ADVERTISEMENT

‘10 ಶತಕೋಟಿ ಟನ್ ಸರಕು ಸಾಗಣೆ ಗುರಿ’

ಎನ್‌ಎಂಪಿಎ ‘ವೈವಿಧ್ಯಮಯ’ ಸುವರ್ಣ ಸಂಭ್ರಮ: ಭಾಷೆಗಳ ಸೊಗಡಿನ ಮೇಳೈಕೆ, ಸಾಂಸ್ಕೃತಿಕ ವೈಭವ; ಅಬ್ಬಕ್ಕ ಗುಣಗಾನ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 2:52 IST
Last Updated 14 ನವೆಂಬರ್ 2025, 2:52 IST
ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್‌ ಅವರನ್ನು ಎನ್‌ಎಂಪಿಎ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಸನ್ಮಾನಿಸಿದರು. ಪ್ರಲ್ಹಾದ ಜೋಶಿ ಮತ್ತು ಕ್ಯಾಪ್ಟನ್ ಬ್ರಿಜೇಶ್ ಚೌಟ ಪಾಲ್ಗೊಂಡಿದ್ದರು  ಪ್ರಜಾವಾಣಿ ಚಿತ್ರ
ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್‌ ಅವರನ್ನು ಎನ್‌ಎಂಪಿಎ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಸನ್ಮಾನಿಸಿದರು. ಪ್ರಲ್ಹಾದ ಜೋಶಿ ಮತ್ತು ಕ್ಯಾಪ್ಟನ್ ಬ್ರಿಜೇಶ್ ಚೌಟ ಪಾಲ್ಗೊಂಡಿದ್ದರು  ಪ್ರಜಾವಾಣಿ ಚಿತ್ರ   

ಮಂಗಳೂರು: ದೇಶದ ಬಂದರುಗಳಲ್ಲಿ ಈಗ ಒಟ್ಟು 2700 ದಶಲಕ್ಷ ಟನ್ ಸರಕು ಸಾಗಾಟ ಆಗುತ್ತಿದ್ದು, ಅದನ್ನು 2047ರ ವೇಳೆಗೆ 10 ಸಾವಿರ ದಶಲಕ್ಷ ಟನ್‌ಗೆ ಏರಿಸುವ ಗುರಿ ಇದೆ ಎಂದು ಕೇಂದ್ರ ಬಂದರು, ನೌಕಾ ಮತ್ತು ಜಲಯಾನ ಸಚಿವ ಸರ್ಬಾನಂದ ಸೋನೊವಾಲ್‌ ತಿಳಿಸಿದರು.

ಗುರುವಾರ ಇಲ್ಲಿ ನಡೆದ ನವಮಂಗಳೂರು ಬಂದರು ಪ್ರಾಧಿಕಾರದ (ಎನ್‌ಎಂಪಿಎ) ಸುವರ್ಣ ಮಹೋತ್ಸವ ‘ಸಮುದ್ರದಿಂದ ಸಮೃದ್ಧಿಯತ್ತ’ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು.

ಪಶ್ಚಿಮ ಕರಾವಳಿಯ ಪ್ರಮುಖ ಬಂದರು ಮಂಗಳೂರಿನಲ್ಲಿದ್ದು ಇಲ್ಲಿ ಸದ್ಯ 46 ದಶಲಕ್ಷ ಟನ್ ಸರಕು ಸಾಗಾಟ ಆಗುತ್ತಿದೆ. ಇದನ್ನು 100 ದಶಲಕ್ಷ ಟನ್‌ಗೆ ಏರಿಸಲು ಸಾಧ್ಯವಿದೆ. ಪೂರ್ವ ಮತ್ತು ಪಶ್ಚಿಮ ಕರಾವಳಿಯನ್ನು ಒಂದೇ ವ್ಯವಸ್ಥೆಯ ಅಡಿಗೆ ತರುವ ಪ್ರಯತ್ನ ನಡೆಯುತ್ತಿದೆ. ಇದು ಸಾಧ್ಯವಾದರೆ ಸರಕು ಸಾಗಣೆಯ ಗುಣಮಟ್ಟ ಇನ್ನಷ್ಟು ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು. 

ADVERTISEMENT

ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ 2047ರಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲೂ ಸ್ವಂತಶಕ್ತಿಯ ಮೇಲೆ ನಿಲ್ಲಬೇಕು. ಅದಕ್ಕಾಗಿ ಎಲ್ಲ ಸಚಿವಾಲಯಗಳಿಗೂ ಗುರಿಯನ್ನು ನೀಡಲಾಗಿದೆ. ಮೆರಿಟೈಮ್ ಕ್ಷೇತ್ರದಲ್ಲಿ ₹80 ಲಕ್ಷ ಕೋಟಿ ಹೂಡಿಕೆ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಇದರಿಂದ ಭವಿಷ್ಯದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದರು. 

ಶಾಸಕರಾದ ಡಾ.ವೈ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‌, ಶಿಪ್ಪಿಂಗ್ ಮಹಾನಿರ್ದೇಶಕ ಶ್ಯಾಮ್ ಜಗನ್ನಾಥ್, ಎನ್‌ಎಂಪಿಎ ಅಧ್ಯಕ್ಷ ವೆಂಕಟರಮಣ ಅಕ್ಕರಾಜು, ಉಪಾಧ್ಯಕ್ಷೆ ಶಾಂತಿ ಪಾಲ್ಗೊಂಡಿದ್ದರು. 

