ADVERTISEMENT

India Pakistan Tension: ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 9 ಮೇ 2025, 16:10 IST
Last Updated 9 ಮೇ 2025, 16:10 IST
ಹೇಮಂತ್‌ ನಿಂಬಾಳ್ಕರ್
ಹೇಮಂತ್‌ ನಿಂಬಾಳ್ಕರ್   

ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಸಂಘರ್ಷ ತೀವ್ರಗೊಂಡಿದ್ದು, ರಾಜ್ಯದಲ್ಲೂ ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ವಿಭಾಗ ಸೂಚಿಸಿದೆ.

ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಸೂಕ್ಷ್ಮ ಪ್ರದೇಶಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಜತೆಗೆ, ಬಂದೋಬಸ್ತ್‌ ಕೈಗೊಳ್ಳಬೇಕು ಎಂದೂ ಹೇಳಿದೆ.

ಆಡಳಿತ ಕಟ್ಟಡಗಳು, ರಕ್ಷಣಾ ಸ್ಥಾವರಗಳು, ವಿಜ್ಞಾನ ಸಂಶೋಧನಾ ಕೇಂದ್ರಗಳು, ವಿಮಾನ ನಿಲ್ದಾಣಗಳು, ಜಲಾಶಯಗಳು, ಉಪಗ್ರಹ ಕೇಂದ್ರಗಳು, ಜಲ ವಿದ್ಯುತ್ ಸ್ಥಾವರಗಳು, ಅಣು ವಿದ್ಯುತ್‌ ಸ್ಥಾವರ, ರೈಲು ನಿಲ್ದಾಣಗಳು, ಮೆಟ್ರೊ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ನಿಗಾ ವಹಿಸಬೇಕು ಎಂದು ರಾಜ್ಯ ಗುಪ್ತಚರ ವಿಭಾಗದ ನಿರ್ದೇಶಕ ಹೇಮಂತ್‌ ಎಂ. ನಿಂಬಾಳ್ಕರ್‌ ಸೂಚಿಸಿದ್ದಾರೆ.

ADVERTISEMENT

ಬಂದರು ಹಾಗೂ ಹಡಗು ತಯಾರಿಕಾ ಸಂಸ್ಥೆಗಳು, ಸಾಫ್ಟ್‌ವೇರ್ ಕಂಪನಿಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕೇಂದ್ರಗಳು, ಪೈಪ್‌ಲೈನ್ ಮತ್ತು ಸಂಗ್ರಹಾಗಾರಗಳು, ಜನಸಂದಣಿ ಸೇರುವ ಶಾಪಿಂಗ್ ಮಾಲ್‌ಗಳು ಮತ್ತು ತಾರಾ ಹೋಟೆಲ್‌ಗಳು, ವಿದೇಶಿ ರಾಜತಾಂತ್ರಿಕ ಕಚೇರಿಗಳು, ವಸತಿ ಮತ್ತಿತರ ಕಟ್ಟಡಗಳು, ಭಾರಿ ಕೈಗಾರಿಕೆಗಳು, ಜನ ಸಂದಣಿ ಸೇರುವ ದೇವಾಲಯಲಗಳು, ಮಸೀದಿ ಹಾಗೂ ಚರ್ಚ್‌ಗಳು ಸೇರಿ ಜನಸಂದಣಿ ಸ್ಥಳಗಳಲ್ಲಿಯೂ ಕಟ್ಟೆಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.

ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಬೇಕು. ಸಿ.ಸಿ.ಟಿ.ವಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿ ಇರುವ ಕುರಿತು ಖಚಿತ ಪಡಿಸಿಕೊಳ್ಳಬೇಕು. ಕ್ಯಾಮೆರಾಗಳು ಇಲ್ಲದ ಸ್ಥಳಗಳಲ್ಲಿ ತುರ್ತಾಗಿ ಕ್ಯಾಮೆರಾ ಅಳವಡಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಸಾರ್ವಜನಿಕರಲ್ಲಿ ಅರಿವು: ಕೇಂದ್ರ ಸರ್ಕಾರ ಸೂಚನೆಯಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಸ್ವರಕ್ಷಣೆ ತಾಲೀಮು ಆಯೋಜಿಸಬೇಕು. ಗ್ರಾಮ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಸಂಸ್ಥೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ.

