
ದಾವಣಗೆರೆ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಅಶೋಕ್ ಕುಮಾರ್ ಪಾಳೇದ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಕರೆಣ್ಣವರ, ‘ಪ್ರಜಾವಾಣಿ’ ಬ್ಯೂರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ, ಸಾಮಾಜಿಕ ಕಾರ್ಯಕರ್ತ ಬಿ.ಎಂ. ನಿರಂಜನ್ ಪಾಲ್ಗೊಂಡಿದ್ದರು
–ಪ್ರಜಾವಾಣಿ ಚಿತ್ರ
ಭಾರತವು ‘ರಾಜ್ಯಗಳ ಒಕ್ಕೂಟ’ (Union of States) ಎಂಬುದನ್ನು ಸಂವಿಧಾನ ಸ್ಪಷ್ಟಪಡಿಸಿದೆ. ‘ಭಾರತೀಯ ಸಂವಿಧಾನ’ದ ಮೊದಲ ವಿಧಿಯಲ್ಲಿಯೇ ಈ ಉಲ್ಲೇಖವಿದೆ. ಕೇಂದ್ರ ಮತ್ತು ರಾಜ್ಯ ಎಂಬ ಎರಡು ಹಂತದ ಆಡಳಿತ ವ್ಯವಸ್ಥೆ ದೇಶದಲ್ಲಿದೆ. ಒಕ್ಕೂಟ ವ್ಯವಸ್ಥೆ ಸುಗಮವಾಗಿ ಸಾಗಲು ಕೇಂದ್ರ, ರಾಜ್ಯ ಹಾಗೂ ಸಮವರ್ತಿ ಪಟ್ಟಿಯಲ್ಲಿ ಅಧಿಕಾರ ವರ್ಗೀಕರಿಸಲಾಗಿದೆ.
ಸಂವಿಧಾನ ರಚನಾ ಸಮಿತಿ 1949ರ ನ.26ರಂದು ಒಕ್ಕೂಟ ವ್ಯವಸ್ಥೆಗೆ ಸಮ್ಮತಿ ಸೂಚಿಸಿತು. 1950 ಜ.26ರಂದು ಸಂವಿಧಾನ ಅನುಷ್ಠಾನಗೊಂಡಿತು. ಅಂದಿನಿಂದಲೇ ಒಕ್ಕೂಟ ವ್ಯವಸ್ಥೆಗೆ ಸಾಂವಿಧಾನಿಕ ಮುದ್ರೆ ಸಿಕ್ಕಿತು. ‘ರಾಜ್ಯಗಳ ಒಕ್ಕೂಟ’ವು ದೇಶದ ಸಮಗ್ರತೆಯನ್ನು ರಕ್ಷಿಸಿ, ‘ವೈವಿಧ್ಯದಲ್ಲಿ ಏಕತೆ’ಯನ್ನು ಕಾಪಾಡಿಕೊಳ್ಳಲು ರೂಪಿಸಿದ ವಿಶಿಷ್ಟ ವ್ಯವಸ್ಥೆಯಾಗಿದೆ. ಹರಿದು ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸಲು ಸಾಧ್ಯವಾಗಿದೆ. ಏಕತೆ, ದೇಶ ಭಕ್ತಿ ಮೊಳೆಯಲು ಚಾಲಕ ಶಕ್ತಿಯಾಗಿದೆ.
ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಯಾಗಿ ಹಿಡಿದಿಟ್ಟಿದ್ದು ಸಂವಿಧಾನ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ರಾಜಕೀಯ, ಆರ್ಥಿಕ, ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಸಂಘರ್ಷಗಳು ನಡೆದಿದ್ದರೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಂತೆ ಕಾಪಾಡಿದೆ. ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಗೆಲ್ಲುವುದಕ್ಕೆ ಸಂವಿಧಾನದ ಕೊಡುಗೆ ಅನನ್ಯ. ‘ರಾಜ್ಯಗಳ ಒಕ್ಕೂಟ’ದಲ್ಲಿ ಪ್ರತಿ ರಾಜ್ಯ ತನ್ನದೇ ಆಗಿರುವ ಅಸ್ಮಿತೆ, ಅನನ್ಯತೆ ಹಾಗೂ ಸಂಪನ್ಮೂಲ ಕಾಪಾಡಿಕೊಳ್ಳುವ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ.