ಕರ್ನಾಟಕ ಗೇರು ಬೆಳೆಗಾರರ ಸಂಘದ ಅಧ್ಯಕ್ಷ ಎ.ಕೆ ರಾವ್ ಮಾತನಾಡಿ ಗೇರುಬೀಜ ಕ್ಷೇತ್ರದಲ್ಲಿ 70ರಿಂದ 80 ಸಾವಿರ ಮಹಿಳೆಯರು ತೊಡಗಿಸಿಕೊಂಡಿದ್ದಾರೆ ಎಂದರು. ಪೊಲೀಸ್ ಇಲಾಖೆಗೆ 3 ವಾಹನ, ಶಾಲೆಗೆ ಬಸ್, ಅಂಗವಿಕಲ ವ್ಯಕ್ತಿಗೆ ತ್ರಿಚಕ್ರ ವಾಹನ, ಎರಡು ಸಂಸ್ಥೆಗಳಿಗೆ ಆಂಬುಲೆನ್ಸ್ ನೀಡಲಾಯಿತು. ಎನ್‌ಎಂಪಿಎಯಲ್ಲಿ ಆರಂಭಿಸಲಿರುವ ಒಟ್ಟು ₹ 1500 ಕೋಟಿ ಮೊತ್ತದ 20 ಯೋಜನೆಗಳಿಗೆ ಚಾಲನೆ ನೀಡಲಾಯಿತು. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳನ್ನು ಗೌರವಿಸಲಾಯಿತು.

‘ವೈವಿಧ್ಯಮಯ’ ಸಂಭ್ರಮ 

ನೃತ್ಯ, ನೃತ್ಯರೂಪಕ ಮತ್ತು ಗಾಯನದ ಸೊಬಗು, ವಿವಿಧ ಭಾಷೆಗಳ ಸೊಗಡಿನ ನಡುವೆ ರಾಣಿ ಅಬ್ಬಕ್ಕಳ ಗುಣಗಾನ, ಕರಾವಳಿ ಕರ್ನಾಟಕದ ಬಣ್ಣನೆಯೊಂದಿಗೆ ಎನ್‌ಎಂಪಿಯ ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆ ಅನಾವರಣಗೊಂಡಿತು. 

ತುಳು, ಕನ್ನಡದೊಂದಿಗೆ ಹಿಂದಿ, ಸಂಸ್ಕೃತ, ಅಸ್ಸಾಮಿ ಭಾಷೆ ಅನುರಣಿಸಿತು. ‘ವಂದೇ ಮಾತರಂ’ ಮತ್ತು ನಾಡಗೀತೆ ಹಾಡಿದ ಶ್ವೇತವಸ್ತ್ರಧಾರಿಯರು ‘ಏ ಮಾಟಿರೇ ಮೋರೊ ಮೋಟೆ..’ ಹಾಡಿ ಅಸ್ಸಾಂನವರಾದ ಸರ್ಬಾನಂದ ಅವರನ್ನು ಮುದಗೊಳಿಸಿದರು.  

ಸ್ವಾಗತ ಮಾಡಿದ ಎನ್‌ಎಂಪಿಎ ಅಧ್ಯಕ್ಷ, ಆಂಧ್ರದವರಾದ ವೆಂಕಟರಮಣ ಅಕ್ಕರಾಜು ತುಳುವಿನಲ್ಲೇ ಮಾತನಾಡಿದರು. ಆಗಾಗ ಕನ್ನಡದ ಕಾವ್ಯಾತ್ಮಕ ಸಾಲುಗಳನ್ನೂ ಉಲಿದು ಸಹೋದ್ಯೋಗಿಗಳೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದರು. ಆಗೊಮ್ಮೆ ಈಗೊಮ್ಮೆ ಸಂಸ್ಕೃತವನ್ನೂ ಮಿಶ್ರ ಮಾಡಿದರು. ಅಸ್ಸಾಮಿ ಭಾಷೆಯಲ್ಲೂ ಮಾತನಾಡಿದರು. ಸರ್ಬಾನಂದ ತುಳುವಿನಲ್ಲಿ ಎಲ್ಲರಿಗೂ ‘ಸೊಲ್ಮೆ’ ಹೇಳಿದರು.  

- ‘ಮೆರಿಟೈಮ್ ವಿವಿ ಸ್ಥಾಪನೆಯಾಗಲಿ’

ಶಿಕ್ಷಣ ಕಾಶಿಯಾಗಿರುವ ಮಂಗಳೂರಿನಲ್ಲಿ ಮೆರಿಟೈಮ್ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕೇಂದ್ರ ಸಚಿವರನ್ನು ಕೋರಿದರು. ಶಿರಾಡಿ ಘಾಟ್‌ನಲ್ಲಿ ರೈಲು ಮತ್ತು ರಸ್ತೆಯನ್ನು ಒಳಗೊಂಡ ಸಂಯೋಜಿತ ಅಭಿವೃದ್ಧಿ ಯೋಜನೆ ಮಾಡಿದರೆ ಮಂಗಳೂರು ಬಂದರು ಹೊಸ ದಿಶೆಯಲ್ಲಿ ಸಾಗಲಿದೆ ಎಂದರು.  ನವಮಂಗಳೂರು ಬಂದರು ನಿಗಮ ಹಡಗುಗಳ ತಂಗುದಾಣ ಮಾತ್ರವಲ್ಲ ಭಾರತದ ಅಭಿವೃದ್ಧಿಯ ನಿಲ್ದಾಣ ಕೂಡ ಆಗಿದೆ. ಇದು ಶೇಕಡ 100 ಸೌರ ಬಂದರು ಮತ್ತು ಭ್ರಷ್ಟಾಚಾರ ರಹಿತ ಬಂದರು ಎಂದು ವೆಂಕಟರಮಣ ಅಕ್ಕರಾಜು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.