ಘಟಕಾಧಿಕಾರಿಗಳು ತಮ್ಮ ಘಟಕಗಳಲ್ಲಿನ ವೈರ್‌ಲೆಸ್ ಉಪಕರಣಗಳು, ಕಂಪ್ಯೂಟರ್‌ ಮತ್ತು ವಾಹನಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳಬೇಕು. ಶಸ್ತ್ರಾಗಾರದಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

  • ಮನೆಗಳಲ್ಲಿ ನಿಗದಿತ ನಗದು, ಇಂಧನ ತುಂಬಿದ ವಾಹನಗಳು ಇರುವಂತೆ ನೋಡಿಕೊಳ್ಳಬೇಕು

  • ಅಗತ್ಯ ಪ್ರಮಾಣದ ಔಷಧಿಗಳನ್ನು ಇಟ್ಟುಕೊಂಡಿರಬೇಕು

  • ಮೊಬೈಲ್‌ನಲ್ಲಿ ಸದಾ ಚಾರ್ಜ್‌ ಇರುವಂತೆ ನೋಡಿಕೊಳ್ಳಬೇಕು

‘ಸುಳ್ಳು ಸುದ್ದಿ ಹರಡಿದರೆ ಕ್ರಮ’

‘ಆಪರೇಷನ್‌ ಸಿಂಧೂರ’ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಎಚ್ಚರಿಕೆ ನೀಡಿದರು. ‘ದಾಳಿಯ ಸಂಬಂಧ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ’ ಎಂದು ಹೇಳಿದರು. ‘ಭಾರತದ ಗಡಿ ಪ್ರದೇಶದಲ್ಲಿ ಹಲವು ಬೆಳವಣಿಗೆಳು ನಡೆಯುತ್ತಿವೆ. ರಕ್ಷಣಾ ಇಲಾಖೆ ಅಧಿಕಾರಿಗಳೇ ಅಧಿಕೃತವಾಗಿ ಮಾಹಿತಿ ನೀಡುತ್ತಿದ್ದಾರೆ. ಸಾರ್ವಜನಿಕರು ಸಮಾಜಕ್ಕೆ ತಪ್ಪು ಮಾಹಿತಿ ನೀಡಬಾರದು’ ಎಂದು ಕೋರಿದರು. ಬೆಂಗಳೂರಿನ ಸೂಕ್ಷ್ಮ ಪ್ರದೇಶದಲ್ಲಿ ಬಂದೋಬಸ್ತ್‌ ಹೆಚ್ಚಿಸುವಂತೆ ಡಿಸಿಪಿ ಹಾಗೂ ಎಸಿಪಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ನಿಗಾ ಇಡಬೇಕಾದ ಚಟುವಟಿಕೆ/ಜನರು

  • ಎಲ್‌ಇಟಿ ಜೆಇಎಮ್ ಐಎಂ ಮಾಡ್ಯೂಲ್ಸ್‌ ಮತ್ತು ಸಂಘಟನೆಯ ಸದಸ್ಯರು

  • ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾದವರು ಶಿಕ್ಷೆಗೆ ಒಳಗಾದವರು

  • ಬಾಂಬ್ ತಯಾರಿಕೆ ಮತ್ತು ಬಾಂಬ್ ಬಳಸಿ ಭಯೋತ್ಪಾದನೆ ಮಾಡುವಂತಹ ಕೃತ್ಯಗಳಲ್ಲಿ ಭಾಗಿ ಆದವರು

  • ಸ್ಫೋಟಕಗಳು ವಸ್ತುಗಳ ಹಾಗೂ ಡಿಟೋನೇಟರ್‌ಗಳಂತಹ ಉಪಕರಣಗಳ ತಯಾರು ಮಾಡುವ ಸ್ಥಳಗಳು ಭಾರತದ ವಿರುದ್ಧ ಭಾಷಣಗಳು ಮತ್ತು ಘೋಷಣೆಗಳ ಮೂಲಕ ಸಾರ್ವಜನಿಕ ಶಾಂತಿ ಭಂಗವನ್ನು ಉಂಟು ಮಾಡುವವರು

  • ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವವರು

  • ನಗರ/ಜಿಲ್ಲೆಗಳಿಗೆ ಭೇಟಿ ನೀಡುವ ಅಪರಿಚಿತರು ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಮತ್ತು ಅವರು ತಂಗುವ ಸ್ಥಳ/ ಹೋಟೆಲ್‌ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.