ADVERTISEMENT

ಕರ್ನಾಟಕಕ್ಕೆ ತಿಂಗಳಿಗೆ 2 ಲಕ್ಷ ಟನ್‌ ಕಲ್ಲಿದ್ದಲು ಪೂರೈಕೆಗೆ ಕೇಂದ್ರ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2023, 14:26 IST
Last Updated 26 ಅಕ್ಟೋಬರ್ 2023, 14:26 IST
ಕಲ್ಲಿದ್ದಲು (ಸಂಗ್ರಹ ಚಿತ್ರ)
ಕಲ್ಲಿದ್ದಲು (ಸಂಗ್ರಹ ಚಿತ್ರ)   

ನವದೆಹಲಿ: ಕರ್ನಾಟಕ ರಾಜ್ಯಕ್ಕೆ ತಿಂಗಳಿಗೆ ಹೆಚ್ಚುವರಿಯಾಗಿ 2 ಲಕ್ಷ ಟನ್‌ ಕಲ್ಲಿದ್ದಲು ನೀಡಲು ಕೇಂದ್ರ ಸರ್ಕಾರ ಒಪ್ಪಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು. 

ಗುರುವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅದಕ್ಕೆ ಅನುಗುಣವಾಗಿ ಅಗತ್ಯ ವಿದ್ಯುತ್ ಪೂರೈಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದರು. 

‘ಕುಸುಮ್‌ ಬಿ ಹಾಗೂ ಕುಸುಮ್‌ ಸಿ ಯೋಜನೆಯಡಿ ರಾಜ್ಯದ 200 ಉಪ ಕೇಂದ್ರಗಳಲ್ಲಿ ಸೌರವಿದ್ಯುತ್‌ ಉತ್ಪಾದನೆಗೆ ಟೆಂಡರ್‌ ಕರೆಯಲಾಗಿದೆ. ವಾರದಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ರೈತರಿಗೆ ಈ ಉಪಕೇಂದ್ರಗಳ ಮೂಲಕ ಸೌರವಿದ್ಯುತ್‌ ಒದಗಿಸಲಾಗುತ್ತದೆ’ ಎಂದು ಹೇಳಿದರು. 

ADVERTISEMENT

‘ಕೂಡ್ಲಿಯ ಎನ್‌ಟಿಪಿಸಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಸಾಮರ್ಥ್ಯ 2400 ಮೆಗಾವಾಟ್‌. ಇದರಲ್ಲಿ ರಾಜ್ಯದ ಪಾಲು 1250 ಮೆಗಾವಾಟ್‌ ಇದೆ. ಈ ಪೈಕಿ, ರಾಜ್ಯಕ್ಕೆ 1100 ಮೆಗಾವಾಟ್‌ ಸರಬರಾಜು ಆಗುತ್ತಿದೆ. ಉಳಿದ 150 ಮೆಗಾವಾಟ್ ಅನ್ನು ದೆಹಲಿಗೆ ವರ್ಗಾಯಿಸಲಾಗಿದೆ. ಈ ಸಂಬಂಧ ಕೇಂದ್ರ ಸಚಿವರೊಂದಿಗೆ ಸಮಾಲೋಚಿಸಲಾಗಿದೆ. ಡಿಸೆಂಬರ್‌ನಿಂದ 150 ಮೆಗಾವಾಟ್‌ ವಿದ್ಯುತ್‌ ರಾಜ್ಯಕ್ಕೆ ಲಭ್ಯವಾಗಲಿದೆ’ ಎಂದರು.

‘ಕೇಂದ್ರ ಗ್ರಿಡ್‌ನಿಂದ ವಿದ್ಯುತ್‌ ಖರೀದಿಸಲಾಗುತ್ತದೆ. ಜತೆಗೆ, ಇಂಧನ ವಿನಿಮಯದ ಅಡಿಯಲ್ಲಿ ಪಂಜಾಬ್ (300 ಮೆಗಾವಾಟ್) ಹಾಗೂ ಉತ್ತರ ಪ್ರದೇಶದಿಂದ (500 ಮೆಗಾವಾಟ್‌) ವಿದ್ಯುತ್‌ ಪಡೆಯಲಾಗುತ್ತದೆ. ಹಿಮಾಚಲ ಪ್ರದೇಶದಿಂದ 200 ಮೆಗಾವಾಟ್ ವಿದ್ಯುತ್‌ ಖರೀದಿ ಮಾಡಲಾಗುತ್ತದೆ’ ಎಂದು ಹೇಳಿದರು. 

‘ನಿಯಮದ ಪ್ರಕಾರವೇ ವಿದ್ಯುತ್ ಖರೀದಿ ಮತ್ತು ಕಲ್ಲಿದ್ದಲು ಆಮದು ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಈ ಬಗ್ಗೆ ಜೆಡಿಎಸ್‌ ಮುಖಂಡ ಎಚ್‌.ಡಿ ಕುಮಾರಸ್ವಾಮಿ ಮಾಡಿರುವ ಆರೋಪ ಸತ್ಯಕ್ಕೆ ದೂರ. ಮಾಹಿತಿ ಕೊರತೆಯಿಂದ ಅವರು ಈ ಆರೋ‍ಪ ಮಾಡಿದ್ದಾರೆ. ಇಂಧನ ಖರೀದಿ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಬಗ್ಗೆ ಎಚ್‌.ಡಿ.ರೇವಣ್ಣ ಅವರಲ್ಲಿ ಕುಮಾರಸ್ವಾಮಿ ಮಾಹಿತಿ ಪಡೆಯಲಿ’ ಎಂದರು. 

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿನ ಬೆಳೆ ಮಾದರಿ ಮತ್ತು ವಿದ್ಯುತ್ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕಬ್ಬು ಮತ್ತು ಭತ್ತ ಬೆಳೆಯುವ ಭಾಗಗಳಲ್ಲಿ 7 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಲೋಡ್‌ ಶೆಡ್ಡಿಂಗ್‌ ಮಾಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.