1947ರ ಆ.15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ದೇಶದೊಳಗಿನ 570ಕ್ಕೂ ಹೆಚ್ಚು ಸಂಸ್ಥಾನಗಳಲ್ಲಿ ರಾಜಾಡಳಿತವಿತ್ತು. ಭಾರತದಲ್ಲಿ ತಮ್ಮ ಸಂಸ್ಥಾನಗಳನ್ನು ವಿಲೀನಗೊಳಿಸಲು ಅನೇಕರು ಹಿಂದೇಟು ಹಾಕಿದರು. ಈ ಸಂಸ್ಥಾನಗಳನ್ನು ಒಗ್ಗೂಡಿಸಿ ಭಾರತೀಯತೆಯ ಸ್ವರೂಪ ನೀಡುವುದು ಆರಂಭದಲ್ಲಿ ಸವಾಲಾಗಿತ್ತು. ಒಂದೊಂದೆ ಸಂಸ್ಥಾನಗಳನ್ನು ವಿಶ್ವಾಸಕ್ಕೆ ಪಡೆದು ಒಕ್ಕೂಟ ವ್ಯವಸ್ಥೆಗೆ ಸೇರಿಸುವ ಪ್ರಯತ್ನ ಜಾಗರೂಕತೆಯಿಂದ ಸಾಗಿತು. ಭಾಷಾವಾರು ರಾಜ್ಯ ರಚನೆ ದೇಶದ ಒಕ್ಕೂಟ ವ್ಯವಸ್ಥೆಯನ್ನು ಭದ್ರಪಡಿಸಿತು. ಈ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಜೊತೆಗೆ ಕೇಂದ್ರಾಡಳಿತ ಪ್ರದೇಶಗಳೂ ಇವೆ.
ದೇಶದಲ್ಲಿ ಖನಿಜ ಸಂಪತ್ತು ಹೇರಳವಾಗಿದೆ. ಒಡಿಶಾ, ಮಹಾರಾಷ್ಟ್ರದಲ್ಲಿ ಕಲ್ಲಿದ್ದಲು, ಕರ್ನಾಟಕದಲ್ಲಿ ಕಬ್ಬಿಣದ ಅದಿರು ಲಭ್ಯವಿವೆ. ಪರಿಸರವನ್ನು ಕಾಪಾಡಿಕೊಂಡು ಸಂಪತ್ತು ಅನುಭವಿಸಬೇಕಿದೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ. ಭವಿಷ್ಯದ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಣಕಾಸು, ಜಲ, ಗಣಿ ಸೇರಿದಂತೆ ದೇಶದ ಸಂಪನ್ಮೂಲಗಳ ಹಂಚಿಕೆಯಾಗಿದೆ. ಸಂವಿಧಾನವು ಸ್ಪಷ್ಟ ಮಾರ್ಗದರ್ಶನ ಕೂಡ ನೀಡಿದೆ.
ದಾವಣಗೆರೆ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಅಶೋಕ್ ಕುಮಾರ್ ಪಾಳೇದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಕರೆಣ್ಣವರ ‘ಪ್ರಜಾವಾಣಿ’ ಬ್ಯೂರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ಪೂರ್ವ ವಲಯದ ಐಜಿಪಿ ಬಿ.ಆರ್. ರವಿಕಾಂತೇಗೌಡ ಮತ್ತು ಸಾಮಾಜಿಕ ಕಾರ್ಯಕರ್ತ ಬಿ.ಎಂ. ನಿರಂಜನ್ ಪಾಲ್ಗೊಂಡಿದ್ದರು
ದೇಶವೊಂದರ ಇತಿಹಾಸದಲ್ಲಿ 7 ದಶಕಗಳು ಕಡಿಮೆಯ ಕಾಲಾವಧಿ. ಆದರೆ ಸಂವಿಧಾನದ ದೃಷ್ಟಿಯಿಂದ ಅತ್ಯಂತ ಮಹತ್ವದ ಕಾಲಘಟ್ಟ. ಎಲ್ಲರನ್ನೂ ಒಗ್ಗೂಡಿಸಿ ಇಟ್ಟಿರುವ ಶಕ್ತಿ ಸಂವಿಧಾನ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಂತೆ ಕಾಪಾಡಿದ್ದು ಸಂವಿಧಾನ.– ಬಿ.ಆರ್. ರವಿಕಾಂತೇಗೌಡ, ಐಜಿಪಿ ಪೂರ್ವ ವಲಯ
ಸಂವಿಧಾನದ ಅಡಿಯಲ್ಲಿ ರಚನೆಯಾದ ಕಾನೂನುಗಳನ್ನು ಅರ್ಥೈಸುವ ಅನುಷ್ಠಾನದ ಮೇಲೆ ನಿಗಾ ಇಡುವುದು ಹಾಗೂ ದೇಶದ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ದಾರಿ ನ್ಯಾಯಾಂಗಕ್ಕಿದೆ..– ಮಹಾವೀರಕರೆಣ್ಣವರ, ಹಿರಿಯ ಸಿವಿಲ್ ನ್ಯಾಯಾಧೀಶರು
ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಇದ್ದರೆ ಉತ್ತಮ ಎಂಬುದು ಬ್ರಿಟಿಷರ ಅಭಿಪ್ರಾಯವೂ ಆಗಿತ್ತು. ಕೇಂದ್ರೀಕೃತ ವ್ಯವಸ್ಥೆ ಸೂಕ್ತವೆಂಬ ಅಭಿಪ್ರಾಯ ಸ್ವಾತಂತ್ರ್ಯ ಪೂರ್ವದಲ್ಲಿತ್ತು. ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳು ಒಕ್ಕೂಟ ವ್ಯವಸ್ಥೆಯತ್ತ ಒಲವು ಮೂಡಿಸಿತು.– ಅಶೋಕ್ ಕುಮಾರ್ ಪಾಳೇದ, ಮುಖ್ಯಸ್ಥರು ರಾಜ್ಯಶಾಸ್ತ್ರ ವಿಭಾಗ ದಾವಣಗೆರೆ ವಿಶ್ವವಿದ್ಯಾಲಯ
ಕೇಂದ್ರ ಸರ್ಕಾರ ಅಗತ್ಯ ಇರುವ ರಾಜ್ಯಗಳನ್ನು ಗಮನಿಸಿ ಹಣಕಾಸು ನೆರವು ನೀಡುತ್ತದೆ. ಪ್ರಧಾನ ಖನಿಜ ಸಂಪತ್ತು ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಜಲ್ಲಿಕಲ್ಲು ಮರಳು ಮಾತ್ರವೇ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಖನಿಜ ಸಂಪತ್ತಿನ ಮೇಲೆ ಕೇಂದ್ರಕ್ಕೆ ಹೆಚ್ಚು ಹಿಡಿತವಿದೆ.– ಬಿ.ಎಂ. ನಿರಂಜನ, ಸಾಮಾಜಿಕ ಕಾರ್ಯಕರ್ತರು
ಒಕ್ಕೂಟ ವ್ಯವಸ್ಥೆ: ಸಂವಾದ
‘ಒಕ್ಕೂಟ ವ್ಯವಸ್ಥೆ ಮತ್ತು ಸಂಪನ್ಮೂಲ (ಹಣಕಾಸು ಜಲ ಗಣಿ) ಹಂಚಿಕೆ - ಆಗುತ್ತಿರುವುದೇನು?’ ಎಂಬ ವಿಷಯದ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹ ಸಂಸ್ಥೆಯ ಸಹಯೋಗದಲ್ಲಿ ದಾವಣಗೆರೆಯಲ್ಲಿ ಸಂವಾದ ನಡೆಯಿತು. ‘ಸಂವಿಧಾನವೇ ಬೆಳಕು– ಒಂದು ಚರ್ಚೆ’ ವಿಷಯದ ಭಾಗವಾಗಿ ನಡೆದ ಸಂವಾದದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಕರೆಣ್ಣವರ ಪೂರ್ವ ವಲಯದ ಐಜಿಪಿ ಬಿ.ಆರ್. ರವಿಕಾಂತೇಗೌಡ ದಾವಣಗೆರೆ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಅಶೋಕಕುಮಾರ್ ಪಾಳೇದ ಹಾಗೂ ಸಾಮಾಜಿಕ ಕಾರ್ಯಕರ್ತ ಬಿ.ಎಂ. ನಿರಂಜನ್ ಸಂವಾದದಲ್ಲಿ ಪಾಲ್ಗೊಂಡಿದ್ದ ಪ್ರಮುಖರು. ‘ಪ್ರಜಾವಾಣಿ’ ದಾವಣಗೆರೆ ಬ್ಯೂರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ಸಂವಾದದ ಸಂವಹನಕಾರರಾಗಿದ್ದರು.
ಚರ್ಚೆಯ ಪ್ರಮುಖ ಅಂಶಗಳು
* ಸ್ವಾತಂತ್ರ್ಯ ಪೂರ್ವದ 1935ರ ‘ಭಾರತ ಸರ್ಕಾರದ ಕಾಯ್ದೆ’ ಒಕ್ಕೂಟ ವ್ಯವಸ್ಥೆಯ ಕುರಿತ ಚರ್ಚೆಯನ್ನು ಮುನ್ನೆಲೆಗೆ ತಂದಿತು. ಆಗ ಭಾರತದಲ್ಲಿ ಪ್ರಾಂತೀಯ ಮತ್ತು ಕೇಂದ್ರೀಯ ವ್ಯವಸ್ಥೆ ಜಾರಿಯಲ್ಲಿತ್ತು.
* 1946ರಲ್ಲಿ ಮೀರಠ್‌ನಲ್ಲಿ ನಡೆದ ಭಾರತೀಯ ಕಾಂಗ್ರೆಸ್ ಅಧಿವೇಶನದಲ್ಲಿ ಜವಾಹರಲಾಲ್ ನೆಹರೂ ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದಂತೆ ನಿರ್ಣಯ ಮಂಡಿಸಿದರು.
