿಸಲು ಟಿಪ್ಪು ಹೆಸರು ಬಳಕೆಯಾಗಿದೆ.

ಆಂಗ್ಲೊ ಮೈಸೂರು ಯುದ್ಧದ ಬಗ್ಗೆ ಮಾಹಿತಿಯನ್ನೇ ಈ ಚಿತ್ರ ನೀಡುವುದಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೋಡಲ್ ಅಧಿಕಾರಿ ಸುದರ್ಶನ್, ‘ಟಿಪ್ಪು ವಿಷಯ ಪ್ರಸ್ತಾಪಿಸದಂತೆ ಸರ್ಕಾರದಿಂದ ಯಾವುದೇ ಸೂಚನೆ ಇಲ್ಲ. 30 ನಿಮಿಷದ ಮಿತಿಯಲ್ಲಿ ಕೆಲವು ವಿಷಯಗಳನ್ನಷ್ಟೇ ಪ್ರಸ್ತಾಪಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಸಾಕ್ಷ್ಯಚಿತ್ರವನ್ನು ವಿಸ್ತರಿಸುವ ಪ್ರಸ್ತಾಪ ಬಂದರೆ ಎಲ್ಲವನ್ನೂ ಒಳಗೊಳ್ಳಲು ಸಾಧ್ಯವಾಗುತ್ತದೆ’ ಎಂದರು.

‘ಆಗಸ್ಟ್‌ 9ರಿಂದ ಎಲ್ಲರ ಮನೆ ಮೇಲೆ ರಾಷ್ಟ್ರಧ್ವಜ’
‘ಅಮೃತಮಹೋತ್ಸವದ ಅಂಗವಾಗಿ ಆಗಸ್ಟ್‌ 1ರಿಂದ 8ರವರೆಗೆ ರಥಯಾತ್ರೆಗಳು ನಡೆಯಲಿವೆ. ಕಂದಾಯ ಜಿಲ್ಲೆಗಳಿಂದ ಆರಂಭವಾಗಿ ಎಲ್ಲ ಜಿಲ್ಲೆಗಳನ್ನು ಹಾಯ್ದು ಆ.9ರಂದು ಬೆಂಗಳೂರಿಗೆ ಬಂದು ಸಮಾರೋಪಗೊಳ್ಳಲಿವೆ’ ಎಂದು ಸುನಿಲ್‌ಕುಮಾರ್ ಹೇಳಿದರು.

‘ಆ.9ರಿಂದಲೇ ರಾಜ್ಯದ ಎಲ್ಲರ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಜನರಲ್ಲಿ ಮನವಿ ಮಾಡಲಾಗುತ್ತಿದೆ. ಆಗಸ್ಟ್‌ 15ರಂದೂ ಎಲ್ಲರ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸುವಂತೆ ಕೋರಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.