ADVERTISEMENT

ಇತಿಹಾಸ ಓದಿದರೆ ಡಿಕೆಶಿಗೆ ಸ್ವಾತಂತ್ರ್ಯ ಹೋರಾಟ ಸತ್ಯ ಅರಿವಾಗಲಿದೆ: ಕುಮಾರಸ್ವಾಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಆಗಸ್ಟ್ 2022, 12:21 IST
Last Updated 9 ಆಗಸ್ಟ್ 2022, 12:21 IST
ಡಿ.ಕೆ.ಶಿವಕುಮಾರ್ ಮತ್ತು ಎಚ್‌.ಡಿ. ಕುಮಾರಸ್ವಾಮಿ
ಡಿ.ಕೆ.ಶಿವಕುಮಾರ್ ಮತ್ತು ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಇತಿಹಾಸ ಓದಿದರೆ ಸ್ವಾತಂತ್ರ್ಯ ಹೋರಾಟ ಬಗ್ಗೆ ಸತ್ಯ ಅರಿವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

‘ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟ ಮಾಡಿದ್ದೇ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಎಚ್‌ಡಿಕೆ, ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.

‘ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆ ಅಪ್ರಭುದ್ಧತೆಯ ಪ್ರತೀಕ ಮತ್ತು ಪರಮ ಬಾಲಿಶ’ ಎಂದು ಎಚ್‌ಡಿಕೆ ಟೀಕಿಸಿದ್ದಾರೆ.

ADVERTISEMENT

ಡಿಕೆಶಿ ಅವರಿಗೆ ಗೊತ್ತಿರಲಿ, 1947ರ ಹಿಂದಿನ ಕಾಂಗ್ರೆಸ್ ಬೇರೆ, ಈಗಿನ ಸೋಗಲಾಡಿ ಸಿದ್ಧಹಸ್ತರು (ಸಿದ್ದರಾಮಯ್ಯ) ಇರುವ ಕಾಂಗ್ರೆಸ್ಸೇ ಬೇರೆ. ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಡಲು ಮಹಾತ್ಮಗಾಂಧಿ ನೇತೃತ್ವದ ಕಾಂಗ್ರೆಸ್ ಹೋರಾಟ ಮಾಡಿತ್ತು. ನಂತರದ ಕಾಂಗ್ರೆಸ್ ಮಾಡಿದ್ದೇ ಸ್ವಾತಂತ್ರ್ಯದ ಮಾರಣಹೋಮ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

‘ಮಾಡಿದ ಪಾಪಕ್ಕೆ ಇವತ್ತಿನ ಕಾಂಗ್ರೆಸ್ ಶಾಸ್ತಿ ಅನುಭವಿಸುತ್ತಿದೆ. ನಾನು ಮುಖ್ಯಮಂತ್ರಿ ಆಗಿದ್ದು ಅಂದು ರಾಷ್ಟ್ರಪಿತರು ತಂದುಕೊಟ್ಟ ಸ್ವಾತಂತ್ರ್ಯ ಹಾಗೂ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಜಗತ್ ಮಾನ್ಯ ಸಂವಿಧಾನದ ಕಾರುಣ್ಯದಿಂದ. ಇದರಲ್ಲಿ ಕಾಂಗ್ರೆಸ್ ಪಾತ್ರ ಶೂನ್ಯ’ ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ.

‘ನಾನು ಪಂಡಿತ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆ ಹಗುರವಾಗಿ ಮಾತನಾಡಲಾರೆ. ಅವರ ನಂತರ ಕಾಂಗ್ರೆಸ್ ಹೇಗೆಲ್ಲಾ ಹಾದಿತಪ್ಪಿ ಜನರ ಸ್ವಾತಂತ್ರ್ಯ ಹರಣ ಮಾಡಿತು ಎನ್ನುವದನ್ನು ಡಿ.ಕೆ.ಶಿವಕುಮಾರ್ ಅವರು ಇತಿಹಾಸ ಓದಿದರೆ ಸತ್ಯ ಅರಿವಾಗುತ್ತದೆ’ ಎಂದು ಕುಟುಕಿದ್ದಾರೆ.

‘ಸಂವಿಧಾನ ಕೊಟ್ಟವರು, ದೇಶದ ಮೊದಲನೇ ಸಂಪುಟದಲ್ಲಿ ಸಚಿವರಾಗಿದ್ದವರು ಡಾ.ಬಿ.ಆರ್.ಅಂಬೇಡ್ಕರ್ ಅವರು. ಅಂಥ ಮಹನೀಯರನ್ನು ಸಂಸತ್ತಿಗೇ ಮತ್ತೆ ಬಾರದಂತೆ ತಡೆದು, ಭಾರತದ ದೀನದಲಿತರ ದನಿಯನ್ನು ನಿರ್ದಯವಾಗಿ ಅಡಗಿಸಿದ ಪಕ್ಷದ ನಾಯಕರು ಇವತ್ತು ಸ್ವಾತಂತ್ರ್ಯದ ಭಜನೆ ಮಾಡುತ್ತಿದ್ದಾರೆ’ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

‘ಕಾಂಗ್ರೆಸ್ ಕೋಳಿ ಕೂಗಿದರೆ ಭಾರತದಲ್ಲಿ ಬೆಳಕು ಹರಿಯುತ್ತದೆ ಎನ್ನುವ ಕಾಲ ಹೋಗಿದೆ. ಡಿ.ಕೆ.ಶಿವಕುಮಾರ್ ಅವರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ನನ್ನದು. ಅಲ್ಲದೆ, ಪಕ್ಷದಲ್ಲಿ ನಿಮ್ಮ ಸ್ವಾತಂತ್ರ್ಯಹರಣ ಮಾಡುತ್ತಿರುವವರ ಕಡೆ ಗಮನ ಹರಿಸಿ’ ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

‘ಈಗ ಸ್ವಾತಂತ್ರೋತ್ಸವದ ನಡಿಗೆ ಎಂದು ಹೊರಟಿದ್ದೀರಿ. ಯಾರ ಸ್ವಾತಂತ್ರ್ಯಕ್ಕಾಗಿ ಎಂದು ಸ್ವಲ್ಪ ಬಿಡಿಸಿ ಹೇಳುವಿರಾ? ಇದುವರೆಗೂ ಕಾಂಗ್ರೆಸ್ ನಡೆಸಿದ ಸ್ವಾತಂತ್ರ್ಯ ವಿರೋಧಿ ಕೃತ್ಯಗಳಿಗೆ ಉತ್ತರ ಕೊಡುವಿರಾ’ ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.