* ಸಂವಿಧಾನವು ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ವ್ಯವಸ್ಥೆ ರೂಪಿಸಿದೆ. ನ್ಯಾಯಾಂಗ ಸ್ವತಂತ್ರವಾಗಿದ್ದು ಕೇಂದ್ರ ಮತ್ತು ರಾಜ್ಯಗಳ ನಡುವೆ ಮೂಡುವ ಗೊಂದಲ ವ್ಯಾಜ್ಯಗಳನ್ನು ಬಗೆಹರಿಸುವ ಜವಾಬ್ದಾರಿ ಹೊಂದಿದೆ.
* ಒಕ್ಕೂಟ ವ್ಯವಸ್ಥೆಗೆ ಅಪಾಯ ಎದುರಾಗುವ ಸಂದರ್ಭ ತೀರಾ ವಿರಳ. ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆ ಸಬಲವಾಗಿದೆ. ಲಿಖಿತ ಸಂವಿಧಾನದಲ್ಲಿ ಈ ಬಗ್ಗೆ ಸ್ಪಷ್ಟತೆ ಇದೆ.
* ನೇರ ತೆರಿಗೆ ಪರೋಕ್ಷ ತೆರಿಗೆ ಖನಿಜ ಸಂಪನ್ಮೂಲಗಳ ಹಂಚಿಕೆಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಸ್ಥೂಲವಾದ ಮಾರ್ಗದರ್ಶನವಿದೆ.
* ಖನಿಜ ಜಲಸಂಪನ್ಮೂಲ ಸೇರಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸೃಷ್ಟಿಯಾಗುವ ವಿವಾದಗಳನ್ನು ಬಗೆಹರಿಸಿಕೊಳ್ಳುವ ಅವಕಾಶ ಪ್ರತಿ ರಾಜ್ಯಕ್ಕೂ ಇದೆ. ಸಂವಿಧಾನದ ಕೆಲ ವಿಧಿಗಳು ಕೇಂದ್ರಕ್ಕೆ ಹೆಚ್ಚು ಅಧಿಕಾರವನ್ನು ನೀಡಿವೆ.
* ಗಡಿ ಜಲ ವಿವಾದಗಳ ಪರಿಹಾರಕ್ಕೆ ಒಕ್ಕೂಟ ವ್ಯವಸ್ಥೆ ಶ್ರಮಿಸಿದೆಯೇ ಹೊರತು ಉಲ್ಬಣಗೊಳಿಸಿಲ್ಲ. ಅಸಮಾಧಾನ ಸ್ಫೋಟಗೊಂಡು ಪ್ರಜಾಪ್ರಭುತ್ವಕ್ಕ ಧಕ್ಕೆ ಆಗುವುದನ್ನು ಒಕ್ಕೂಟ ವ್ಯವಸ್ಥೆ ತಡೆದಿದೆ. ಸಂಸತ್ತು ನ್ಯಾಯಮಂಡಳಿಗಳು ಹಾಗೂ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸುವ ಮೂಲಕ ರಾಜ್ಯಗಳಿಗೆ ಸಮಾನವಾಗಿ ಜಲ ಮತ್ತು ಖನಿಜ ಸಂಪತ್ತಿನ ಹಂಚಿಕೆ ಆಗುವಂತೆ ನೋಡಿಕೊಳ್ಳುತ್ತಿವೆ.
* ಖನಿಜ ರಾಷ್ಟ್ರೀಯ ಸಂಪತ್ತು. ರಾಜ್ಯ ಸರ್ಕಾರಗಳಿಗೂ ಸಂಪನ್ಮೂಲದಲ್ಲಿ ಪಾಲಿದೆ. ರಾಷ್ಟ್ರದ ಹಿತಾಸಕ್ತಿ ಗಮನಿಸಿ ಸಂಪನ್ಮೂಲ ಬಳಕೆ ಆಗಬೇಕು ಎಂಬುದು ಸಂವಿಧಾನದ ಆಶಯ. ರಾಷ್ಟ್ರದ ಅಭಿವೃದ್ಧಿ ಹಾಗೂ ಸ್ಥಳೀಯ ಸುಸ್ಥಿರತೆ ಎರಡೂ ಮುಖ್ಯ.
* ಸಂವಿಧಾನ ಸ್ಥಾವರವಲ್ಲ ಚಲನಶೀಲ. ಶರಣರು ಹೇಳಿದಂತೆ ಸಂವಿಧಾನ ಜಂಗಮ ತತ್ವ ಪಾಲಿಸುತ್ತಿದೆ. ಒಕ್ಕೂಟ ವ್ಯವಸ್ಥೆಯ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.